AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ

ಜೂನ್ 5ರಂದು ವಿಶ್ವದಾದ್ಯಂತ ‘ಬಂದರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಾಜ್ ಬಿ. ಶೆಟ್ಟಿ, ನಟೇಶ್ ಹೆಗಡೆ ಕಾಣಿಸಿಕೊಂಡಿರುವ ಹಾಡು ಈಗಾಗಲೇ ವೈರಲ್ ಆಗಿದೆ.

ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ
Raj B Shetty, Bobby Deol
ಮದನ್​ ಕುಮಾರ್​
|

Updated on: May 31, 2026 | 9:04 AM

Share

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬಂದರ್’ (Bandar) ಕ್ರೈಮ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಾಬಿ ಡಿಯೋಲ್ ಹಾಗೂ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ (Raj B Shetty) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಲುಕುವ ಖ್ಯಾತ ಸೆಲೆಬ್ರಿಟಿಯೊಬ್ಬನ ಜೀವನದ ಏರುಪೇರುಗಳನ್ನು ಹಾಗೂ ಡಿಜಿಟಲ್ ಯುಗದಲ್ಲಿ ಸತ್ಯ ಮತ್ತು ನ್ಯಾಯದ ಸುತ್ತ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಈ ಸಿನಿಮಾ ಬಿಂಬಿಸುತ್ತದೆ. ಆದರೆ ಈ ಚಿತ್ರವು ಮಹಿಳಾ ವಿರೋಧಿ ಅಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

ಚಿತ್ರದ ಬಿಡುಗಡೆಗೆ ಮುನ್ನ ನಟ ಬಾಬಿ ಡಿಯೋಲ್ ಮತ್ತು ನಿರ್ಮಾಪಕ ನಿಖಿಲ್ ದ್ವಿವೇದಿ ಅವರು ‘ಟೈಮ್ಸ್ ನೌ’ ವಾಹಿನಿಯ ‘ದಿ ನ್ಯೂಸ್‌ಅವರ್ ಅಟ್ 9’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂವಾದವು ಚಿತ್ರದ ಕಥೆಯನ್ನು ಮೀರಿ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಲಿಂಗ ಸಮಾನತೆ, ಸಮಾನ ಹಕ್ಕುಗಳು ಮತ್ತು ಕಾನೂನು ಹೊಣೆಗಾರಿಕೆಯಂತಹ ಗಂಭೀರ ವಿಷಯಗಳತ್ತ ಹೊರಳಿತು.

ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ನಿಖಿಲ್ ದ್ವಿವೇದಿ, ಈ ಚಿತ್ರದ ಕಥೆಯು ತಮಗೆ ಭಾವನಾತ್ಮಕವಾಗಿ ತುಂಬಾ ಹತ್ತಿರವಾಗಿದ್ದನ್ನು ಹಂಚಿಕೊಂಡರು. ಅಲ್ಲದೆ, ಈ ಸಿನಿಮಾ ಯಾವುದೇ ಕಾರಣಕ್ಕೂ ಮಹಿಳೆಯರ ವಿರುದ್ಧವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ನಟಿ-ಮಾಡೆಲ್ ಟ್ವಿಶಾ ಶರ್ಮಾ ಸಾವಿನ ಪ್ರಕರಣವನ್ನು ಉಲ್ಲೇಖಿಸಿ, ‘ಈ ಚಿತ್ರವು ಪುರುಷರನ್ನು ಬಲಿಪಶುಗಳನ್ನಾಗಿ ತೋರಿಸುತ್ತಾ?’ ಎಂದು ಪ್ರಶ್ನಿಸಿದಾಗ ನಿಖಿಲ್ ದ್ವಿವೇದಿ ಸ್ಪಷ್ಟವಾಗಿ ಉತ್ತರಿಸಿದರು.

‘ನಮ್ಮ ಚಿತ್ರ ಮಹಿಳೆಯರ ವಿರುದ್ಧವಾಗಿಲ್ಲ. ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಟ್ವಿಶಾ ಶರ್ಮಾ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಅದು ನಿಜಕ್ಕೂ ದುರದೃಷ್ಟಕರ ಮತ್ತು ಆ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಲ್ಲಿ ಅಪರಾಧ ನಡೆದಿದ್ದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ನಮ್ಮದು ಮಹಿಳಾ ವಿರೋಧಿ ಚಿತ್ರವಲ್ಲ, ಇದು ನ್ಯಾಯದ ಪರವಾದ ಸಿನಿಮಾ. ಮಹಿಳೆಗೆ ಅನ್ಯಾಯವಾದಾಗ ಅವಳನ್ನು ನಂಬಬೇಡಿ ಎಂದು ಯಾರೂ ಹೇಳುತ್ತಿಲ್ಲ’ ಎಂದು ಅವರು ಹೇಳಿದರು.

‘ಬಂದರ್’ ಸಿನಿಮಾದ ಹಾಡು:

ಮುಂದುವರಿದು ಮಾತನಾಡಿದ ಅವರು, ‘ಆದರೆ ನಾವು ನ್ಯಾಯದ ಮೇಲೂ ನಂಬಿಕೆ ಇಡಬೇಕಾಗುತ್ತದೆ. ನಮಗೆ ಒಂದು ನಿರ್ದಿಷ್ಟ ಲಿಂಗಕ್ಕಿಂತ ಹೆಚ್ಚಾಗಿ ನ್ಯಾಯದ ಮೇಲೆ ನಂಬಿಕೆ ಇರಬೇಕು. ಅದೇ ನಮ್ಮ ಸಂವಿಧಾನ, ನಮ್ಮ ಕಾನೂನು ಮತ್ತು ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ. ಕೊನೆಗೆ ನ್ಯಾಯವೇ ಗೆಲ್ಲಬೇಕು’ ಎಂದು ನಿರ್ಮಾಪಕ ನಿಖಿಲ್ ದ್ವಿವೇದಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಿಂದಿಗೆ ಹಾರಿದ ರಾಜ್ ಬಿ ಶೆಟ್ಟಿ, ಮೊದಲ ಬಾಲಿವುಡ್ ಸಿನಿಮಾದ ಟ್ರೈಲರ್ ಬಿಡುಗಡೆ

‘ಬಂದರ್’ ಚಿತ್ರದ ಮೂಲಕ ನಟ ಬಾಬಿ ಡಿಯೋಲ್ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ‘ಪಾತಾಳ್ ಲೋಕ್’, ‘ಕೊಹ್ರಾ’ ಮತ್ತು ‘ಉಡ್ತಾ ಪಂಜಾಬ್’ ಖ್ಯಾತಿಯ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ರಾಜ್ ಬಿ. ಶೆಟ್ಟಿ, ನಟೇಶ್ ಹೆಗಡೆ ಮಂತಾದವರು ನಟಿಸಿರುವುದರಿಂದ ಕನ್ನಡಿಗರಿಗೂ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More