
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ‘ಬಿಗ್ ಬಾಸ್ 20’ ವೇದಿಕೆಯಲ್ಲಿ ಶರ್ಟ್‌ಲೆಸ್ ಆಗಿ ಮಿಂಚಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತಾವು ಶರ್ಟ್ ಬಿಚ್ಚಿದ್ದು ಬಾಡಿ ಪ್ರದರ್ಶಿಸುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ತಾವು ಇನ್ನೂ ಫಿಟ್ ಆಗಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಕಳೆದ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಸಾಮಾಜಿಕ ಜಾಲತಾಣಗಳ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಶರ್ಟ್ ತೆರೆದು ತಮ್ಮ ಬಾಡಿ ಹೇಗಿದೆ ಎಂದು ತೋರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಾಡಿ ಶೇಮಿಂಗ್ ಮಾಡುವವರ ವಿಕೃತ ಮನಸ್ಥಿತಿಯನ್ನು ಪ್ರಶ್ನಿಸಲು ಅವರು ಈ ಹಂತಕ್ಕೆ ಹೋಗಿದ್ದರು.
ಇತ್ತೀಚಿನ ಸಂಚಿಕೆಯಲ್ಲಿ ಈ ವೈರಲ್ ಪ್ರಸಂಗದ ಕುರಿತು ತಮಾಷೆಯಾಗಿ ಮಾತನಾಡಿದ ಸಲ್ಮಾನ್, ‘ನಾನು ಶರ್ಟ್ ತೆಗೆದದ್ದು ನನ್ನ ಬಳಿ ಈಗ ಸಿಕ್ಸ್ ಪ್ಯಾಕ್ ಇಲ್ಲ ಎಂಬುದನ್ನು ತೋರಿಸಲು. ನಾನು ಪೂರ್ತಿ ಫಿಟ್ ಆಗಿದ್ದೇನೆ ಎಂದು ಬಿಲ್ಡಪ್ ಕೊಡಲು ಆ ರೀತಿ ಮಾಡಲಿಲ್ಲ’ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಅವರು ಫಿಟ್ ಆಗಿ ಜನರ ಮುಂದೆ ಬರುವುದಾಗಿ ತಿಳಿಸಿದ್ದಾರೆ.
‘ಜನರಿಗೆ ನನ್ನ ಬಾಡಿ ಯಾಕೆ ಇಷ್ಟವಾಯಿತೋ ನನಗಂತೂ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಾನಿನ್ನೂ ಫಿಟ್ ಆಗಿಲ್ಲ. ಮುಂದಿನ ಸಿನಿಮಾಗಾಗಿ ಬಾಡಿ ರೆಡಿ ಮಾಡಲು ನನಗಿನ್ನೂ 1ರಿಂದ 2 ತಿಂಗಳ ಕಾಲಾವಕಾಶ ಬೇಕಿದೆ. ಇದು ಇನ್ನೂ ‘ವರ್ಕ್ ಇನ್ ಪ್ರೋಗ್ರೆಸ್’ನಲ್ಲಿದೆ. ನಾನು ಫಿಟ್ ಆದ ಮೇಲೆ ತೋರಿಸಲಿಲ್ಲ, ಬದಲಾಗಿ ಅನ್‌ಫಿಟ್ ಆಗಿದ್ದಾಗಲೇ ತೋರಿಸಿದೆ’ ಎಂದು ಸಲ್ಮಾನ್ ಖಾನ್ ನಗುತ್ತಾ ವಿವರಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 20: ಹಳೆಯ ದಾಖಲೆ ಮುರಿದ ಸಲ್ಮಾನ್ ಖಾನ್ ಶರ್ಟ್‌ಲೆಸ್ ಸಂಚಿಕೆ
‘ಜನರನ್ನು ಏಕೆ ಟ್ರೋಲ್ ಮಾಡುತ್ತೀರಿ? ಟ್ರೋಲ್ ಮಾಡುವ ಮನಸ್ಥಿತಿ ಏನು? ನನ್ನ ಮೇಲೂ ಈ ರೀತಿ ನಡೆದಿದೆ. ಬಾಯ್ ದಪ್ಪ ಆಗಿದ್ದಾನೆ ಎಂದು ಕಾಮೆಂಟ್ ಮಾಡುತ್ತಾರೆ. ಬನ್ನಿ, ಈಗ ನನ್ನನ್ನು ಟ್ರೋಲ್ ಮಾಡಿ’ ಎಂದು ಸವಾಲು ಎಸೆಯುತ್ತಾ ಸಲ್ಮಾನ್ ಖಾನ್ ಅವರು ತಮ್ಮ ಹ್ಯಾಟ್, ಜಾಕೆಟ್ ಮತ್ತು ಶರ್ಟ್ ತೆಗೆದು ಬಾಡಿ ಪ್ರದರ್ಶಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.