ತಮ್ಮ ಹೆಸರಿನ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರೀತಿ ಜಿಂಟಾ: ಹೆಸರಿನ ಗೊಂದಲವೇನು?
Preity Zinta: ನಟಿ ಪ್ರೀತಿ ಜಿಂಟಾ ಸಿನಿಮಾಗಳಿಂದ ದೂರವಾಗಿ ವರ್ಷಗಳಾಗಿವೆ. ಇತ್ತೀಚೆಗೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿರುವ ಪ್ರೀತಿ, ತಮ್ಮ ಹೆಸರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಟಿ ಪ್ರೀತಿ ಜಿಂಟಾ (Preity Zinta), ಬಾಲಿವುಡ್ನ (Bollywood) ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದವರು. 1994ರ ‘ದಿಲ್ ಸೇ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ನೀಡಿದ ಪ್ರೀತಿ ಜಿಂಟಾ ಅಲ್ಲಿಂದ ಹಿಂದಿರುಗಿ ನೋಡಿದ್ದಿಲ್ಲ. ಒಂದು ದಶಕದ ಕಾಲ ಬಾಲಿವುಡ್ನ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. 2009ರ ಬಳಿಕ ಅವಕಾಶಗಳು ಕಡಿಮೆಯಾದವರಾದರೂ ಆ ಬಳಿಕ ಉದ್ಯಮಿಯಾಗಿ ಹೊಸ ಜರ್ನಿ ಆರಂಭಿಸಿದರು. ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಳ್ಳುವ ಪ್ರೀತಿ ಜಿಂಟಾ, ಇನ್ಸ್ಟಾಗ್ರಾಂನಲ್ಲಿ ಹೊಸದೊಂದು ವಿಡಿಯೋ ಅಪ್ಲೋಡ್ ಮಾಡಿದ್ದು ತಮ್ಮ ಹೆಸರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರೀತಿ ಜಿಂಟಾ ತುಸು ಭಿನ್ನವಾದ ಹೆಸರು. ಇಂಗ್ಲೀಷ್ನಲ್ಲಿ ಭಿನ್ನವಾದ ಸ್ಪೆಲ್ಲಿಂಗ್ ಅನ್ನು ತಮ್ಮ ಹೆಸರಿಗೆ ಪ್ರೀತಿ ಬರೆದುಕೊಳ್ಳುತ್ತಾರೆ. ಪ್ರೀತಿ ಮೂಲತಃ ರಜಪೂತ ಕುಟುಂಬದವರು, ಆದರೆ ಅವರನ್ನು ಪಂಜಾಬಿ ಹುಡುಗಿ ಎಂದು ಹಲವರು ತಪ್ಪು ತಿಳಿದುಕೊಂಡಿದ್ದಾರೆ. ಪ್ರೀತಿಯ ಹೆಸರಿನ ಬಗ್ಗೆಯೂ ಆಗಾಗ್ಗೆ ಗೊಂದಲಗಳು ಏಳುತ್ತಲೇ ಇರುತ್ತವೆ. ಪ್ರೀತಿ ಜಿಂಟಾರ ಇನ್ನೊಂದು ಹೆಸರು ಪ್ರೀತಮ್ ಸಿಂಗ್ ಎಂದಾಗಿದೆ ಎಂದು ವಿಕಿಪೀಡಿಯಾ ಹಾಗೂ ಇನ್ನಿತರೆ ವೆಬ್ಸೈಟ್ಗಳಲ್ಲಿ ನಮೂದಾಗಿದೆ. ಆದರೆ ಅದು ಸುಳ್ಳು ಎಂದು ಪ್ರೀತಿ ಸ್ಪಷ್ಟನೆ ನೀಡಿದ್ದಾರೆ ಮಾತ್ರವಲ್ಲದೆ, ಪ್ರೀತಮ್ ಸಿಂಗ್ ಎಂಬ ಹೆಸರು ಹೇಗೆ ತಮಗೆ ಅಂಟಿಕೊಂಡಿತು ಎಂಬ ಬಗ್ಗೆಯೂ ವಿಡಿಯೋನಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ:ಒಂದೇ ವಾರದಲ್ಲಿ ನಡೆದ ಎರಡು ಶಾಕಿಂಗ್ ಘಟನೆ ಹಂಚಿಕೊಂಡ ನಟಿ ಪ್ರೀತಿ ಜಿಂಟಾ
ಪ್ರೀತಿ ಜಿಂಟಾ ‘ದಿಲ್ ಸೇ’ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ವರ್ಷವೇ ‘ಸೋಲ್ಜರ್’ ಸಿನಿಮಾದ ಅವಕಾಶವೂ ಧಕ್ಕಿತು. ಆ ಸಿನಿಮಾದ ನಾಯಕ ಬಾಬಿ ಡಿಯೋಲ್, ಪ್ರೀತಿ ಮೊದಲ ಬಾರಿಗೆ ಬಾಬಿ ಡಿಯೋಲ್ ಅನ್ನು ಭೇಟಿಯಾದಾಗ ತಮಾಷೆಗೆ ಪ್ರೀತಮ್ ಸಿಂಗ್ ಎಂದು ಕರೆದಿದ್ದರಂತೆ. ಆ ಸಿನಿಮಾದ ಬಳಿಕ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದಾರೆ, ಹಾಗಾಗಿ ಪ್ರೀತಿ ಸಿಕ್ಕಿದಾಗೆಲ್ಲ ಬಾಬಿ ಪ್ರೀತಮ್ ಸಿಂಗ್ ಎಂದೇ ಕರೆಯುತ್ತಿದ್ದರಂತೆ. ಅದರಿಂದಾಗಿ ಇತರರು ಸಹ ಪ್ರೀತಿ ಜಿಂಟಾರ ಮೂಲ ಹೆಸರು ಪ್ರೀತಮ್ ಸಿಂಗ್ ಎಂದೇ ಅಂದುಕೊಂಡಿದ್ದಾರೆ. ಅದು ವಿಕಿಪೀಡಿಯಾ ಹಾಗೂ ಇತರೆ ವೆಬ್ಸೈಟ್ಗಳಲ್ಲಿಯೂ ಸೇರಿಕೊಂಡು ಬಿಟ್ಟಿದೆ.
ಪ್ರೀತಿ ಜಿಂಟಾ, ಬಾಲಿವುಡ್ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ತೆಲುಗಿನ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪ್ರೀತಿಗೆ 2009ರ ಬಳಿಕ ಅವಕಾಶಗಳು ಕಡಿಮೆಯಾದವು. ವೈಯಕ್ತಿಕ ಕಾರಣಿಗಳಿಗಾಗಿ ಕೆಲವು ಬ್ರೇಕ್ಗಳನ್ನು ಸಹ ಪ್ರೀತಿ ತೆಗೆದುಕೊಂಡರು. ಈ ನಡುವೆ ಐಪಿಎಲ್ನ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಮಾಲಕಿಯೂ ಆದರು. ಈಗ ಅಮೆರಿಕನ್ ಗೆಳೆಯನನ್ನು ವಿವಾಹವಾಗಿ ಅಮೆರಿಕದಲ್ಲಿಯೇ ವಾಸಿಸುತ್ತಿದ್ದಾರೆ. ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ