ನಿಮಗೆ ಸಹಾಯ ಬೇಕಿದ್ದರೆ ಕೇಳಿ; ಬಾಲಿವುಡ್ ನಟನಿಗೆ ನೇರ ಆಫರ್ ಕೊಟ್ಟಿದ್ದ ದಾವೂದ್
ದಿವಂಗತ ನಟ ರಿಷಿ ಕಪೂರ್ ತಮ್ಮ 'ಖುಲ್ಲಂ ಖುಲ್ಲಾ' ಆತ್ಮಕಥೆಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂರನ್ನು ದುಬೈನಲ್ಲಿ ಭೇಟಿಯಾಗಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದರು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ ನಡೆದಿದ್ದ ಈ ಭೇಟಿಗಳಲ್ಲಿ, ದಾವೂದ್ ರಿಷಿ ಕಪೂರ್‌ಗೆ ಹಣಕಾಸಿನ ನೆರವು ಸೇರಿದಂತೆ ಹಲವು ಆಫರ್‌ಗಳನ್ನು ನೀಡಿದ್ದ. ಬಾಲಿವುಡ್ ಮತ್ತು ಭೂಗತ ಲೋಕದ ಲಿಂಕ್ ಬಗ್ಗೆ ರಿಷಿ ಕಪೂರ್ ಅವರ ಈ ಅನುಭವಗಳು ಹೇಳುತ್ತವೆ.

ಬಾಲಿವುಡ್ ಚಿತ್ರರಂಗ ಹಾಗೂ ಭೂಗತ ಲೋಕದ ಲಿಂಕ್ ಬಗ್ಗೆ ಆಗಾಗ ಒಂದಿಲ್ಲೊಂದು ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಈ ಹಿಂದೆ ಹಿರಿಯ ನಟ ದಿವಂಗತ ರಿಷಿ ಕಪೂರ್ ಕೂಡ ತಾವು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ತಮ್ಮ ಆತ್ಮಕಥೆ ‘ಖುಲ್ಲಂ ಖುಲ್ಲಾ’ ಪುಸ್ತಕದಲ್ಲಿ ದುಬೈನಲ್ಲಿ ತಾವು ದಾವೂದ್‌ನನ್ನು ಎರಡು ಬಾರಿ ಮುಖಾಮುಖಿಯಾಗಿದ್ದ ಸಂಗತಿಯನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದರು. 1993 ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ ಈ ಭೇಟಿಗಳು ನಡೆದಿದ್ದರಿಂದ, ತಾವು ಇದನ್ನು ಮುಚ್ಚಿಡುವ ಪ್ರಯತ್ನ ಮಾಡಲಿಲ್ಲ ಎಂದು ರಿಷಿ ಕಪೂರ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆ ಸಮಯದಲ್ಲಿ ದಾವೂದ್‌ನನ್ನು ದೇಶದ ಶತ್ರು ಎಂದು ಯಾರೂ ಬಿಂಬಿಸಿರಲಿಲ್ಲ, ಹಾಗಾಗಿ ಆತನ ಆಹ್ವಾನವನ್ನು ಒಪ್ಪಿಕೊಳ್ಳುವುದರಲ್ಲಿ ತಮಗೆ ಯಾವುದೇ ತಪ್ಪು ಕಾಣಿಸಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಭೇಟಿ ನಡೆದಿದ್ದು 1988ರಲ್ಲಿ. ರಿಷಿ ಕಪೂರ್ ತಮ್ಮ ಸ್ನೇಹಿತ ಬಿಟ್ಟು ಆನಂದ್ ಅವರೊಂದಿಗೆ ಆಶಾ ಭೋಸ್ಲೆ ಮತ್ತು ಆರ್. ಡಿ. ಬರ್ಮನ್ ಅವರ ಸಂಗೀತ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಅಪರಿಚಿತ ವ್ಯಕ್ತಿಯೊಬ್ಬರು ಬಂದು ರಿಷಿ ಕಪೂರ್ ಕೈಗೆ ಫೋನ್ ನೀಡಿದ್ದರು. ‘ದಾವೂದ್ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ’ ಎಂದು ಆ ವ್ಯಕ್ತಿ ಹೇಳಿದ್ದನು. ಫೋನ್‌ನಲ್ಲಿ ಮಾತನಾಡಿದ ದಾವೂದ್, ರಿಷಿ ಕಪೂರ್ ಅವರನ್ನು ಖುದ್ದಾಗಿ ಚಹಾ ಕೂಟಕ್ಕೆ ಆಹ್ವಾನಿಸಿದ್ದನು. ಗ್ಯಾಂಗ್‌ಸ್ಟರ್‌ನಿಂದ ಬಂದ ಈ ದಿಢೀರ್ ಆಹ್ವಾನ ಕಂಡು ನಟನಿಗೆ ಆಶ್ಚರ್ಯವಾದರೂ, ಕೊನೆಗೆ ಭೇಟಿಯಾಗಲು ಒಪ್ಪಿಕೊಂಡಿದ್ದರು.
ಆ ಮೊದಲ ಭೇಟಿಯ ದಿನದ ನೆನಪನ್ನು ಹಂಚಿಕೊಂಡಿದ್ದ ರಿಷಿ ಕಪೂರ್, ತಮಗೆ ದಾವೂದ್ ಇದ್ದ ಜಾಗದ ದಾರಿ ತಿಳಿಯಬಾರದು ಎಂಬ ಕಾರಣಕ್ಕೆ ಒಂದು ಹೊಳೆಯುವ ರೋಲ್ಸ್ ರಾಯ್ಸ್ ಕಾರಿನಲ್ಲಿ ಕೂರಿಸಿಕೊಂಡು ಸುತ್ತಿ ಬಳಸಿ ಕರೆದುಕೊಂಡು ಹೋಗಲಾಗಿತ್ತು ಎಂದು ಬರೆದಿದ್ದಾರೆ. ಅಲ್ಲಿ ದಾವೂದ್ ಇಬ್ರಾಹಿಂ ಇವರನ್ನು ನಗುತ್ತಾ ಬರಮಾಡಿಕೊಂಡಿದ್ದನು. ಅವರೆಲ್ಲರೂ ಒಟ್ಟಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಮಯ ಕಳೆದಿದ್ದರು. ಅಲ್ಲಿ ಅವರಿಗೆ ಚಹಾ ಮತ್ತು ಬಿಸ್ಕತ್‌ಗಳನ್ನು ನೀಡಲಾಗಿತ್ತು. ದಾವೂದ್ ಸ್ವತಃ ಮದ್ಯಪಾನ ಮಾಡುವುದಿಲ್ಲ ಮತ್ತು ಬೇರೆಯವರಿಗೂ ಅಲ್ಲಿ ಮದ್ಯವನ್ನು ನೀಡುವುದಿಲ್ಲ ಎಂದು ರಿಷಿ ಕಪೂರ್ ನೆನಪಿಸಿಕೊಂಡಿದ್ದಾರೆ. ಮಾತುಕತೆಯ ನಡುವೆ ದಾವೂದ್ ಅತ್ಯಂತ ಆತ್ಮೀಯವಾಗಿ ನಡೆದುಕೊಂಡು, ‘ನಿಮಗೆ ಏನೇ ಸಹಾಯ ಬೇಕಿದ್ದರೂ, ಹಣಕಾಸಿನ ನೆರವು ಬೇಕಿದ್ದರೂ ಯಾವುದೇ ಮುಜುಗರವಿಲ್ಲದೆ ನನ್ನನ್ನು ಕೇಳಿ’ ಎಂದು ಆಫರ್ ಕೊಟ್ಟಿದ್ದನು. ಆ ವಾತಾವರಣ ಹೆದರಿಸುವಂತಿರದೆ, ಮರ್ಯಾದೆ ಕೊಡುವಂತಿತ್ತು ಎಂದು ನಟ ಹೇಳಿದ್ದಾರೆ.
ಇದಾದ ನಂತರ 1989 ರಲ್ಲಿ ಇವರಿಬ್ಬರ ಎರಡನೇ ಭೇಟಿ ಅನಿರೀಕ್ಷಿತವಾಗಿ ನಡೆದಿತ್ತು. ರಿಷಿ ಕಪೂರ್ ತಮ್ಮ ಪತ್ನಿ ನೀತು ಕಪೂರ್ ಅವರೊಂದಿಗೆ ದುಬೈನ ಶೂ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದಾಗ, ದಾವೂದ್ ತನ್ನ 8 ರಿಂದ 10 ಮಂದಿ ಬಾಡಿಗಾರ್ಡ್‌ಗಳ ಜೊತೆ ಅದೇ ಅಂಗಡಿಗೆ ಬಂದಿದ್ದನು. ನಟನನ್ನು ಗುರುತಿಸಿದ ದಾವೂದ್, ತಾನೇ ಮುಂದೆ ಬಂದು ಪ್ರೀತಿಯಿಂದ ಮಾತನಾಡಿಸಿದ್ದನು. ಅಷ್ಟೇ ಅಲ್ಲದೆ, ಆ ಅಂಗಡಿಯಲ್ಲಿ ರಿಷಿ ಕಪೂರ್ ದಂಪತಿ ಏನನ್ನು ಖರೀದಿಸಲು ಬಯಸುತ್ತಾರೋ, ಅದನ್ನೆಲ್ಲಾ ತಾನೇ ಕೊಡಿಸುವುದಾಗಿ ಹೇಳಿದ್ದನು. ಆದರೆ ರಿಷಿ ಕಪೂರ್ ನಯವಾಗಿಯೇ ಆ ಆಫರ್ ಅನ್ನು ತಿರಸ್ಕರಿಸಿದ್ದರು. ಅದೇ ಸಮಯದಲ್ಲಿ ದಾವೂದ್, ತನಗೆ ಭಾರತದಲ್ಲಿ ನ್ಯಾಯ ಸಿಗುವುದಿಲ್ಲ ಎಂದಿದ್ದಲ್ಲದೆ, ತನಗೆ ಹಲವು ರಾಜಕಾರಣಿಗಳ ಬೆಂಬಲವಿದೆ ಎಂದು ಹೇಳಿಕೊಂಡಿದ್ದನು. ಆದರೆ ರಿಷಿ ಕಪೂರ್, ‘ನನ್ನನ್ನು ಈ ರಾಜಕೀಯದ ವಿಷಯಗಳಿಂದ ದೂರವಿಡು ಗೆಳೆಯಾ, ನಾನು ಕೇವಲ ಒಬ್ಬ ನಟ’ ಎಂದು ಹೇಳಿ ಅಲ್ಲಿಂದ ಹೊರಟಿದ್ದರು.
ಇದನ್ನೂ ಓದಿ: ಆಲಿಯಾ, ದೀಪಿಕಾ, ಕತ್ರಿನಾ ಅಲ್ಲ, ರಣಬೀರ್ ಕಪೂರ್ ಮದುವೆಯನ್ನು ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್
ಡಿ-ಕಂಪನಿ ಎಂಬ ಕ್ರಿಮಿನಲ್ ನೆಟ್‌ವರ್ಕ್ ಹುಟ್ಟುಹಾಕಿರುವ ದಾವೂದ್ ಇಬ್ರಾಹಿಂ, ಪ್ರಸ್ತುತ ಭಾರತಕ್ಕೆ ಬೇಕಾಗಿರುವ ಅತ್ಯಂತ ಅಪಾಯಕಾರಿ ತಲೆಮರೆಸಿಕೊಂಡಿರುವ ಅಪರಾಧಿಯಾಗಿದ್ದಾನೆ. ವಿಶ್ವಸಂಸ್ಥೆ (UN) ಕೂಡ ಇವನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. 250 ಕ್ಕೂ ಹೆಚ್ಚು ಜನರ ಪ್ರಾಣ ಬಲಿಪಡೆದ ಮತ್ತು ನೂರಾರು ಜನರನ್ನು ಗಾಯಗೊಳಿಸಿದ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಇದೇ ದಾವೂದ್ ಆಗಿದ್ದಾನೆ. ಇದರ ಜೊತೆಗೆ ಸಂಘಟಿತ ಅಪರಾಧಗಳು, ಹಣ ವಸೂಲಿ, ಕಳ್ಳಸಾಗಣೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಹತ್ತಾರು ಕೃತ್ಯಗಳಲ್ಲಿ ಈ ಭೂಗತ ದೊರೆ ಭಾಗಿಯಾಗಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




