
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ರಾಮಾಯಣ: ಪಾರ್ಟ್ 1’ ಸಿನಿಮಾವನ್ನು ಪೈರಸಿ ಮಾಡುವವರಿಗೆ ನಿರ್ಮಾಪಕರು ಲೀಗಲ್ ನೋಟಿಸ್ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಅನಧಿಕೃತವಾಗಿ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 5ರಂದು ತೆರೆಕಂಡ ಈ ಚಿತ್ರದ ದೃಶ್ಯಗಳು ಜಾಲತಾಣಗಳಲ್ಲಿ ಲೀಕ್ ಆಗುತ್ತಿರುವುದಕ್ಕೆ ಚಿತ್ರತಂಡ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಕೆಲವರು ಸಿನಿಮಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರಿಸಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೆಸೇಜಿಂಗ್ ಆ್ಯಪ್‌ಗಳಲ್ಲಿ ಶೇರ್ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ‘ರಾಮಾಯಣ’ ಚಿತ್ರತಂಡದ ಅಧಿಕೃತ ಸಾಮಾಜಿಕ ಜಾಲತಾಣದ ಪೇಜ್‌ಗಳ ಮೂಲಕ ನೀಡಿರುವ ಕಾನೂನು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ನೋಟೀಸ್‌ನಲ್ಲಿ ಮುಂಬೈ ಹೈಕೋರ್ಟ್ ನೀಡಿರುವ ಇತ್ತೀಚಿನ ಎರಡು ಆದೇಶಗಳನ್ನು (ನವೆಂಬರ್ 2 ಮತ್ತು ನವೆಂಬರ್ 6) ಪ್ರಸ್ತಾಪಿಸಲಾಗಿದೆ. ಅನುಮತಿಯಿಲ್ಲದೆ ಸಿನಿಮಾದ ಯಾವುದೇ ಭಾಗವನ್ನು ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು ಅಥವಾ ಶೇರ್ ಮಾಡುವುದನ್ನು ಮುಂಬೈ ಹೈಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಇದು ಕೇವಲ ಕಾಪಿರೈಟ್ ಉಲ್ಲಂಘನೆ ಅಷ್ಟೇ ಅಲ್ಲದೆ, ಕ್ರಿಮಿನಲ್ ಅಪರಾಧವೂ ಹೌದು ಎಂದು ನಿರ್ಮಾಪಕರು ನೆನಪಿಸಿದ್ದಾರೆ. ‘ಕಾಪಿರೈಟ್ ಕಾಯ್ದೆ 1957, ಸಿನಿಮಟೋಗ್ರಾಫ್ ಕಾಯ್ದೆ 1952, ಬಿಎನ್‌ಎಸ್ 2023 ಮತ್ತು ಐಟಿ ಕಾಯ್ದೆ 2000ರ ಅಡಿಯಲ್ಲಿ ಇದು ದಂಡ ಸಹಿತ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವಾಗಿದೆ. ಜೊತೆಗೆ ಇದು ನ್ಯಾಯಾಲಯದ ನಿಂದನೆಯೂ ಆಗುತ್ತದೆ’ ಎಂದು ನೋಟೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: Ramayana Review: ಯಶ್, ರಣಬೀರ್, ಸಾಯಿ ಪಲ್ಲವಿ ನಟನೆಯಿಂದ ಕಣ್ಮನ ಸೆಳೆದ ‘ರಾಮಾಯಣ’
ಸಿನಿಮಾ ಬಿಡುಗಡೆಯಾದ ದಿನದಂದು ಸನ್ನಿ ಡಿಯೋಲ್ ಅವರ ಹನುಮಾನ್ ಪಾತ್ರದ ಪೋಸ್ಟ್-ಕ್ರೆಡಿಟ್ ದೃಶ್ಯ ಹಾಗೂ ಹನುಮಾನ್ ಚಾಲೀಸಾ ಹಾಡನ್ನು ಚಿತ್ರತಂಡವೇ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಆದರೆ, ಇದೀಗ ಜಾಲತಾಣಗಳಲ್ಲಿ ಅಂತಾರಾಷ್ಟ್ರೀಯ ಆವೃತ್ತಿಯ ದೃಶ್ಯವೊಂದು ಲೀಕ್ ಆಗಿದ್ದು ವೈರಲ್ ಆಗಿದೆ. ಹಿಂದಿ ಆವೃತ್ತಿಯಲ್ಲಿ ಕಟ್ ಮಾಡಲಾಗಿದ್ದ ದೃಶ್ಯ ಇದಾಗಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.