‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ?
‘ದಿ ಫ್ಯಾಮಿಲಿ ಮ್ಯಾನ್’ ಡೈರೆಕ್ಟರ್ ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಅವರು ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕಥೆ ನಡೆದಿದ್ದು, ಆ್ಯಕ್ಷನ್-ಕಾಮಿಡಿ ಶೈಲಿಯ ಸಿನಿಮಾಗಾಗಿ ಪ್ಲ್ಯಾನ್ ಮಾಡಲಾಗುತ್ತಿದೆ. ಈ ಬಗ್ಗೆ ಸಲ್ಮಾನ್ ಖಾನ್ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎಲ್ಲವೂ ಅಂತೆ-ಕಂತೆಯ ಹಂತದಲ್ಲಿದೆ.

ನಟ ಸಲ್ಮಾನ್ ಖಾನ್ (Salman Khan) ಅವರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡಿಲ್ಲ. ಬೇರೆ ಹೀರೋಗಳೆಲ್ಲ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದರೆ ಸಲ್ಮಾನ್ ಖಾನ್ ಅವರ ಸಿನಿಮಾಗಳು ಜಸ್ಟ್ ಪಾಸ್ ಆಗಲು ಕಷ್ಟಪಡುತ್ತಿವೆ. ಹಾಗಾಗಿ ಅವರು ಒಂದು ಗೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಅವರು ನಟಿಸಿರುವ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ನಡುವೆ ಅವರು ಹೊಸ ಸಿನಿಮಾದ ಮಾತುಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೇಳಿಬಂದಿರುವ ಸುದ್ದಿಯ ಪ್ರಕಾರ, ರಾಜ್-ಡಿಕೆ (Raj DK) ಜೊತೆಯಲ್ಲಿ ಸಿನಿಮಾ ಮಾಡಲು ಸಲ್ಮಾನ್ ಖಾನ್ ಆಲೋಚಿಸುತ್ತಿದ್ದಾರೆ.
ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರಿಗೆ ಚಿತ್ರರಂಗದಲ್ಲಿ ಮತ್ತು ವೆಬ್ ಸಿರೀಸ್ ಕ್ಷೇತ್ರದಲ್ಲಿ ಸಖತ್ ಬೇಡಿಕೆ ಇದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಮೂಲಕ ಅವರಿಬ್ಬರು ಅಪಾರ ಖ್ಯಾತಿ ಗಳಿಸಿದ್ದಾರೆ. ಅವರ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಅವರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಅವರು ಆ್ಯಕ್ಷನ್-ಕಾಮಿಡಿ ಶೈಲಿಯ ಸಿನಿಮಾ ಮಾಡುವ ನಿರೀಕ್ಷೆ ಇದೆ. ನಿರ್ದೇಶಕರು ಹೇಳಿರುವ ಬೇಸಿಕ್ ಐಡಿಯಾ ಕೇಳಿ ಸಲ್ಮಾನ್ ಖಾನ್ ಮೆಚ್ಚಿಕೊಂಡಿದ್ದಾರಂತೆ. ಆದರೆ ಈ ಸಿನಿಮಾ ಸೆಟ್ಟೇರಲು ಇನ್ನೂ ಹಲವು ಅಂಶಗಳು ಕೂಡಿಬರಬೇಕು. ಅಂತಿಮವಾಗಿ ಸಲ್ಮಾನ್ ಖಾನ್ ಅವರು ಗ್ರೀನ್ ಸಿಗ್ನಲ್ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
‘ಎಲ್ಲವೂ ಅಂದುಕೊಂಡಂತೆ ನಡೆದರೆ ಸಲ್ಮಾನ್ ಖಾನ್ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. 2026ರ ಅಂತ್ಯದ ವೇಳೆ ಸಿನಿಮಾದ ಶೂಟಿಂಗ್ ಆರಂಭಿಸಲು ರಾಜ್ ಮತ್ತು ಡಿಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ’ ಎಂದು ಮೂಲಗಳು ಹೇಳಿರುವುದಾಗಿ ಪಿಂಕ್ವಿಲ್ಲಾ ವರದಿ ಮಾಡಿದೆ. ಸದ್ಯಕ್ಕೆ ಎಲ್ಲವೂ ಅಂತೆ-ಕಂತೆಗಳ ಹಂತದಲ್ಲಿ ಇವೆ.
ಇದನ್ನೂ ಓದಿ: ‘ಗಲ್ವಾನ್’ ಟ್ರೇಲರ್ ಮೂಲಕ ಟ್ರೋಲ್ ಆದ ಸಲ್ಮಾನ್ ಖಾನ್; ನೆನಪಾಯ್ತು GOT ದೃಶ್ಯ
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ 2025ರಲ್ಲಿ ಬಿಡುಗಡೆ ಆಯಿತು. ಆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು. ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು. ಈಗ ‘ಬ್ಯಾಟಲ್ ಆಫ್ ಗಲ್ಮಾನ್’ ಚಿತ್ರವಾದರೂ ಗೆಲ್ಲುತ್ತಾ ಎಂಬ ಕೌತುಕದೊಂದಿಗೆ ಸಿನಿಪ್ರಿಯರು ಈ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




