AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramayana Review: ಯಶ್, ರಣಬೀರ್, ಸಾಯಿ ಪಲ್ಲವಿ ನಟನೆಯಿಂದ ಕಣ್ಮನ ಸೆಳೆದ ‘ರಾಮಾಯಣ’

Ramayana Review: ಯಶ್, ರಣಬೀರ್, ಸಾಯಿ ಪಲ್ಲವಿ ನಟನೆಯಿಂದ ಕಣ್ಮನ ಸೆಳೆದ ‘ರಾಮಾಯಣ’
Ranbir Kapoor, YashImage Credit source: Prime Focus Studios

ರಾಮಾಯಣ

U
  • Time - 195 Minutes
  • Released - November 5, 2026
  • Language - Hindi
  • Genre - Action, Adventure, Drama, Mythological
Cast - ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿ ದುಬೆ, ಅರುಣ್ ಗೋವಿಲ್, ಲಾರಾ ದತ್ತ, ರಕುಲ್ ಪ್ರೀತ್ ಸಿಂಗ್ ಮುಂತಾದವರು.
Director - ನಿತೇಶ್ ತಿವಾರಿ
4.5
Critic's Rating
ಮದನ್​ ಕುಮಾರ್​
|

Updated on: Nov 05, 2026 | 12:48 AM

Share

2026ರ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ‘ರಾಮಾಯಣ’ ಸಿನಿಮಾ ಈಗ ಬಿಡುಗಡೆ ಆಗಿದೆ. ಬಹುತಾರಾಗಣ ಇರುವ ಈ ಸಿನಿಮಾಗೆ ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಅಭಿನಯಿಸಿರುವ ರಾಮಾಯಣ ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ..

ರಾಮಾಯಣದಂತಹ ಪುರಾಣದ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಪಾತ್ರಧಾರಿಗಳ ಆಯ್ಕೆ, ವೇಷಭೂಷಣ, ಸಂಭಾಷಣೆ, ಸೆಟ್ ನಿರ್ಮಾಣ ಸೇರಿದಂತೆ ಹಲವು ವಿಭಾಗಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಈಗಾಗಲೇ ಜನರಿಗೆ ತಿಳಿದಿರುವ ಕಥೆಯನ್ನು ಪುನಃ ಹೇಳುವಾಗ ಹೊಸತನವನ್ನು ಕಟ್ಟಿಕೊಡುವುದು ಸವಾಲಿನ ಕೆಲಸ. ಆ ಸವಾಲನ್ನು ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ’ ತಂಡ ಸಮರ್ಥವಾಗಿ ನಿಭಾಯಿಸಿದೆ.

ರಾವಣನಾಗಿ ಯಶ್ ಅಬ್ಬರ:

‘ರಾಮಾಯಣ’ ಸಿನಿಮಾ ಮೊದಲು ಗೆದ್ದಿರುವುದೇ ಪಾತ್ರಧಾರಿಗಳ ಆಯ್ಕೆಯಲ್ಲಿ. ಅದರಲ್ಲೂ, ರಾವಣನಾಗಿ ಯಶ್ ಅವರ ಆಯ್ಕೆ ಈ ಸಿನಿಮಾಗೆ ಬಹಳ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಈ ಹಿಂದೆ ರಾವಣನ ಪಾತ್ರ ಮಾಡಿದ ಬೇರೆ ಕಲಾವಿದರ ಯಾವ ಛಾಯೆಯೂ ಇಲ್ಲದೇ ಯಶ್ ಅವರು ತಮ್ಮದೇ ರೀತಿಯಲ್ಲಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಾಣಿಸಿಕೊಳ್ಳುವ ಎಲ್ಲ ದೃಶ್ಯಗಳಲ್ಲೂ ಅವರು ಅಬ್ಬರಿಸಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಖಂಡಿತಾ ಚಪ್ಪಾಳೆ ಸಿಗುತ್ತದೆ. ಈ ರೀತಿಯ ಪಾತ್ರದ ಅವಕಾಶ ಸಿಗುವುದು ಜೀವನದಲ್ಲಿ ಒಮ್ಮೆ ಮಾತ್ರ. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.

ರಣಬೀರ್ ಕಪೂರ್ ನಟನೆ ಗಮನಾರ್ಹ:

ಇನ್ನು, ಶ್ರೀರಾಮನಾಗಿ ರಣಬೀರ್ ಕಪೂರ್ ಅವರ ಅಭಿನಯ ಕೂಡ ಮೆಚ್ಚುವಂತಿದೆ. ಜೀವನದಲ್ಲಿ ಏನೇ ಏಳು-ಬೀಳುಗಳ ಬಂದರೂ ಕೂಡ ಎಷ್ಟು ಸಾಧ್ಯವೋ ಅಷ್ಟು ಶಾಂತನಾಗಿ ಇರುವುದು ರಾಮನ ಗುಣ. ದುಷ್ಟರನ್ನು ಸಂಹಾರ ಮಾಡುವಾಗಲೂ ಕೂಡ ರಾಮ ತನ್ನತನವನ್ನು ಕಳೆದುಕೊಳ್ಳುವುದಿಲ್ಲ. ಅಂತಹ ಸೂಕ್ಷ್ಮ ವ್ಯಕ್ತಿತ್ವ ಇರುವ ಪಾತ್ರದಲ್ಲಿ ನಟಿಸುವುದು ಒಂದು ಸವಾಲು. ರಣಬೀರ್ ಕಪೂರ್ ಅವರು ಭೇಷ್ ಎನ್ನುವಂತೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದಿನ ತಮ್ಮ ಸಿನಿಮಾಗಳ ಇಮೇಜ್ ಕಿಂಚಿತ್ತೂ ಕಾಣಿಸದೇ ರೀತಿಯಲ್ಲಿ ಅವರು ರಾಮನ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿಗೆ ಮೆಚ್ಚುಗೆ:

ಸೀತೆಯಾಗಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರಂಭದಲ್ಲಿ ಸಾಯಿ ಪಲ್ಲವಿ ಅವರ ಆಯ್ಕೆಯ ಬಗ್ಗೆ ಕೆಲವರಿಗೆ ತಕರಾರು ಇತ್ತು. ಅಂಥವರಿಗೆಲ್ಲ ಸಾಯಿ ಪಲ್ಲವಿ ಅವರು ತಮ್ಮ ಅಭಿನಯದ ಮೂಲಕವೇ ಉತ್ತರ ನೀಡಿದ್ದಾರೆ. ಇನ್ನು, ಶೂರ್ಪನಕಿಯಾಗಿ ನಟಿಸಿರುವ ರಕುಲ್ ಪ್ರೀತ್ ಸಿಂಗ್ ಅವರ ಅಭಿನಯ ಕೂಡ ಮೆಚ್ಚುವಂತಿದೆ. ಲಾರಾ ದತ್ತ (ಕೈಕೇಯಿ), ಅರುಣ್ ಗೋವಿಲ್ (ದಶರಥ), ವಿವೇಕ್ ಒಬೆರಾಯ್ (ವಿದ್ಯುಜ್ಜಿಹ್ವ) ಮುಂತಾದವರ ನಟನೆಯೂ ಗಮನ ಸೆಳೆದಿದೆ.

ಕಣ್ಮನ ಸೆಳೆಯುವ ಗ್ರಾಫಿಕ್ಸ್:

‘ರಾಮಾಯಣ’ ಸಿನಿಮಾ ಹೆಚ್ಚು ಬಲಿಷ್ಠವಾಗಿರುವುದೇ ಗ್ರಾಫಿಕ್ಸ್ ಕಾರಣದಿಂದ. ತಾಟಕಿ-ಸುಬಾಹು ಸಂಹಾರ, ರಾವಣ-ಜಟಾಯು ನಡುವಿನ ಕಾಳಗ, ದುಷ್ಟ ಶಕ್ತಿಗಳ ಆರ್ಭಟ, ದೇವ-ದಾನವರ ಸಂಘರ್ಷ, ರಾವಣನ ಅರಮನೆಯ ಚಿತ್ರಣ, ಪುಷ್ಪಕ ವಿಮಾನದಲ್ಲಿ ಸೀತಾಪಹರಣ ಮುಂತಾದ ದೃಶ್ಯಗಳಲ್ಲಿ ಗ್ರಾಫಿಕ್ಸ್ ಉತ್ತಮವಾಗಿ ಮೂಡಿಬಂದಿದೆ. ಎಲ್ಲವೂ ಪ್ರೇಕ್ಷಕರ ಕಣ್ಣೆದುರಲ್ಲೇ ನಡೆಯುತ್ತಿದೆ ಎಂಬಷ್ಟು ನೈಜವಾಗಿ ಕಟ್ಟಿಕೊಡಲು ಗ್ರಾಫಿಕ್ಸ್ ಸಹಾಯ ಮಾಡಿದೆ.

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡಿದ್ದಕ್ಕೆ ಯಥರ್ವ್ ಬೇಸರ

ಭಾವುಕ ದೃಶ್ಯಗಳೂ ಹೈಲೈಟ್:

ಯುದ್ಧದ ದೃಶ್ಯಗಳಿಗೆ ನಿರ್ದೇಶಕರು ಎಷ್ಟು ಗಮನ ಹರಿಸಿದ್ದಾರೋ ಅಷ್ಟೇ ಗಮನವಹಿಸಿ ಭಾವನಾತ್ಮಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸೀತಾ ಸ್ವಯಂವರ, ದಶರಥನ ಸಂದಿಗ್ಧ ಪರಿಸ್ಥಿತಿ, ರಾಮ ಅರಮನೆ ತೊರೆಯುವ ಸಂದರ್ಭ, ಭರತ ಮತ್ತು ರಾಮನ ನಡುವಿನ ಸಂಭಾಷಣೆ, ಸೀತೆಯ ಅಪಹರಣ ಆದಾಗ ರಾಮನ ಚಡಪಡಿಕೆ ಸೇರಿದಂತೆ ಅನೇಕ ದೃಶ್ಯಗಳಲ್ಲಿ ಭಾವ ತೀವ್ರತೆ ಕಾಣಿಸುತ್ತದೆ. ಅದಕ್ಕೆ ತಕ್ಕಂತೆಯೇ ಹಿನ್ನೆಲೆ ಸಂಗೀತ ಪೂರಕವಾಗಿದೆ.

ವೇಗವಾಗಿ ಸಾಗುವ ನಿರೂಪಣೆ:

ಈ ಸಿನಿಮಾದ ಅವಧಿ 3 ಗಂಟೆ 15 ನಿಮಿಷ ಇದೆ. ಆದರೆ ಕಿಂಚಿತ್ತೂ ಬೋರ್ ಆಗದ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗುತ್ತದೆ. ಮೊದಲಾರ್ಧದಲ್ಲಿ ಮಂಥರೆಯ ಮಾತು ಕೇಳಿದ ಕೈಕೇಯಿ, ದಶರಥನ ಬಳಿ ಹೋಗಿ ರಾಮನ ವನವಾಸಕ್ಕಾಗಿ ಪಟ್ಟುಹಿಡಿಯುವ ಸನ್ನಿವೇಶ ಸ್ವಲ್ಪ ಎಳೆದಾಡಿದಂತೆ ಭಾಸವಾಗುತ್ತದೆ. ಆ ಬಳಿಕ ಮತ್ತೆ ಕಥೆಯು ವೇಗ ಪಡೆದುಕೊಳ್ಳುತ್ತದೆ. ರಾವಣನ ಪಾತ್ರ ತೆರೆಮೇಲೆ ಬಂದಾಗಲೆಲ್ಲ ವೇಗ ಇನ್ನಷ್ಟು ಹೆಚ್ಚುತ್ತದೆ. ನೋಡನೋಡುತ್ತಿದ್ದಂತೆಯೇ ಸಿನಿಮಾ ಕ್ಲೈಮ್ಯಾಕ್ಸ್ ತಲುಪಿರುತ್ತದೆ. ಅಷ್ಟು ಬಿಗಿಯಾದ ನಿರೂಪಣೆಯೊಂದಿಗೆ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣವನ್ನು ತೆರೆಗೆ ತಂದಿದ್ದಾರೆ.

ಅದ್ದೂರಿ ಸಿನಿಮಾ:

‘ರಾಮಾಯಣ’ ಸಿನಿಮಾದ ಪ್ರತಿ ದೃಶ್ಯದಲ್ಲಿ ಕೂಡ ಅದ್ದೂರಿತನ ಕಾಣಿಸುತ್ತದೆ. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದ ರೀತಿಯಲ್ಲಿ ಸಿನಿಮಾ ಮಾಡಲಾಗಿದೆ. ಭಾರತದ ಹಾಗೂ ವಿದೇಶದ ಘಟಾನುಘಟಿ ತಂತ್ರಜ್ಞರು ಈ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಎಲ್ಲರ ಶ್ರಮದ ಪರಿಣಾಮವಾಗಿ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಹ ದೃಶ್ಯವೈಭವ ಮೂಡಿಬಂದಿದೆ.

ಆಂಜನೇಯನ ಪಾತ್ರಕ್ಕಾಗಿ ಕಾಯಬೇಕು:

ಅಂದಹಾಗೆ, ಈ ಸಿನಿಮಾದಲ್ಲಿ (ರಾಮಾಯಣ: ಪಾರ್ಟ್ 1) ತೋರಿಸಿರುವುದು ಅರ್ಧ ಕಥೆ ಮಾತ್ರ. ಸೀತೆಯ ಅಪಹರಣದವರೆಗೆ ಮಾತ್ರ ಕಥೆ ತೋರಿಸಲಾಗಿದೆ. ಇನ್ನೂ ರಾಮ-ರಾವಣರ ಮುಖಾಮುಖಿ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಂಜನೇಯನ ಪಾತ್ರದ ಪ್ರವೇಶವೇ ಆಗಿಲ್ಲ. ಅದನ್ನೆಲ್ಲ ನೋಡಲು ‘ರಾಮಾಯಣ: ಪಾರ್ಟ್ 2’ ಚಿತ್ರಕ್ಕಾಗಿ ಕಾಯಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ