ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಿದ್ದು ಆಟೋದಲ್ಲಿ; ಸಹಾಯಕ್ಕೆ ಬಂದಿದ್ದು ಈ ವ್ಯಕ್ತಿ
ಸೈಫ್ ಅಲಿ ಖಾನ್ ಅವರು ಕಳ್ಳನ ದಾಳಿಯಿಂದ ಗಾಯಗೊಂಡಿದ್ದಾರೆ. ಕಳ್ಳನ ಚಾಕುವಿನಿಂದ ಆರು ಕಡೆ ಗಾಯಗೊಂಡ ಸೈಫ್ ಅವರನ್ನು ತಕ್ಷಣ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆನ್ನಿಗೆ ತೀವ್ರ ಗಾಯಗಳಾಗಿವೆ. ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸೈಫ್ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ.
ಸೈಫ್ ಅಲಿ ಖಾನ್ ಅವರು ಸ್ಟಾರ್ ಹೀರೋ. ಅವರ ಬಳಿ ಹಲವು ಐಷಾರಾಮಿ ಕಾರುಗಳು ಇವೆ. ಅವರು ಕಳ್ಳನು ಮಾಡಿದ ದಾಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಕಳ್ಳ ಇರಿದ ಚಾಕುವಿನಿಂದ ಸಾಕಷ್ಟು ಕಡೆಗಳಲ್ಲಿ ಸೈಫ್ಗೆ ಗಾಯಗಳಾಗಿವೆ. ಈ ವೇಳೆ ಸಹಾಯಕ್ಕೆ ಬಂದಿದ್ದು ಅವರ 23 ವರ್ಷದ ಮಗ ಇಬ್ರಾಹಿಮ್. ಸೈಫ್ನ ಆಸ್ಪತ್ರೆಗೆ ಸೇರಿಸಿದ್ದು ಇವರೇ. ಅದು ಕೂಡ ಆಟೋದಲ್ಲಿ ಅನ್ನೋದು ವಿಶೇಷ.
ಬೆಳಿಗ್ಗೆ 2.30 ಸುಮಾರಿಗೆ ಮನೆಯಲ್ಲಿ ಗಲಾಟೆ ಕೇಳಿ ಸೈಫ್ ಅವರಿಗೆ ಎಚ್ಚರವಾಗಿದೆ. ಎದ್ದು ನೋಡಿದಾಗ ಸೈಫ್ ಅಲಿ ಖಾನ್ಗೆ ಕಳ್ಳ ಕಾಣಿಸಿದ್ದಾನೆ. ಆತನ ತಡೆದಾಗ ಸೈಫ್ ಮೇಲೆ ಹಲ್ಲೆ ನಡೆದಿದೆ. ಈ ವೇಳೆ ಕತ್ತು, ಬೆನ್ನು ಸೇರಿ ಆರು ಕಡೆಗಳಲ್ಲಿ ಗಾಯಗಳಾಗಿವೆ. ಅದರಲ್ಲೂ ಬೆನ್ನಿನ ಭಾಗಕ್ಕೆ ಸೈಫ್ಗೆ ತೀವ್ರವಾಗಿ ಗಾಯವಾಗಿತ್ತು. ಚಾಕುವಿನ ಚೂರು ಕೂಡ ಅವರ ಬೆನ್ನಿನಲ್ಲೇ ಉಳಿದುಕೊಂಡು ಬಿಟ್ಟಿತ್ತು.
ಇದನ್ನೂ ಓದಿ: ಸೈಫ್ ಅಲಿ ಖಾನ್ನ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಶಾರುಖ್; ಧೈರ್ಯ ತುಂಬಿದ ದಕ್ಷಿಣದ ನಟರು
ರಕ್ತದ ಮಡುವಿನಲ್ಲಿ ತಂದೆಯನ್ನು ನೋಡಿದ ಇಬ್ರಾಹಿಂ ಶಾಕ್ಗೆ ಒಳಗಾದರು. ತಕ್ಷಣ ಅವರು ಕಾರಿನಲ್ಲಿ ತಂದೆಯನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ, ಯಾವ ಕಾರುಗಳೂ ಸಿದ್ಧವಿರಲಿಲ್ಲ. ಈ ಕಾರಣಕ್ಕೆ ಮನೆಯ ಹೊರಕ್ಕೆ ತೆರಳಿ ಆಟೋನ ಕರೆದುಕೊಂಡು ಬಂದರು. ಆಟೋದಲ್ಲಿ ಸೈಫ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕರೀನಾ ಕಪೂರ್ ಅವರು ಮನೆಯಲ್ಲಿ ಟೆನ್ಷನ್ನಿಂದ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
View this post on Instagram
ಎಷ್ಟು ದೂರ?
ಸೈಫ್ ಅಲಿ ಖಾನ್ ಅವರು ಸದ್ಗುರು ಶರಣ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಅಲ್ಲಿಂದ ಲೀಲಾವತಿ ಆಸ್ಪತ್ರೆ ಕೇವಲ 1.6 ಕಿ.ಮೀ. ದೂರ. ಮುಂಜಾನೆ ಕೇವಲ 5 ನಿಮಿಷಗಳಲ್ಲಿ ಆಸ್ಪತ್ರೆ ತಲುಪಬಹುದು. ಸರಿಯಾದ ಸಮಯಕ್ಕೆ ಆಟೋ ಸಿಕ್ಕಿದ್ದರಿಂದ ಅವರು ಆಸ್ಪತ್ರೆ ಸೇರಲು ಸಹಕಾರಿ ಆಯಿತು. ಈಗ ಸೈಫ್ ಅವರಿಗೆ ಸರ್ಜರಿ ಪೂರ್ಣಗೊಂಡಿದ್ದು, ಅವರು ಚೇತರಿಕೆ ಕಾಣುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Thu, 16 January 25