Raj Kundra: ದೇಶದ ಜನರನ್ನು ಕಷ್ಟಕ್ಕೆ ತಳ್ಳಿದ್ದ ಲಾಕ್ಡೌನ್ನಲ್ಲೇ ನೀಲಿ ಚಿತ್ರಗಳಿಂದ ಭರ್ಜರಿ ಲಾಭ ಎತ್ತಿದ್ದ ರಾಜ್ ಕುಂದ್ರಾ!
Raj Kundra: ರಾಜ್ ಕುಂದ್ರಾ ದೇಶದ ಕಾನೂನು ಚೌಕಟ್ಟನ್ನು ಮೀರಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದರು. ವಿಪರ್ಯಾಸವೆಂದರೆ ದೇಶದ ಜನರು ಒಂದೊಂದು ರೂಪಾಯಿಗೂ ಕಷ್ಟಪಡುತ್ತಿದ್ದ ಲಾಕ್ಡೌನ್ ಸಂದರ್ಭದಲ್ಲಿಯೇ ಅವರು ಭರಪೂರ ಲಾಭವೆತ್ತಿದ್ದರು. ಈ ಕುರಿತು ಮುಂಬೈ ಪೊಲೀಸರು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ನೀಲಿ ಚಿತ್ರಗಳ ತಯಾರಿಕೆ ಮತ್ತು ಹಂಚಿಕೆಯ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆಯೇ ಅದರ ಕುರಿತು ಹಲವು ಅಚ್ಚರಿಯ ಮಾಹಿತಿಗಳು ಹೊರಬರುತ್ತಿವೆ. ವಯಸ್ಕ ಚಿತ್ರಗಳನ್ನು ಕಂಪನಿಗಳು ತಯಾರಿಸುವ ಬಗೆ, ಅವುಗಳ ಮಾರುಕಟ್ಟೆ, ಹಣದ ಹರಿವು, ನಟಿಯರ ಶೋಷಣೆ ಮೊದಲಾದ ಅಂಶಗಳು ಮುನ್ನೆಲೆಗೆ ಬಂದು ಚರ್ಚೆಯಾಗುತ್ತಿವೆ. ಮುಂಬೈನ ಅಪರಾಧ ತಡೆ ವಿಭಾಗದ ಅಧಿಕಾರಿಗಳ ಪ್ರಕಾರ ನೀಲಿಚಿತ್ರಗಳ ತಯಾರಿಕೆ ಹೆಚ್ಚಾಗಿದ್ದು ಲಾಕ್ಡೌನ್ನಲ್ಲಿ. ಸಹ ಪೊಲೀಸ್ ಆಯುಕ್ತ(ಅಪರಾಧ ವಿಭಾಗ) ಮಿಲಿಂದ್ ಭಾರಂಬೆ ಪ್ರಕಾರ, ರಾಜ್ ಕುಂದ್ರಾ ನೀಲಿ ಚಿತ್ರ ತಯಾರಿಕೆಯ ಉದ್ಯಮಕ್ಕೆ ಇಳಿದಿದ್ದು ಕೇವಲ ಹದಿನೆಂಟು ತಿಂಗಳ ಹಿಂದೆ. ಆದರೆ ಅದು ಅತ್ಯಂತ ವೇಗವಾಗಿ ಬೆಳೆದು ದಿನವೊಂದಕ್ಕೆ ಲಕ್ಷಗಳಲ್ಲಿ ಆದಾಯ ತಂದುಕೊಡುವ ಮಟ್ಟಕ್ಕೆ ಮುಟ್ಟಿತು. ಇದಕ್ಕಾಗಿ ರಾಜ್ ಕುಂದ್ರಾ ಬ್ರಿಟನ್ನಲ್ಲಿ ನೆಲೆಸಿರುವ ತಮ್ಮ ಸಹೋದರ ಸಂಬಂಧಿ ಪ್ರದೀಪ್ ಭಕ್ಷಿ ಒಡೆತನದ ‘ಕೆನ್ರಿನ್ ಲಿಮಿಟೆಡ್’ ಕಂಪನಿಯೊಂದಿಗೆ ಕೈಜೋಡಿಸಿದ್ದರು ಎಂದು ಮಿಲಿಂದ್ ಹೇಳಿದ್ದಾರೆ.
ಆದಾಯದ ವಿಷಯಕ್ಕೆ ಬಂದರೆ ನೀಲಿ ಚಿತ್ರ ತಯಾರಿಕೆಯಿಂದ ರಾಜ್ ಕುಂದ್ರಾ ಪ್ರತೀ ದಿನ ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿದ್ದರು. ಮೊದಮೊದಲಿಗೆ ಪ್ರತೀ ದಿನ 2-3ಲಕ್ಷ ಆದಾಯ ಸಂಪಾದನೆ ಮಾಡಿದ್ದರೆ, ನಂತರದಲ್ಲಿ ಅದು 6-8ಲಕ್ಷಕ್ಕೆ ರೂ.ಗಳಿಗೆ ಮುಟ್ಟಿತ್ತು. ಪೊಲೀಸರ ಬಳಿ ಲಭ್ಯ ಇರುವ ದಾಖಲೆಗಳ ಪ್ರಕಾರ ಸಾವಿರಗಟ್ಟಲೆ ಹಣ ಸಂದಾಯವಾಗಿದೆ. ಅವುಗಳನ್ನೆಲ್ಲವನ್ನೂ ಪರಿಶೀಲಿಸಿ ಖಚಿತವಾದ ನಿಲುವಿಗೆ ಬರಬೇಕಾಗಿದೆ. ಅದನ್ನು ಅಪರಾಧ ಪ್ರಕರಣದಿಂದ ಗಳಿಸಿದ ಆದಾಯವೆಂದೇ ಪರಿಗಣಿಸಲಾಗುವುದು. ಇದುವರೆಗೆ ಸುಮಾರು 7.5ಕೋಟಿ ರೂ.ಗಳಿಗೂ ಅಧಿಕ ಹಣ ಜಮಾವಣೆ ಆಗಿರುವ ಕುರಿತು ವಿವಿಧ ಖಾತೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದೇವೆ ಎಂದು ಮಿಲಿಂದ್ ಭಾರಂಬೆ ತಿಳಿಸಿದ್ದಾರೆ.
‘ಹಾಟ್ಶಾಟ್’ ಆಪ್ ಒಂದು ವೇಳೆ ಭಾರತದಲ್ಲಿ ನಿಷೇಧಗೊಂಡರೆ ಎಂಬ ಕಾರಣಕ್ಕಾಗಿ ಕುಂದ್ರಾ ಅದಕ್ಕೆ ಪರ್ಯಾಯ ಮಾರ್ಗವನ್ನೂ ಸಿದ್ಧಪಡಿಸಿಕೊಂಡಿದ್ದರು. ಅದನ್ನು ‘ಪ್ಲಾನ್ ಬಿ’ ಎಂದು ಕರೆದಿದ್ದ ಕುಂದ್ರಾ ಅದಕ್ಕೆ ‘ಬಾಲಿಫೇಮ್’ ಎಂದು ನಾಮಕರಣ ಮಾಡಿದ್ದರು. ಭಾರತದ ಕಾನೂನುಗಳನ್ನು ಮುರಿದು ತಾಯಾರಿಸುತ್ತಿರುವ ನೀಲಿ ಚಿತ್ರಗಳ ಕುರಿತು ಕುಂದ್ರಾಗೂ ಅರಿವಿತ್ತು. ಕಾನೂನು ಪಾಲಿಸದ ಕಾರಣದಿಂದಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ಗಳಿಂದ ‘ಹಾಟ್ಶಾಟ್’ ಆಪ್ ಅನ್ನು ತೆಗೆಯಲಾಗಿತ್ತು. ಅದಕ್ಕಾಗಿಯೇ ಕುಂದ್ರಾ ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದರು. ಈ ಮಾಹಿತಿಗಳನ್ನು ಕುಂದ್ರಾರ ವಾಟ್ಸ್ಆಪ್ ಚಾಟ್ನ ಮೂಲಕ ಹೊರತೆಗೆಯಲಾಗಿದೆ ಎಂದು ಮಿಲಿಂದ್ ಸ್ಪಷ್ಟಪಡಿಸಿದ್ದಾರೆ.
ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದ ಹಾಟ್ಶಾಟ್ ಅನ್ನು ಪ್ಲೇಸ್ಟೋರ್ ಮತ್ತು ಆಪಲ್ ಸ್ಟೋರ್ಗಳು ಅದರಲ್ಲಿರುವ ಅಶ್ಲೀಲ ದೃಶ್ಯಗಳಿಂದಾಗಿ ನಿಷೇಧಿಸಿದ್ದವು. ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಹಾಟ್ಶಾಟ್ನ ಚಿತ್ರಗಳು, ವಿಡಿಯೊಗಳು, ವಾಟ್ಸ್ಆಪ್ ಚಾಟ್ಗಳು ರಾಜ್ ಕುಂದ್ರಾ ಮೇಲಿನ ಆರೋಪಗಳನ್ನು ಸ್ಪಷ್ಟೀಕರಿಸುತ್ತಿವೆ ಎಂದು ಮಿಲಿಂದ್ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ರಾಜ್ ಕುಂದ್ರಾ ತಮ್ಮ ಒಡೆತನದ ‘ಹಾಟ್ ಶಾಟ್’ ಸೇರಿದಂತೆ ಹಲವು ಆಪ್ಗಳಿಗೆ ನೀಲಿ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆದರೆ ಅದನ್ನು ಲಂಡನ್ನಿಂದ ನಡೆಸಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ತಿಳಿಸಿದ ಮಿಲಿಂದ್, ರಾಜ್ ಕುಂದ್ರಾ ಅವರ ಕಚೇರಿಯಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತಿತ್ತು. ನಂತರ ಅದನ್ನು ವಿ-ಟ್ರಾನ್ಸ್ಫರ್ ಮುಖಾಂತರ ಲಂಡನ್ಗೆ ಕಳುಹಿಸಿ ಕೆನ್ರಿನ್ ಲಿಮಿಟೆಡ್ ಕಂಪನಿ ಮುಖಾಂತರ ಆಪ್ಗಳಿಗೆ ಅಪ್ಲೋಡ್ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ರಾಜ್ ಕುಂದ್ರಾರ ಕಂಪನೆಗಳಿಗೆ ಅವಕಾಶಕ್ಕಾಗಿ ಕಾಯುತ್ತಿರುವ ನಟಿಯರನ್ನು ಹೇಗೆ ಸೆಳೆಯಲಾಗುತ್ತಿತ್ತು ಮತ್ತು ಅವರನ್ನು ಹೇಗೆ ಶೋಷಣೆಗೊಳಪಡಿಸಲಾಗುತ್ತಿತ್ತು ಎಂಬುದರ ಕುರಿತು ಹಲವು ನಟಿಯರು ಈ ಹಿಂದೆ ದೂರು ನೀಡಿದ್ದರು. ಆಡಿಶನ್ಗೆ ಕರೆಯುವ ನೆಪದಲ್ಲಿ ಕರೆದು ಬೋಲ್ಡ್ ದೃಶ್ಯಗಳಲ್ಲಿ ನಟಿಸುವಂತೆ ಸೂಚಿಸಿ ನಂತರ ನೀಲಿ ಚಿತ್ರಗಳನ್ನು/ ಅರೆ ನೀಲಿ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದರು. ಇದಕ್ಕೆ ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದ ಹಲವು ನಟಿಯರು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು ಎಂದು ಮಿಲಿಂದ್ ಹೇಳಿದ್ದಾರೆ.
ಪ್ರಸ್ತುತ ರಾಜ್ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖೆಯ ನಂತರ ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ:
ನಾನು ರಾಜ್ ಕುಂದ್ರಾ ಅವರ ಒಂದು ಆಪ್ ನೋಡಿದ್ದೇನೆ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ: ಮಿಕಾ ಸಿಂಗ್
Raj Kundra: ಪತಿ ರಾಜ್ ಕುಂದ್ರಾರ ನೀಲಿ ಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿ?!-ಮೌನ ಮುರಿದ ಮುಂಬೈ ಪೊಲೀಸರು
(Raj Kundra gets highest income through his app during Lockdown says Mumbai Police)
Published On - 3:41 pm, Wed, 21 July 21