
‘ರಾಮಾಯಣ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ದೇಶಾದ್ಯಂತ 23,316 ಪ್ರದರ್ಶನಗಳನ್ನು ಕಂಡ ಈ ಸಿನಿಮಾ ಎರಡನೇ ದಿನ ಭಾರತದಲ್ಲಿ ಒಟ್ಟು 48.05 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿ ಇದುವರೆಗೆ ಒಟ್ಟು 134.80 ಕೋಟಿ ರೂಪಾಯಿ ಗ್ರಾಸ್ ಹಾಗೂ 112.90 ಕೋಟಿ ರೂಪಾಯಿ ನೆಟ್ ಸಂಗ್ರಹವಾಗಿದೆ.
ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಎರಡನೇ ದಿನ ಹಿಂದಿ ಆವೃತ್ತಿಯು 19,859 ಪ್ರದರ್ಶನಗಳಿಂದ ಅತ್ಯಧಿಕ ಅಂದರೆ 35.50 ಕೋಟಿ ಗಳಿಸಿದೆ. ಕನ್ನಡ ಆವೃತ್ತಿಯು 904 ಪ್ರದರ್ಶನಗಳಿಂದ 5.15 ಕೋಟಿ ರೂಪಾಯಿ ಬಾಚಿಕೊಂಡಿದೆ. ತೆಲುಗು ಆವೃತ್ತಿ 1,530 ಪ್ರದರ್ಶನಗಳಿಂದ 4.75 ಕೋಟಿ ರೂಪಾಯಿ ಗಳಿಸಿದೆ. ಉಳಿದಂತೆ ತಮಿಳು ಆವೃತ್ತಿ 577 ಪ್ರದರ್ಶನಗಳಿಂದ 1.50 ಕೋಟಿ ರೂಪಾಯಿ ಮತ್ತು ಮಲಯಾಳಂ ಆವೃತ್ತಿ 446 ಪ್ರದರ್ಶನಗಳಿಂದ ಶೇ. 65.0ರಷ್ಟು ಆಕ್ಯುಪೆನ್ಸಿಯೊಂದಿಗೆ 1.15 ಕೋಟಿ ಗಳಿಕೆ ತಂದುಕೊಟ್ಟಿದೆ.
ವಿದೇಶಿ ಮಾರುಕಟ್ಟೆಯಲ್ಲೂ ರಾಮಾಯಣ ಚಿತ್ರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಎರಡನೇ ದಿನ ವಿದೇಶಗಳಲ್ಲಿ 35.00 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರಿಂದಾಗಿ ವಿದೇಶಿ ಮಾರುಕಟ್ಟೆಯ ಒಟ್ಟು ಗ್ರಾಸ್ ಗಳಿಕೆ 86.25 ಕೋಟಿ ರೂಪಾಯಿಗೆ ತಲುಪಿದೆ. ಮೊದಲ ದಿನ ಭಾರತದಲ್ಲಿ 64.85 ಕೋಟಿ ನೆಟ್ ಗಳಿಸಿದ್ದ ಸಿನಿಮಾ, ಎರಡನೇ ದಿನ ಶುಕ್ರವಾರ ಕೆಲಸದ ದಿನವಾಗಿದ್ದರಿಂದ ಶೇ. 25.9 ರಷ್ಟು ಸಣ್ಣ ಕುಸಿತ ಕಂಡಿದೆಯಾದರೂ ಗಳಿಕೆಯಲ್ಲಿ ಓಟವನ್ನು ಮುಂದುವರಿಸಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್: ಮೊದಲ ದಿನ ‘ಆದಿಪುರುಷ್’ ಮುಂದೆ ‘ರಾಮಾಯಣ’ ಸೋತಿದ್ದು ಏಕೆ?
ಮುಂದಿನ ದಿನಗಳಲ್ಲಿ ಈ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇಂದಿನಿಂದ ಆರಂಭವಾಗುವ ವಾರಾಂತ್ಯದ ರಜಾದಿನಗಳಲ್ಲಿ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹರಿಯುವ ಸಾಧ್ಯತೆಯಿದ್ದು, ಭಾರಿ ಕಲೆಕ್ಷನ್ ನಿರೀಕ್ಷಿಸಲಾಗಿದೆ. ಜೊತೆಗೆ ಮುಂಬರುವ ಹಬ್ಬದ ಸಾಲಿನ ಸೋಮವಾರ ಮತ್ತು ಮಂಗಳವಾರ ಸಹ ಸಾಲು ಸಾಲು ರಜೆಗಳಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣ ಸಿನಿಮಾದ ಗಳಿಕೆಯ ಸುನಾಮಿ ಮುಂದುವರಿಯಲಿದೆ ಎಂದು ಚಲನಚಿತ್ರ ವಿಶ್ಲೇಷಕರು ಅಂದಾಜಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.