‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಕ್ತ ಸಿಕ್ತ ಲುಕ್ನಲ್ಲಿ ರಣಬೀರ್; ರಾಮನ ಪಾತ್ರ ಹೋಲಿಸಿ ಟೀಕೆ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆಂಡ್ ವಾರ್’ ಸಿನಿಮಾದ ರಣಬೀರ್ ಕಪೂರ್ ರಕ್ತಸಿಕ್ತ ಫಸ್ಟ್ ಲುಕ್ ಬಿಡುಗಡೆಯಾಗಿದೆ. ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್ ಅವರನ್ನು ಈ ರಗಡ್ ಅವತಾರದಲ್ಲಿ ನೋಡಿ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಮುಖ್ಯಾಂಶಗಳು
- ರಕ್ತಸಿಕ್ತ ಕಾರಿನಲ್ಲಿ ರಣಬೀರ್ ಮಾಸ್ ಎಂಟ್ರಿ
- ವೈರಲ್ ಆಯ್ತು 'ಲವ್ ಆಂಡ್ ವಾರ್' ಫಸ್ಟ್ ಲುಕ್
- ರಣಬೀರ್ ನವ ಅವತಾರಕ್ಕೆ ಅಭಿಮಾನಿಗಳ ಅಸಮಾಧಾನ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆಂಡ್ ವಾರ್’ ಸಿನಿಮಾದಿಂದ ರಣಬೀರ್ ಕಪೂರ್ ಅವರ ಮೊದಲ ಲುಕ್ ಕೊನೆಗೂ ಹೊರಬಂದಿದೆ. ಅಭಿಮಾನಿಗಳು ಕಾಯುತ್ತಿದ್ದ ಈ ಮಾಸ್ ಅವತಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಣಬೀರ್ ಅವರ ಹೊಸ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. 2027ರ ಜನವರಿಯಲ್ಲಿ ಈ ಬಹುನಿರೀಕ್ಷಿತ ಸಿನಿಮಾ ತೆರೆಗೆ ಬರಲಿದೆ.
ಪ್ರಸಿದ್ಧ ನಿರ್ಮಾಣ ಸಂಸ್ಥೆ ಬನ್ಸಾಲಿ ಪ್ರೊಡಕ್ಷನ್ಸ್ ತನ್ನ ಅಧಿಕೃತ ಖಾತೆಯಲ್ಲಿ ರಣಬೀರ್ ಕಪೂರ್ ಪೋಸ್ಟರ್ ಹಂಚಿಕೊಂಡಿದೆ. ಪೋಸ್ಟರ್‌ನಲ್ಲಿ ರಣಬೀರ್ ಹಳೆಯ ಮಾದರಿಯ ಕಾರು ಚಲಾಯಿಸುತ್ತಿದ್ದಾರೆ. ಶಾರ್ಟ್ ಹೇರ್‌ಕಟ್ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ರಕ್ತದ ಕಲೆಗಳು ಎದ್ದು ಕಾಣುತ್ತಿವೆ. ರಣಬೀರ್ ಅವರ ಈ ರಕ್ತಸಿಕ್ತ ಲುಕ್ ಕಂಡ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಪ್ರೇಮ ಮತ್ತು ಯುದ್ಧದ ಹಿನ್ನೆಲೆಯುಳ್ಳ ಒಂದು ಅಪರೂಪದ ಕಥೆಯಾಗಿದೆ. ಇದರಲ್ಲಿ ರಣಬೀರ್ ಹಾಗೂ ವಿಕ್ಕಿ ಭಾರತೀಯ ವಾಯುಪಡೆ ಅಧಿಕಾರಿಗಳಾಗಿ ನಟಿಸಿದ್ದಾರೆ ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆಗೆ ರಣಬೀರ್ ಸುಮಾರು 20 ವರ್ಷಗಳ ನಂತರ ಮತ್ತೆ ಕೈಜೋಡಿಸಿದ್ದಾರೆ.
View this post on Instagram
ಸಿನಿಮಾದ ಶೂಟಿಂಗ್ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದಾಗ್ಯೂ ಕೆಲವು ಯುದ್ಧದ ದೃಶ್ಯಗಳನ್ನು ಮತ್ತಷ್ಟು ಅದ್ದೂರಿಯಾಗಿ ಚಿತ್ರೀಕರಿಸಲು ತಂಡ ಯೋಜಿಸಿದೆ. ಚಿತ್ರದ ಯಾವುದೇ ದೃಶ್ಯಗಳು ಲೀಕ್ ಆಗಬಾರದು ಎಂದು ಚಿತ್ರತಂಡ ಕಟ್ಟುನಿಟ್ಟಿನ ನಿಯಮ ಮಾಡಿದೆ.
ಇದನ್ನೂ ಓದಿ: ರಾಮಾಯಣ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಿದ ಸ್ಟಾರ್ ನಟ
ಮತ್ತೊಂದೆಡೆ ರಣಬೀರ್ ಅವರ ಈ ರಕ್ತಸಿಕ್ತ ಲುಕ್ ನೋಡಿ ಕೆಲವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ರಣಬೀರ್ ಕಪೂರ್ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪವಿತ್ರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ತ ರಾಮನಾಗಿ ಕಾಣಿಸಿಕೊಂಡು, ಇತ್ತ ಹೀಗೆ ಅತಿಯಾದ ಹಿಂಸಾತ್ಮಕ ಹಾಗೂ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿರುವುದು ಸರಿಯಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Thu, 24 September 26




