ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ರಿಲೀಸ್ ಆಗುತ್ತಿಲ್ಲ. ಆದರೆ ಒಟಿಟಿ ಮೂಲಕ ಅಲ್ಲಿನ ಪ್ರೇಕ್ಷಕರು ಭಾರತದ ಚಿತ್ರಗಳನ್ನು ನೋಡುತ್ತಾರೆ. ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಇತ್ತೀಚೆಗೆ ಒಟಿಟಿಗೆ ಕಾಲಿಟ್ಟಿತು. ಈ ಚಿತ್ರವನ್ನು ಪಾಕಿಸ್ತಾನಿ ಪ್ರೇಕ್ಷಕರು ನೋಡಿ, ವಿಮರ್ಶೆ ತಿಳಿಸುತ್ತಿದ್ದಾರೆ. ಪಾಕಿಸ್ತಾನದ ನಟ ಯಾಸಿರ್ ಹುಸೇನ್ ಅವರು ‘ಪಠಾಣ್’ (Pathaan Movie) ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಈ ಸಿನಿಮಾದಲ್ಲಿ ಕಥೆಯೇ ಇಲ್ಲ’ ಎಂದು ಅವರು ಜರಿದಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಿಂದ ಶಾರುಖ್ ವೃತ್ತಿಜೀವನಕ್ಕೆ ದೊಡ್ಡ ಬೂಸ್ಟ್ ಸಿಕ್ಕಿದೆ. ಆದರೆ ವಿಮರ್ಶೆ (Pathaan Movie Review) ವಿಚಾರದಲ್ಲಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಿಲ್ಲ.
ಯಾಸಿರ್ ಹುಸೇನ್ ಅವರು ಪಾಕಿಸ್ತಾನದಲ್ಲಿ ನಟನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ‘ಪಠಾಣ್’ ಸಿನಿಮಾ ವೀಕ್ಷಿಸಿದ್ದಾರೆ. ತಮ್ಮ ವಿಮರ್ಶೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಈಗಾಗಲೇ ನೀವು ಮಿಷನ್ ಇಂಪಾಸಿಬಲ್ ಚಿತ್ರವನ್ನು ನೋಡಿದ್ದೀರಿ ಎಂದಾದರೆ ನಿಮಗೆ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರವು ಒಂದು ಕಥೆಯಿಲ್ಲದ ವಿಡಿಯೋ ಗೇಮ್ ರೀತಿ ಅನಿಸುತ್ತದೆ. ಅದಕ್ಕಿಂತ ಹೆಚ್ಚೇನೂ ಇಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rani Mukherjee: ‘ಪಠಾಣ್’ ಚಿತ್ರವನ್ನೇ ಮೀರಿಸಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ರಾಣಿ ಮುಖರ್ಜಿ ನಟನೆಯ ಹೊಸ ಸಿನಿಮಾ
ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದಿಂದ ದೊಡ್ಡ ಲಾಭ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಈ ಚಿತ್ರದ ಬಗ್ಗೆ ಕೆಲವರು ತಕರಾರು ತೆಗೆದಿದ್ದರು. ಆದರೆ ನಂತರ ಚಿತ್ರದ ಸಕ್ಸಸ್ ಕಂಡು ವಿರೋಧಿಗಳು ಬಾಯಿ ಮುಚ್ಚಿಕೊಂಡರು. ವಿಶ್ವಾದ್ಯಂತ ಈ ಸಿನಿಮಾ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ.
ಇದನ್ನೂ ಓದಿ: Pathaan: 50 ದಿನ ಪೂರೈಸಿದ ‘ಪಠಾಣ್’; 20 ದೇಶದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ಶಾರುಖ್ ಸಿನಿಮಾ
‘ಪಠಾಣ್’ ಚಿತ್ರದ ಪ್ರದರ್ಶನಕ್ಕೆ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಅವಕಾಶ ಇಲ್ಲ. ಹಾಗಿದ್ದರೂ ಕೂಡ ಕೆಲವರು ಈ ಸಿನಿಮಾವನ್ನು ಕದ್ದುಮುಚ್ಚಿ ನೋಡಿದ್ದರು. ಕರಾಚಿಯಲ್ಲಿ ‘ಪಠಾಣ್’ ಸಿನಿಮಾವನ್ನು ಕಾನೂನು ಬಾಹಿರವಾಗಿ ಪ್ರದರ್ಶಿಸಲಾಗುತ್ತಿತ್ತು. ಆನ್ಲೈನ್ ಮೂಲಕ 900 ರೂಪಾಯಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿನ ಸೆನ್ಸಾರ್ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ‘ಪಠಾಣ್’ ಪ್ರದರ್ಶನವನ್ನು ಕೂಡಲೇ ನಿಲ್ಲಿಸಲಾಗಿತ್ತು.
ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಕೂಡ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:32 pm, Tue, 28 March 23