ಸಲ್ಮಾನ್ ಖಾನ್ಗೆ ಹಾವು ಕಡಿತ; ಮಧ್ಯ ರಾತ್ರಿ ಆಸ್ಪತ್ರೆಗೆ ದಾಖಲು: ಈಗ ಹೇಗಿದೆ ಸಲ್ಲು ಆರೋಗ್ಯ ಸ್ಥಿತಿ?
Salman Khan Hospitalized: ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ (ಡಿ.25) ತಡರಾತ್ರಿ ಹಾವು ಕಚ್ಚಿದೆ. ಭಾನುವಾರ ಬೆಳಗ್ಗೆವರೆಗೂ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಹಾವು ಕಚ್ಚಿದೆ. ಶನಿವಾರ (ಡಿ.25) ರಾತ್ರಿ ಈ ಘಟನೆ ನಡೆದಿದೆ. ಫಾರ್ಮ್ಹೌಸ್ನಲ್ಲಿ ಸಲ್ಮಾನ್ ಖಾನ್ಗೆ ಹಾವು ಕಚ್ಚಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹಾವು ಕಚ್ಚಿದ (Snake Bite) ಬಳಿಕ ಅವರ ಆಪ್ತ ವಲಯಕ್ಕೆ ತುಂಬ ಗಾಬರಿ ಆಯಿತು. ಅದೃಷ್ಟವಶಾತ್ ಆ ಹಾವು ಹೆಚ್ಚು ವಿಷಪೂರಿತ ಆಗಿರಲಿಲ್ಲ ಎಂಬುದು ನಂತರ ತಿಳಿಯಿತು. ಭಾನುವಾರ ಬೆಳಗ್ಗೆವರೆಗೂ ಸಲ್ಮಾನ್ ಖಾನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿರುವ ಪನ್ವೇಲ್ನಲ್ಲಿ ಸಲ್ಮಾನ್ ಖಾನ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಹೆಚ್ಚಾಗಿ ತಮ್ಮ ಫಾರ್ಮ್ಹೌಸ್ನಲ್ಲಿಯೇ ಕಾಲ ಕಳೆಯುತ್ತಾರೆ. ಮೊದಲ ಬಾರಿ ಲಾಕ್ಡೌನ್ ಆದಾಗಲೂ ಅವರು ಈ ಫಾರ್ಮ್ಹೌಸ್ನಲ್ಲಿ ವಾಸವಾಗಿದ್ದರು. ಶನಿವಾರ (ಡಿ.25) ಕೂಡ ಸಲ್ಲು ಅಲ್ಲಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಡಿ.27ರಂದು ಸಲ್ಮಾನ್ ಖಾನ್ ಜನ್ಮದಿನ. ಆ ಪ್ರಯುಕ್ತ ಈಗಾಗಲೇ ಒಂದಷ್ಟು ತಯಾರಿ ನಡೆದಿತ್ತು. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಸಂಬಂಧಿಕರ ಜತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಈಗ ಅವರಿಗೆ ಹಾವು ಕಚ್ಚಿರುವುದರಿಂದ ಬರ್ತ್ಡೇ ಪಾರ್ಟಿ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ಸಲ್ಲು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಹಾವು ಕಚ್ಚಿರುವ ಬಗ್ಗೆ ಸಲ್ಮಾನ್ ಖಾನ್ ಅಥವಾ ಅವರ ಕುಟುಂಬದವರ ಕಡೆಯಿಂದ ಈವರೆಗೆ ಯಾವುದೇ ಹೇಳಿಕೆ ನೀಡಲಾಗಿಲ್ಲ. ತಮ್ಮ ಆರೋಗ್ಯದ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಅಪ್ಡೇಟ್ ನೀಡಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಬರ್ತ್ಡೇ ಹೊಸ್ತಿಲಲ್ಲೇ ಈ ರೀತಿ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ:
ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್ ಖಾನ್; ಅನಿಲ್ ಕಪೂರ್ ಹೇಳಿದ ಅಚ್ಚರಿ ವಿಷಯ
‘ನಾನು ದೊಡ್ಡವನಾದ್ಮೇಲೆ ರಾಮ್ ಚರಣ್, ಜ್ಯೂ. ಎನ್ಟಿಆರ್ ರೀತಿ ಡ್ಯಾನ್ಸ್ ಮಾಡ್ತೀನಿ’: ಸಲ್ಮಾನ್ ಖಾನ್
Published On - 1:11 pm, Sun, 26 December 21