Salman Khan: ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದವರಿಗೆ ಸಲ್ಮಾನ್ ಖಾನ್ ಹೇಳಿದ ಬುದ್ಧಿಮಾತು ಏನು?
Tiger 3 Movie Fireworks: ‘ಟೈಗರ್ 3’ ಶೋ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ನೋಡುತ್ತಿದ್ದಾಗ ಪಟಾಕಿ ಸಿಡಿದ ಕಾರಣ ಅನೇಕರು ಹೊರಗೆ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಆತಂಕ ಮೂಡಿಸುವಂತಿರುವ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅತಿರೇಕದ ಅಭಿಮಾನ ಪ್ರದರ್ಶಿಸುವವರೂ ಕಮ್ಮಿ ಏನಿಲ್ಲ. ‘ಟೈಗರ್ 3’ ಸಿನಿಮಾ (Tiger 3 Movie) ಪ್ರದರ್ಶನ ಆಗುವಾಗ ಚಿತ್ರಮಂದಿರದ ಒಳಗೆ ಕೆಲವರು ಪಟಾಕಿ ಸಿಡಿಸಿದ್ದೇ ಇದಕ್ಕೆ ಲೇಟಸ್ಟ್ ಉದಾಹರಣೆ. ಈ ಘಟನೆಯನ್ನು ಸಲ್ಮಾನ್ ಖಾನ್ ಖಂಡಿಸಿದ್ದಾರೆ. ಭಾರಿ ಅನಾಹುತಕ್ಕೆ ಕಾರಣ ಆಗಬಹುದಾಗಿದ್ದ ಈ ಕೃತ್ಯ ಎಸಗಿದವರಿಗೆ ಸಲ್ಲು ಬುದ್ಧಿಮಾತು ಹೇಳಿದ್ದಾರೆ. ಥಿಯೇಟರ್ ಒಳಗೆ ಪಟಾಕಿ ಸಿಡಿದ (Fireworks) ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ನೋಡುತ್ತಿದ್ದಾಗ ಪಟಾಕಿ ಸಿಡಿದ ಕಾರಣ ಅನೇಕರು ಹೊರಗೆ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಇದಕ್ಕೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
‘ಟೈಗರ್ 3 ಸಿನಿಮಾದ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಪಟಾಕಿ ಹಚ್ಚಿದ್ದರ ಬಗ್ಗೆ ತಿಳಿಯಿತು. ಇದು ತುಂಬ ಅಪಾಯಕಾರಿ. ಬೇರೆಯವರನ್ನು ಮತ್ತು ನಮ್ಮನ್ನು ಅಪಾಯಕ್ಕೆ ಒಡ್ಡಿಕೊಳ್ಳದೇ ಸಿನಿಮಾ ನೋಡೋಣ. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಸಲ್ಮಾನ್ ಖಾನ್ ಅವರು ಪೋಸ್ಟ್ ಮಾಡಿದ್ದಾರೆ. ಆತಂಕ ಮೂಡಿಸುವಂತಿರುವ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕೂಡ ಖಾರವಾಗಿ ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಹುಚ್ಚು ಅಭಿಮಾನಿಗಳ ಕೃತ್ಯವನ್ನು ಅನೇಕರು ಟೀಕಿಸಿದ್ದಾರೆ.
I’m hearing about fireworks inside theaters during Tiger3. This is dangerous. Let’s enjoy the film without putting ourselves and others at risk. Stay safe.
— Salman Khan (@BeingSalmanKhan) November 13, 2023
ಚಿತ್ರಮಂದಿರದ ಒಳಗೆ ಹಲವು ಪಟಾಕಿಗಳು ಸಿಡಿದಿವೆ. ಅದೃಷ್ಟವಶಾತ್ ಥಿಯೇಟರ್ಗೆ ಬೆಂಕಿ ಹೊತ್ತಿಕೊಂಡಿಲ್ಲ. ಆಗಬಹುದಾಗಿದ್ದ ದೊಡ್ಡ ಅನಾಹುತ ಸದ್ಯದಲ್ಲೇ ತಪ್ಪಿಹೋಗಿದೆ. ಅಂದಹಾಗೆ, ಸಲ್ಮಾನ್ ಖಾನ್ ಅವರ ಸಿನಿಮಾದ ಪ್ರದರ್ಶನದ ವೇಳೆ ಪಟಾಕಿ ಸಿಡಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ‘ಅಂತಿಮ್: ದ ಫೈನಲ್ ಟ್ರುತ್’ ಸಿನಿಮಾದ ಪ್ರದರ್ಶನದ ವೇಳೆಯೂ ಇದೇ ರೀತಿ ಮಾಡಲಾಗಿತ್ತು. ಆಗಲೂ ಕೂಡ ಸಲ್ಮಾನ್ ಖಾನ್ ಅವರು ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ದರು.
This is dangerous..pic.twitter.com/tj0fqXyVE4
— Gargi (@Gargijii) November 13, 2023
‘ಆಡಿಟೋರಿಯಂ ಒಳಗಡೆ ಪಟಾಕಿ ತೆಗೆದುಕೊಂಡು ಹೋಗಬಾರದು ಅಂತ ನಾನು ನನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅದರಿಂದ ದೊಡ್ಡ ಅಗ್ನಿ ಅನಾಹುತ ಸಂಭವಿಸಬಹುದು. ನಮ್ಮ ಜೀವಕ್ಕೂ, ಇತರರ ಜೀವಕ್ಕೂ ಹಾನಿ ಆಗಬಹುದು. ಚಿತ್ರಮಂದಿರದ ಒಳಗೆ ಪಟಾಕಿ ತರಲು ಅವಕಾಶ ನೀಡಬಾರದು ಅಂತ ಥಿಯೇಟರ್ ಮಾಲಿಕರ ಬಳಿ ಕೇಳಿಕೊಳ್ಳುತ್ತೇನೆ. ಪಟಾಕಿಯನ್ನು ಒಳಗೆ ತರದಂತೆ ಸೆಕ್ಯುರಿಟಿಯವರು ಪ್ರವೇಶ ದ್ವಾರದಲ್ಲೇ ತಡೆಯಬೇಕು. ಎಲ್ಲ ರೀತಿಯಿಂದಲೂ ಸಿನಿಮಾ ಎಂಜಾಯ್ ಮಾಡಿ. ಆದರೆ ಇಂಥದನ್ನು ಮಾತ್ರ ಮಾಡಬೇಡಿ. ಇದು ನನ್ನ ಮನವಿ’ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.