Saif Ali Khan: ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ ಸೈಫ್ ಸಿನಿಮಾ; ‘ಬಂಟಿ ಔರ್ ಬಬ್ಲಿ 2’ ಚಿತ್ರದ ಕಲೆಕ್ಷನ್ ಎಷ್ಟು?
Bunty Aur Babli 2’ box office collection: ಸೈಫ್ ಅಲಿ ಖಾನ್ ಹಾಗೂ ರಾಣಿ ಮುಖರ್ಜಿ 12 ವರ್ಷಗಳ ನಂತರ ಜೊತೆಯಾಗಿ ಕಾಣಿಸಿಕೊಂಡಿರುವ ‘ಬಂಟಿ ಔರ್ ಬಬ್ಲಿ 2’ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಚಿತ್ರದ ಗಳಿಕೆಯ ವಿವರ ಇಲ್ಲಿದೆ.
ಸೈಫ್ ಅಲಿ ಖಾನ್, ರಾಣಿ ಮುಖರ್ಜಿ ಅಭಿನಯದ ‘ಬಂಟಿ ಔರ್ ಬಬ್ಲಿ 2’ ಚಿತ್ರ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ವೀಕೆಂಡ್ ಮುಗಿಸಿ, ಮತ್ತೆರಡು ದಿನಗಳು ಕಳೆದರೂ ಕೂಡ ಕಲೆಕ್ಷನ್ನಲ್ಲಿ ಏರಿಕೆಯಾಗಿಲ್ಲ.ಇದು ಚಿತ್ರತಂಡಕ್ಕೆ ನಿರಾಸೆ ಉಂಟುಮಾಡಿದೆ. ಚಿತ್ರಬಿಡುಗಡೆಯಾದ ನಾಲ್ಕನೇ ದಿನವಾದ ಸೋಮವಾರ, ದೇಶಾದ್ಯಂತ ಈ ಚಿತ್ರ ಕೇವಲ ₹ 1 ಕೋಟಿಯಷ್ಟೇ ಗಳಿಸಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ ₹ 9 ಕೋಟಿ ಆಸುಪಾಸಿನಲ್ಲಿದೆ. ಬಾಕ್ಸಾಫೀಸ್ ಇಂಡಿಯಾ ಈ ಕುರಿತು ಮಾಹಿತಿ ನೀಡಿದ್ದು, ‘ಬಂಟಿ ಔರ್ ಬಬ್ಲಿ 2’ ನಾಲ್ಕು ದಿನಗಳಲ್ಲಿ ₹ 9 ಕೋಟಿ ಗಳಿಸಿದೆ ಎಂದಿದೆ. ಮಂಗಳವಾರದ ಕಲೆಕ್ಷನ್ ಸೇರಿಸಿದರೂ ಕೂಡ ಗಳಿಕೆ ₹ 10 ಕೋಟಿ ಆಸುಪಾಸಿನಲ್ಲಿರಲಿದೆ ಎನ್ನುವುದು ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ. ಆದರೆ ಚಿತ್ರಕ್ಕೆ ಸಮಾಧಾನಕರ ಸಂಗತಿಯೆಂದರೆ, ವಿದೇಶಗಳಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ನವೆಂಬರ್ 21ರವರೆಗೆ ವಿದೇಶದಲ್ಲಿ ಈ ಚಿತ್ರ ₹ 4.95 ಕೋಟಿ ಗಳಿಸಿದೆ. ಅಲ್ಲಿಗೆ ಒಟ್ಟಾರೆ ಚಿತ್ರ ಸುಮಾರು ₹ 14- ₹ 15 ಕೋಟಿ ಗಳಿಸಿದಂತಾಗಿದೆ.
ಕಾಮಿಡಿ- ಡ್ರಾಮಾ ಮಾದರಿಯ ‘ಬಂಟಿ ಔರ್ ಬಬ್ಲಿ 2’ ಚಿತ್ರ ಅಪಾರ ನಿರೀಕ್ಷೆ ಹುಟ್ಟುಹಾಕಿತ್ತು. ಪಕ್ಕಾ ಮನರಂಜನಾ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನಲಾಗಿತ್ತು. ಆದರೆ ಪ್ರೇಕ್ಷಕರು ಅದನ್ನು ಸಾರಾಸಗಟಾಗಿ ದೂರ ತಳ್ಳಿದ್ದಾರೆ. ಇದಲ್ಲದೇ ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿದ್ದು, ಉತ್ತಮ ಗಳಿಕೆ ಮಾಡುತ್ತಿರುವುದೂ ಕೂಡ, ಈ ಚಿತ್ರದ ಹಿನ್ನೆಡೆಗೆ ಕಾರಣವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ‘ಸೂರ್ಯವಂಶಿ’ಯಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪಕ್ಕಾ ಮಾಸ್ ಚಿತ್ರವಾಗಿದ್ದು, ಅಕ್ಷಯ್ ಕುಮಾರ್ ಭಯೋತ್ಪಾದನಾ ನಿಗ್ರಹ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರು ಇಷ್ಟಪಟ್ಟಿದ್ದು, ಚಿತ್ರ ಇದುವರೆಗೆ ಸುಮಾರು ₹ 179 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ.
‘ಬಂಟಿ ಔರ್ ಬಬ್ಲಿ 2’ ಚಿತ್ರಕ್ಕಾಗಿ ಸೈಫ್ ಅಲಿ ಖಾನ್ ಹಾಗೂ ರಾಣಿ ಮುಖರ್ಜಿ ಬರೋಬ್ಬರಿ 12 ವರ್ಷಗಳ ನಂತರ ಒಟ್ಟಾಗಿ ಬಣ್ಣ ಹಚ್ಚಿದ್ದಾರೆ. ರಾಣಿ ಮುಖರ್ಜಿ ಅವರೊಂದಿಗೆ ಇಷ್ಟು ವರ್ಷಗಳ ನಂತರ ಬಣ್ಣ ಹಚ್ಚಿದ್ದರ ಕುರಿತು ಇತ್ತೀಚೆಗೆ ಸೈಫ್ ಮಾತನಾಡಿದ್ದರು. ನಿಜವಾಗಿಯೂ ಇದೊಂದು ಉತ್ತಮ ಅನುಭವ. ತಮಾಷೆಯ, ಸಂತಸದ ಜರ್ನಿ ಇದಾಗಿತ್ತು ಎಂದು ಅವರು ಹೇಳಿದ್ದರು.
ವರುಣ್ ವಿ.ವರ್ಮಾ ನಿರ್ದೇಶಿಸಿರುವ ‘ಬಂಟಿ ಔರ್ ಬಬ್ಲಿ 2’ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಶಾರ್ವರಿ ವಾಘ್, ಸಿದ್ಧಾಂತ್ ಚತುರ್ವೇದಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ
ಸೈಫ್ ಅಲಿ ಖಾನ್ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್ ನೀಡಲು ಅಡ್ಡಿಪಡಿಸಿದ ಮಗ ಜೇಹ್
Published On - 8:26 am, Wed, 24 November 21