ಪ್ರತಿ ರಾತ್ರಿ ಮಲಗುವ ಮುನ್ನ ಪತ್ನಿಯ ಕಾಲಿಗೆ ನಮಸ್ಕಾರ ಮಾಡುವ ನಟ ರವಿ ಕಿಶನ್; ಕಾರಣ ಏನು?
ನಟ ರವಿ ಕಿಶನ್ ಅವರು ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 1ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರದ ವೇಳೆ ರವಿ ಕಿಶನ್ ಅವರು ತಮ್ಮ ಪತ್ನಿಯ ಬಗ್ಗೆ ಮಾತನಾಡಿದ್ದಾರೆ. ರಾತ್ರಿ ಮಲಗುವುದಕ್ಕೂ ಮೊದಲು ಅವರು ಪತ್ನಿಯ ಕಾಲಿಗೆ ನಮಸ್ಕಾರ ಮಾಡುವುದಾಗಿ ಹೇಳಿದ್ದಾರೆ.

ಬಹುಭಾಷಾ ನಟ ರವಿ ಕಿಶನ್ (Ravi Kishan) ಅವರು ಸಿನಿಮಾದಲ್ಲೂ, ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ಹಿಂದಿ, ಭೋಜ್ಪುರಿ, ತೆಲುಗು, ಕನ್ನಡ, ಗುಜರಾತಿ, ಮರಾಠಿ, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ರವಿ ಕಿಶನ್ ಅವರಿಗೆ ಸಖತ್ ಬೇಡಿಕೆ ಇದೆ. ಗಮನಾರ್ಹ ಅಭಿನಯದಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ರವಿ ಕಿಶನ್ ಅವರು ತಮ್ಮ ಖಾಸಗಿ ಬದುಕಿನ ಒಂದು ಇಂಟರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರತಿ ರಾತ್ರಿ ಮಲಗುವುದಕ್ಕೂ ಮುನ್ನ ಪತ್ನಿಯ (Ravi Kishan Wife) ಕಾಲಿಗೆ ರವಿ ಕಿಶನ್ ನಮಸ್ಕಾರ ಮಾಡುತ್ತಾರೆ!
ಆಗಸ್ಟ್ 1ರಂದು ಬಿಡುಗಡೆ ಆಗಲಿರುವ ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ರವಿ ಕಿಶನ್ ಅವರು ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಚಿತ್ರತಂಡದವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ವೇಳೆ ರವಿ ಕಿಶನ್ ಅವರು ತಮ್ಮ ಪತ್ನಿ ಪ್ರೀತಿ ಶುಕ್ಲಾ ಬಗ್ಗೆ ಕೊಂಚ ಎಮೋಷನಲ್ ಆಗಿ ಮಾತನಾಡಿದರು.
‘ರವಿ ಅವರ ಒಂದು ಅಭ್ಯಾಸದ ಬಗ್ಗೆ ನಾವು ಕೇಳಿದ್ದೇವೆ. ಅವರು ಪ್ರತಿ ರಾತ್ರಿ ಮಲಗುವುದಕ್ಕೂ ಮುನ್ನ ತಮ್ಮ ಹೆಂಡತಿಯ ಕಾಲಿಗೆ ನಮಸ್ಕಾರ ಮಾಡುತ್ತಾರೆ’ ಎಂದು ಕಪಿಲ್ ಶರ್ಮಾ ಹೇಳಿದರು. ಆ ಮಾತು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು. ‘ಹೌದು, ನಾನು ಆ ರೀತಿ ಮಾಡುತ್ತೇನೆ’ ಎಂದು ರವಿ ಕಿಶನ್ ಅವರು ಒಪ್ಪಿಕೊಂಡರು. ಅಲ್ಲದೇ, ಆ ಬಗ್ಗೆ ಅವರು ಇನ್ನಷ್ಟು ವಿವರ ನೀಡಿದರು.
View this post on Instagram
‘ಪತ್ನಿಯ ಕಾಲಿಗೆ ನಮಸ್ಕಾರ ಮಾಡಲು ಆಕೆ ಬಿಡುವುದಿಲ್ಲ. ಆದರೆ ಆಕೆ ಮಲಗಿದ್ದಾಗ ನಾನು ನಮಸ್ಕಾರ ಮಾಡುತ್ತೇನೆ. ಯಾಕೆಂದರೆ, ನನ್ನ ಬಳಿ ಹಣ ಅಥವಾ ಏನೂ ಇಲ್ಲದೇ ಇರುವಾಗ ಆಕೆ ನನ್ನ ಜೊತೆ ಇದ್ದಳು. ಎಂದಿಗೂ ಆಕೆ ನನ್ನನ್ನು ಬಿಟ್ಟುಕೊಡಲಿಲ್ಲ. ನಾನು ಏನೇ ಆಗಿದ್ದರೂ ಆಕೆ ನನ್ನ ಜೊತೆಗೆ ಇದ್ದಾಳೆ. ನಮ್ಮ ಮಗ ಇಲ್ಲೇ ಇದ್ದಾನೆ. ಅವನಿಗೂ ಇದೆಲ್ಲ ಗೊತ್ತು. ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವ ಅರ್ಹತೆ ಇರುವ ವ್ಯಕ್ತಿ ಅವಳು’ ಎಂದು ರವಿ ಕಿಶನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಹೀರೋಗೆ ಹೆದರಿದ ಅಜಯ್ ದೇವಗನ್? ಕೊನೇ ಕ್ಷಣದಲ್ಲಿ ಸಿನಿಮಾ ಮುಂದೂಡಿಕೆ
ಸಿನಿಮಾ ಮಾತ್ರವಲ್ಲದೇ ಕಿರುತೆರೆ ಹಾಗು ವೆಬ್ ಸಿರೀಸ್ಗಳಲ್ಲಿ ಕೂಡ ರವಿ ಕಿಶನ್ ಅವರು ಹೆಸರು ಮಾಡಿದ್ದಾರೆ. ಈಗ ಅವರಿಗೆ 56 ವರ್ಷ ವಯಸ್ಸು. ಗೋರಕ್ಪುರ್ ಲೋಕಸಭಾ ಕ್ಷೇತ್ರದ ಸಂಸದನಾಗಿ ಅವರು ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








