ಬಾಕ್ಸ್ ಆಫೀಸ್: ಮೊದಲ ದಿನ ‘ಆದಿಪುರುಷ್’ ಮುಂದೆ ‘ರಾಮಾಯಣ’ ಸೋತಿದ್ದು ಏಕೆ?
‘ರಾಮಾಯಣ’ ಸಿನಿಮಾಕ್ಕೆ ಭಾರಿ ಮೊತ್ತದ ಬಜೆಟ್ ಹೂಡಿಕೆ ಮಾಡಿ ನಿರ್ಮಿಸಿ, ಅದ್ಧೂರಿ ಪ್ರಚಾರ ಮಾಡಿ ಬಿಡುಗಡೆ ಮಾಡಲಾಗಿದೆ. ಮೊದಲ ದಿನ ಈ ಸಿನಿಮಾ ದಾಖಲೆ ಮೊತ್ತದ ಗಳಿಕೆ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ‘ರಾಮಾಯಣ’ ಸಿನಿಮಾದ ಮೊದಲ ದಿನದ ಗಳಿಕೆ ಫ್ಲಾಪ್ ಸಿನಿಮಾ ‘ಆದಿಪುರುಷ್’ಗಿಂತಲೂ ಕಡಿಮೆ ಇದೆ.

ಮುಖ್ಯಾಂಶಗಳು
- ರಾಮಾಯಣ ಸಿನಿಮಾದ ಮೊದಲ ದಿನದ ಗಳಿಕೆ
- ಆದಿಪುರುಷ್ ಸಿನಿಮಾಕ್ಕಿಂತಲೂ ಕಡಿಮೆ ಗಳಿಕೆ
- ‘ರಾಮಾಯಣ’ದ ಕಡಿಮೆ ಗಳಿಕೆಗೆ ಕಾರಣವೇನು?
ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ ನಿನ್ನೆ (ನವೆಂಬರ್ 05) ವಿಶ್ವದಾದ್ಯಂತ ಬಲು ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಬಹುತೇಕರು ಸಿನಿಮಾ ಅನ್ನು ಕೊಂಡಾಡುತ್ತಿದ್ದಾರೆ. ಇದೊಂದು ಕಡ್ಡಾಯವಾಗಿ ನೋಡಬೇಕಾಗಿರುವ ಸಿನಿಮಾ ಎನ್ನುತ್ತಿದ್ದಾರೆ. ಸಿನಿಮಾಕ್ಕೆ ಭಾರಿ ಮೊತ್ತದ ಬಜೆಟ್ ಹೂಡಿಕೆ ಮಾಡಿ ನಿರ್ಮಿಸಿ, ಅದ್ಧೂರಿ ಪ್ರಚಾರ ಮಾಡಿ ಬಿಡುಗಡೆ ಮಾಡಲಾಗಿದೆ. ಮೊದಲ ದಿನ ಈ ಸಿನಿಮಾ ದಾಖಲೆ ಮೊತ್ತದ ಗಳಿಕೆ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ‘ರಾಮಾಯಣ’ ಸಿನಿಮಾದ ಮೊದಲ ದಿನದ ಗಳಿಕೆ ಫ್ಲಾಪ್ ಸಿನಿಮಾ ‘ಆದಿಪುರುಷ್’ಗಿಂತಲೂ ಕಡಿಮೆ ಇದೆ.
ಪ್ರಭಾಸ್ ನಟನೆಯ ‘ಆದಿಪುರುಷ್’ ಸಹ ರಾಮಾಯಣ ಆಧರಿಸಿದ ಕತೆ ಹೊಂದಿತ್ತು. ಆದರೆ ಆ ಸಿನಿಮಾಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ‘ರಾಮಾಯಣ’ ಸಿನಿಮಾಕ್ಕೆ ಪ್ರಶಂಸೆಗಳೇ ವ್ಯಕ್ತವಾಗುತ್ತಿವೆ. ಆದರೂ ಸಹ ಮೊದಲ ದಿನ ‘ಆದಿಪುರುಷ್’ ಸಿನಿಮಾ ಗಳಿಸಿದಷ್ಟು ಮೊತ್ತವನ್ನು ‘ರಾಮಾಯಣ’ ಸಿನಿಮಾ ಗಳಿಕೆ ಮಾಡಿಲ್ಲ. ಅದಕ್ಕೆ ಹಲವು ಕಾರಣಗಳಿವೆ.
‘ಆದಿಪುರುಷ್’ ಸಿನಿಮಾಕ್ಕೆ ಹೋಲಿಸಿದರೆ ‘ರಾಮಾಯಣ’ ಸಿನಿಮಾವು ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ವಿಶ್ವದಾದ್ಯಂತ 50 ಸಾವಿರ ಸ್ಕ್ರೀನ್ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ‘ಆದಿಪುರುಷ್’ ಸಿನಿಮಾ ಸುಮಾರು 15 ಸಾವಿರ ಸ್ಕ್ರೀನ್ಗಳಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಭಾರತದಲ್ಲೂ ಸಹ ‘ರಾಮಾಯಣ’ ಸಿನಿಮಾ ಸುಮಾರು 9000 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿತ್ತು. ಇಷ್ಟೆಲ್ಲ ಆದರೂ ಸಹ ಮೊದಲ ದಿನ ಭಾರತದಲ್ಲಿ ‘ರಾಮಾಯಣ’ ಸಿನಿಮಾ ಗಳಿಕೆ ಮಾಡಿರುವುದು 79 ಕೋಟಿ ಮಾತ್ರವೇ ಗಳಿಕೆ ಮಾಡಿದೆ. ಆದರೆ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಮೊದಲ ದಿನ ಭಾರತದಲ್ಲಿ 88 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಇದನ್ನೂ ಓದಿ:‘ರಾಮಾಯಣ’ ಸೆಟ್‌ಗೆ ಭೇಟಿ ನೀಡಿದ್ದ ರಣಬೀರ್ ಕಪೂರ್ ಮಗಳು; ಫೋಟೋ ವೈರಲ್
‘ರಾಮಾಯಣ’ ಸಿನಿಮಾ ಗಳಿಸಿರುವ 79 ಕೋಟಿಯಲ್ಲಿ ಉತ್ತರ ಭಾರತದ ಅಥವಾ ಹಿಂದಿ ಆವೃತ್ತಿಯಿಂದ ಸುಮಾರು 50 ಕೋಟಿಗೂ ಹೆಚ್ಚು ಮೊತ್ತ ಬಂದಿದೆ. ದಕ್ಷಿಣ ಭಾರತದಲ್ಲಿ ದೊಡ್ಡ ಮೊತ್ತದ ಗಳಿಕೆ ಆಗಿಲ್ಲ. ಆದರೆ ‘ಆದಿಪುರುಷ್’ ಸಿನಿಮಾ ಗಳಿಸಿದ್ದ 88 ಕೋಟಿಯಲ್ಲಿ 34 ಕೋಟಿಯಷ್ಟೆ ಉತ್ತರ ಭಾರತದಿಂದ ಬಂದಿತ್ತು. ಸುಮಾರು 40 ಕೋಟಿ ಕೇವಲ ತೆಲುಗು ರಾಜ್ಯಗಳಲ್ಲೇ ಗಳಿಕೆ ಆಗಿತ್ತು.
ಮತ್ತೊಂದು ಪ್ರಮುಖವಾದ ವಿಷಯವೆಂದರೆ ಟಿಕೆಟ್ ದರ. ‘ಆದಿಪುರುಷ್’ ಸಿನಿಮಾ ರಿಲೀಸ್ ಸಮಯದಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಆದರೆ ‘ರಾಮಾಯಣ’ ಸಿನಿಮಾಕ್ಕೆ ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ. ಹೆಚ್ಚು ಮಂದಿ ವಿಶೇಷವಾಗಿ ಮಧ್ಯಮ, ಬಡ ಮಧ್ಯಮ ವರ್ಗದ ಜನ ಸಿನಿಮಾ ನೋಡಬೇಕೆಂಬ ಕಾರಣದಿಂದಾಗಿ ಟಿಕೆಟ್ ದರವನ್ನು ಹೆಚ್ಚಿಸದಿರಲು ಚಿತ್ರತಂಡ ನಿರ್ಣಯಿಸಿತ್ತು. ಇದು ಬಾಕ್ಸ್ ಆಫೀಸ್ ಗಳಿಕೆ ಮೇಲೆ ದೊಡ್ಡ ಪರಿಣಾಮವನ್ನು ಬೀರಿದೆ.
‘ಆದಿಪುರುಷ್’ ಸಿನಿಮಾ, ರಾಮಾಯಣ ಕತೆಯನ್ನು ಸಿನಿಮಾ ಮಾಡಿ, ಜನರಲ್ಲಿ ನಿರಾಸೆ ಮೂಡಿಸಿತ್ತು. ಆ ನಿರಾಶಾ ಭಾವ ಪ್ರೇಕ್ಷಕರಲ್ಲಿ ಈಗಲೂ ಇದ್ದು, ಇದೇ ಕಾರಣದಿಂದಾಗಿ ಮೊದಲ ದಿನ ಪ್ರೇಕ್ಷಕರು ಚಿತ್ರಮಂದಿರದ ಕಡೆ ಹೆಚ್ಚಾಗಿ ಬಂದಿಲ್ಲ. ಆದರೆ ಈಗ ಸಿನಿಮಾದ ಬಗ್ಗೆ ಎಲ್ಲೆಡೆ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗುವ ಸ್ಪಷ್ಟ ಮುನ್ಸೂಚನೆ ಕಾಣುತ್ತಿದೆ. ಅಂದಹಾಗೆ ‘ರಾಮಾಯಣ’ ಸಿನಿಮಾದ ಭಾರತದ ಬಾಕ್ಸ್ ಆಫೀಸ್ ಗಳಿಕೆ ‘ಆದಿಪುರುಷ್’ಗಿಂತಲೂ ಕಡಿಮೆ ಇದೆ. ಆದರೆ ವಿಶ್ವ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಾಗಿದೆ. ‘ಆದಿಪುರುಷ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 120 ಕೋಟಿ ಗಳಿಕೆ ಮಾಡಿತ್ತು, ‘ರಾಮಾಯಣ’ ಸಿನಿಮಾ ಮೊದಲ ದಿನ 127.60 ಕೋಟಿ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Fri, 6 November 26




