
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ (Battle of Galwan) ಸಿನಿಮಾದ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ ಈಗ ಯಾವುದೇ ಸೂಚನೆ ನೀಡದೇ ಚಿತ್ರತಂಡದವರು ಶೀರ್ಷಿಕೆ ಬದಲಾವಣೆ ಮಾಡಿದ್ದಾರೆ. ‘ಬ್ಯಾಟಲ್ ಆಫ್ ಗಲ್ವಾನ್’ ಬದಲಿಗೆ ‘ಮಾತೃಭೂಮಿ’ (Maatrubhoomi) ಎಂದು ನಾಮಕರಣ ಮಾಡಲಾಗಿದೆ. ಮಾರ್ಚ್ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ಸಲ್ಮಾನ್ ಖಾನ್ (Salman Khan), ‘ಯುದ್ಧಕ್ಕೆ ಶಾಂತಿ ಸಿಗಲಿ’ ಎಂಬ ಕ್ಯಾಪ್ಶನ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಹೊಸ ಪೋಸ್ಟರ್ನಲ್ಲಿ ಸಲ್ಮಾನ್ ಖಾನ್ ರಕ್ತಸಿಕ್ತ ಮುಖದೊಂದಿಗೆ ಕಾಣಿಸಿಕೊಂಡಿದ್ದು, ಮುಳ್ಳುತಂತಿಗಳಿಂದ ಸುತ್ತಲ್ಪಟ್ಟ ಕಂಬವೊಂದನ್ನು ತಡೆಯುತ್ತಿರುವ ದೃಶ್ಯವಿದೆ. ಚಿತ್ರದ ಹೊಸ ಶೀರ್ಷಿಕೆ ಪೋಸ್ಟರ್ನಲ್ಲಿ ಎದ್ದು ಕಾಣುತ್ತಿದೆ. ಈ ಹಿಂದೆ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು, ಆದರೆ ಹೊಸ ಪೋಸ್ಟರ್ನಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.
ಶೀರ್ಷಿಕೆ ಬದಲಾವಣೆ ಬಗ್ಗೆ ಮಾತನಾಡಿರುವ ನಿರ್ದೇಶಕ ಅಪೂರ್ವ ಲಖಿಯಾ, ‘ಇದು ದಿಢೀರ್ ನಿರ್ಧಾರವಲ್ಲ. ನಾವು ಮೊದಲಿನಿಂದಲೂ ಬ್ಯಾಟಲ್ ಆಫ್ ಗಲ್ವಾನ್ ಮತ್ತು ಮಾತೃಭೂಮಿ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು. ಚಿತ್ರೀಕರಣದ ಹಂತದಲ್ಲಿ ನಮಗೆ ಇದು ಕೇವಲ ಒಂದು ಯುದ್ಧದ ಕಥೆಯಲ್ಲ, ಬದಲಾಗಿ ಮಾನವೀಯತೆ, ಸಹಾನುಭೂತಿ ಮತ್ತು ಸೈನಿಕರ ಹೋರಾಟಗಳ ಕಥೆ ಎಂದು ಅರಿವಾಯಿತು. ಹಾಗಾಗಿ ಮಾತೃಭೂಮಿ ಎಂಬ ಹೆಸರು ಹೆಚ್ಚು ಸೂಕ್ತವೆನಿಸಿತು’ ಎಂದು ವಿವರಿಸಿದ್ದಾರೆ.
‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆಗೆ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. 2020ರ ಗಲ್ವಾನ್ ಸಂಘರ್ಷದ ಆಧಾರಿತ ಈ ಚಿತ್ರದ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಿನಿಮಾ ವಾಸ್ತವವನ್ನು ತಿರುಚುತ್ತಿದೆ ಮತ್ತು ಚೀನಾ ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿದೆ ಎಂದು ಆಕ್ಷೇಪ ಎತ್ತಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ
‘ಮಾತೃಭೂಮಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಸಲ್ಮಾನ್ ಖಾನ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶೀರ್ಷಿಕೆ ಬದಲಾವಣೆಯ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಶೀರ್ಷಿಕೆ ಬದಲಾವಣೆಯೋ ಅಥವಾ ಹೊಸ ಸಿನಿಮಾದ ಶೀರ್ಷಿಕೆಯೋ ಎಂಬ ಕಮೆಂಟ್ಗಳು ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.