ನಟ ಪಂಕಜ್ ತ್ರಿಪಾಠಿ (Pankaj Tripathi) ಅವರ ಪ್ರತಿಭೆ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಈಗಾಗಲೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಪೋಷಕ ಪಾತ್ರಗಳ ಮೂಲಕ ಪಂಕಜ್ ತ್ರಿಪಾಠಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಕುರಿತು ತಯಾರಾಗುತ್ತಿರುವ ಬಯೋಪಿಕ್ನಲ್ಲಿ ಮುಖ್ಯ ಪಾತ್ರ ನಿಭಾಯಿಸಲು ಪಂಕಜ್ ತ್ರಿಪಾಠಿಗೆ ಅಫರ್ ನೀಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಕೆಲವೇ ದಿನಗಳ ಹಿಂದೆ ಈ ಬಯೋಪಿಕ್ (Biopic) ಬಗ್ಗೆ ಘೋಷಣೆ ಆಗುತ್ತು. ಈಗ ಪಾತ್ರವರ್ಗದ ಆಯ್ಕೆ ಬಗ್ಗೆ ಗುಸುಗುಸು ಕೇಳಿಬಂದಿದೆ.
ಬಯೋಪಿಕ್ನಲ್ಲಿ ನಟಿಸಿರುವುದು ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿ ಅವರಂತಹ ವ್ಯಕ್ತಿಗಳ ಪಾತ್ರದಲ್ಲಿ ನಟಿಸುವುದು ಎಂದರೆ ಸುಲಭವಲ್ಲ. ಹಾಗಾಗಿ ಅದಕ್ಕೆ ಸೂಕ್ತ ಆಗುವಂತಹ ನಟರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಪಂಕಜ್ ತ್ರಿಪಾಠಿ ಆಯ್ಕೆ ಕುರಿತು ನಿರ್ಮಾಪಕರು ಇನ್ನಷ್ಟೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಈ ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಅಟಲ್’ ಎಂದು ಈ ಸಿನಿಮಾಗೆ ಹೆಸರು ಇಡಲಾಗಿದೆ. ‘ಮೇ ರಹೂ ಯಾ ನಾ ರಹೂ ಯೇ ದೇಶ್ ರೆಹ್ನಾ ಚಾಹಿಯೇ: ಅಟಲ್’ ಎಂಬುದು ಈ ಚಿತ್ರದ ಪೂರ್ತಿ ಶೀರ್ಷಿಕೆ. ‘ನಾನು ಇರಲಿ, ಇಲ್ಲದೇ ಇರಲಿ. ಈ ದೇಶ ಇರಬೇಕು’ ಎಂಬುದು ಈ ವಾಕ್ಯದ ಅರ್ಥ. ದೇಶದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದ ದೂರದೃಷ್ಟಿ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಉಲ್ಲೇಖ್ ಎನ್.ಪಿ. ಅವರು ಬರೆದ ‘The Untold Vajpayee: Politician and Paradox’ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ? ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿರುವುದು ಯಾರು? ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಸರೋಜಿನಿ ನಾಯ್ಡು ಬಯೋಪಿಕ್ನಲ್ಲಿ ಶಾಂತಿಪ್ರಿಯಾ, ಸೋನಲ್: ಪ್ಯಾನ್ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ
ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. 2023ರ ಆರಂಭದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ಅದೇ ವರ್ಷ ಕ್ರಿಸ್ಮಸ್ ಹಬ್ಬಕ್ಕೆ (ಡಿ.25) ಬಯೋಪಿಕ್ ರಿಲೀಸ್ ಆಗಲಿದೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನ ಎಂಬುದು ವಿಶೇಷ.