Fighter: ಭಾರತದ ದೇಶಭಕ್ತಿ ಸಿನಿಮಾವನ್ನು ಫ್ಲಾಪ್ ಶೋ ಎಂದ ಪಾಕ್ ನಟ; ‘ಫೈಟರ್’ ಚಿತ್ರಕ್ಕೆ ಅವಮಾನ
ಅದ್ನನ್ ಸಿದ್ಧಿಖಿ ಅವರು ಬಾಲಿವುಡ್ ಸಿನಿಮಾಗಳ ಬಗ್ಗೆ ತಕರಾರು ಎತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಮೊದಲು ಕೂಡ ಅವರು ಹಿಂದಿ ಸಿನಿಮಾಗಳನ್ನು ಟೀಕಿಸಿದ್ದರು. ಈಗ ಮತ್ತೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೃತಿಕ್ ರೋಷನ್ ನಟನೆಯ ‘ಫೈಟರ್’ ಸಿನಿಮಾವನ್ನು ಅವರು ಖಂಡಿಸಿದ್ದಾರೆ. ಈ ಚಿತ್ರವನ್ನು ಅವರು ಫ್ಲಾಪ್ ಶೋ ಎಂದು ಜರಿದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಕಿರಿಕ್ ಇಂದು-ನಿನ್ನೆಯದಲ್ಲ. ಅದರ ಎಫೆಕ್ಟ್ ಚಿತ್ರರಂಗದ ಮೇಲೂ ಆಗಿದೆ. ಭಾರತದ ಸಿನಿಮಾಗಳನ್ನು ಪಾಕ್ ಸಿನಿಮಂದಿ ಖಂಡಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಫೈಟರ್’ (Fighter Movie) ಸಿನಿಮಾಗೆ ಪಾಕಿಸ್ತಾನದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬುದು ಅಲ್ಲಿನ ಸೆಲೆಬ್ರಿಟಿಗಳ ವಾದ. ಪಾಕ್ ನಟ ಅದ್ನನ್ ಸಿದ್ಧಿಖಿ (Adnan Siddiqui) ಅವರು ‘ಫೈಟರ್’ ಸಿನಿಮಾವನ್ನು ಫ್ಲಾಪ್ ಶೋ ಎಂದು ಕರೆದಿದ್ದಾರೆ. ಈ ಸಿನಿಮಾದಲ್ಲಿ ಭಾರತದ ವಾಯು ಸೇನೆಯ ಯುದ್ಧ ವಿಮಾನಗಳ ಸಾಹಸವನ್ನು ತೋರಿಸಲಾಗಿದೆ. ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಪಾಕಿಸ್ತಾನದಲ್ಲಿ ನಟ ಅದ್ನನ್ ಸಿದ್ಧಿಖಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನ ‘ಮಾಮ್’ ಸಿನಿಮಾದಲ್ಲಿ ನಟಿಸುವ ಮೂಲಕ ಭಾರತೀಯ ಪ್ರೇಕ್ಷಕರಿಗೂ ಅವರು ಪರಿಚಿತರಾಗಿದ್ದಾರೆ. ಈಗ ಅವರು ‘ಫೈಟರ್’ ಸಿನಿಮಾವನ್ನು ಟೀಕಿಸಿದ್ದಾರೆ. ‘ಫ್ಲಾಪ್ ಶೋ ಬಳಿಕ ಫೈಟರ್ ಸಿನಿಮಾ ತಂಡದವರು ಕಲಿಯಬೇಕಿರುವ ಒಂದು ಪಾಠ ಇದು. ನಿಮ್ಮ ಪ್ರೇಕ್ಷಕರ ಬುದ್ಧಿವಂತಿಕೆಯನ್ನು ಅವಮಾನಿಸಬೇಡಿ. ನಿಮ್ಮ ಅಜೆಂಡಾ ಅವರಿಗೆ ತಿಳಿಯುತ್ತದೆ. ಮನರಂಜನೆಯು ಅನಗತ್ಯವಾದ ರಾಜಕೀಯದಿಂದ ಹೊರಗಿರಲಿ’ ಎಂದು ಅದ್ನನ್ ಸಿದ್ಧಿಖಿ ಟ್ವೀಟ್ ಮಾಡಿದ್ದಾರೆ.
ಅದ್ನನ್ ಸಿದ್ಧಿಖಿ ಟ್ವೀಟ್:
A lesson to heed for Fighter team after your flop show: Do not insult your audience’s intelligence. They can discern agendas. Let entertainment be free from unnecessary politics.
— Adnan Siddiqui (@adnanactor) January 31, 2024
ಈ ಮೊದಲು ಕೂಡ ಅದ್ನನ್ ಸಿದ್ಧಿಖಿ ಅವರು ಬಾಲಿವುಡ್ ಸಿನಿಮಾಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಒಂದು ಕಾಲದಲ್ಲಿ ಪ್ರೀತಿಯನ್ನು ಸಂಭ್ರಮಿಸುತ್ತಿದ್ದ ಹಿಂದಿ ಚಿತ್ರರಂಗ ಈಗ ದ್ವೇಷ ತುಂಬಿದ ಕಥೆಗಳಿಂದ ನಮ್ಮನ್ನು ವಿಲನ್ ರೀತಿ ಬಿಂಬಿಸುತ್ತಿದೆ. ನಿಮ್ಮ ಸಿನಿಮಾಗಳಿಗೆ ನಾವು ಪ್ರೀತಿ ತೋರಿಸಿದ ನಂತರವೂ ಈ ರೀತಿ ಆಗಿರುವುದು ನೋವು ತಂದಿದೆ. ಗಡಿಗಳನ್ನು ದಾಟಿ ಕಲೆ ಸಾಗುತ್ತದೆ. ಪ್ರೀತಿ ಮತ್ತು ಶಾಂತಿಯನ್ನು ಸಾರಲು ಈ ಕಲೆಯನ್ನು ಬಳಸೋಣ. ರಾಜಕೀಯದ ಬಲಿಪಶು ಆಗಿರುವ ಎರಡು ದೇಶಗಳ ಜನರಿಗೆ ಉತ್ತಮವಾದ ಬದುಕು ಸಿಗಬೇಕಿದೆ’ ಎಂದು ಅದ್ನನ್ ಸಿದ್ಧಿಖಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ‘ಫೈಟರ್’ ಸಿನಿಮಾ ಗಳಿಕೆ ಕಡಿಮೆ ಆಗಲು ಕಾರಣ ಏನು? ವಿವರಿಸಿದ ನಿರ್ದೇಶಕ ಸಿದ್ದಾರ್ಥ್
ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ. ವಿಶ್ವಾದ್ಯಂತ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಿದೆ. ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಿರುವುದರಿಂದ ಹಾಗೂ ದೊಡ್ಡ ದೊಡ್ಡ ಕಲಾವಿದರು ನಟಿಸಿರುವುದರಿಂದ ಈ ಕಲೆಕ್ಷನ್ ಸಾಧಾರಣ ಎನಿಸುತ್ತಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇದು ಬಿಡುಗಡೆ ಆಗಿದ್ದರೂ ಕೂಡ ಅಂದುಕೊಂಡ ಮಟ್ಟದಲ್ಲಿ ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಭಾರತದ ಬಾಕ್ಸ್ ಆಫೀಸ್ನಲ್ಲಿ ಇದರ ಕಲೆಕ್ಷನ್ ಕೇವಲ 143 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ