ಬುಲೆಟ್ಪ್ರೂಫ್ ಗಾಜಿನ ಹಿಂದೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ ಸಲ್ಮಾನ್ ಖಾನ್
ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರು ಎಚ್ಚರಿಕೆ ವಹಿಸಿದ್ದಾರೆ. ಬಾಲ್ಕನಿಗೆ ಬರುವ ಬದಲು ಬುಲೆಟ್ಪ್ರೂಫ್ ಗ್ಲಾಸ್ನ ಹಿಂಬದಿಯಲ್ಲಿ ನಿಂತು ಅವರು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಸೇರಿದ್ದರು.

ನಟ ಸಲ್ಮಾನ್ ಖಾನ್ (Salman Khan) ಅವರು ಪ್ರತಿ ವರ್ಷ ಈದ್ (Eid) ಪ್ರಯುಕ್ತ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಮುಂಬೈನಲ್ಲಿ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಅವರು ಕೈ ಬೀಸುತ್ತಾರೆ. ಆದರೆ ಅವರಿಗೆ ಜೀವ ಬೆದರಿಕೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾದ್ದು ಅನಿವಾರ್ಯ. ಹಾಗಾಗಿ ಈ ಬಾರಿ ಅವರು ತೆರೆದ ಬಾಲ್ಕನಿಯಲ್ಲಿ ನಿಂತಿಲ್ಲ. ಬದಲಿಗೆ, ಬುಲೆಟ್ಪ್ರೂಫ್ ಗಾಜಿನ (Bulletproof Glass) ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅವರ ಜೊತೆ ಕುಟುಂಬದವರು ಕೂಡ ಸಾಥ್ ನೀಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಸಲ್ಮಾನ್ ಖಾನ್ ಅವರಿಗೆ ಈ ವರ್ಷದ ಈದ್ ಹಬ್ಬ ಅಷ್ಟೇನೂ ವಿಶೇಷವಲ್ಲ ಎಂದೇ ಹೇಳಬೇಕು. ಯಾಕೆಂದರೆ, ಅವರು ನಟಿಸಿದ ‘ಸಿಕಂದರ್’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಅಪ್ಪಟ ಅಭಿಮಾನಿಗಳು ಮಾತ್ರ ಈ ಚಿತ್ರವನ್ನು ಹೊಗಳಿದ್ದಾರೆ. ಆದರೆ ಇನ್ನುಳಿದ ಪ್ರೇಕ್ಷಕರು ಈ ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ. ಅದರ ನಡುವೆಯೂ ಸಲ್ಮಾನ್ ಖಾನ್ ಅವರು ಅಭಿಮಾನಿಗಳನ್ನು ನಿರಾಸೆ ಮಾಡಿಲ್ಲ. ಎಂದಿನಂತೆ ಅವರು ದರ್ಶನ ನೀಡಿದ್ದಾರೆ.
ದೇಶಾದ್ಯಂತ ಸಲ್ಮಾನ್ ಖಾನ್ ಅವರಿಗೆ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ನೇರವಾಗಿ ನೋಡಬೇಕು ಎಂದು ಫ್ಯಾನ್ಸ್ ಯಾವಾಗಲೂ ಕಾಯುತ್ತಾರೆ. ವಿಶೇಷ ದಿನಗಳಲ್ಲಿ ಸಲ್ಮಾನ್ ಖಾನ್ ಅವರು ಮನೆ ಎದುರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಇತ್ತೀಚೆಗೆ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಆದ್ದರಿಂದ ಈ ಬಾರಿ ಈದ್ ಪ್ರಯುಕ್ತ ಅವರು ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ ಅವರು ಬುಲೆಟ್ಪ್ರೂಫ್ ಗ್ಲಾಸ್ ಹಾಕಿಸಿಕೊಂಡು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’; ಸಲ್ಮಾನ್-ರಶ್ಮಿಕಾ ಸಿನಿಮಾಗೆ ಸೋಲು
ಇಂದು (ಮಾರ್ಚ್ 31) ಸಲ್ಮಾನ್ ಖಾನ್ ಮನೆಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಲ್ಮಾನ್ ಖಾನ್ ಅವರು ಬಿಳಿ ಕುರ್ತಾ ಧರಿಸಿ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದರು. ಅವರ ಜೊತೆ ಸಹೋದರಿ ಅರ್ಪಿತಾ ಖಾನ್ ಮಕ್ಕಳಾದ ಆಹಿಲ್ ಮತ್ತು ಅಯಾತ್ ಕೂಡ ಇದ್ದರು.
Shukriya Thank you aur sab ko Eid Mubarak! pic.twitter.com/EaW0CeaZWi
— Salman Khan (@BeingSalmanKhan) March 31, 2025
ಈ ಸಂರ್ಭದ ವಿಡಿಯೋವನ್ನು ಸಲ್ಮಾನ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಇಷ್ಟೆಲ್ಲ ಪ್ರೀತಿ ತೋರಿಸುವ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.