ವಿಮಾನದಲ್ಲಿ ಅಕ್ಕಪಕ್ಕ ಕುಳಿತ್ಕೊಂಡು ಹೋಗ್ಬೋದು, ಥಿಯೇಟರ್ನಲ್ಲಿ ಯಾಕೆ ಕೂರೋ ಹಾಗಿಲ್ಲ?; ಗರಂ ಆದ ಬನ್ಸಾಲಿ
Sanjay Leela Bansali: ಕೇವಲ ಚಿತ್ರಮಂದಿರಗಳಿಗೆ ಮಾತ್ರ ಅಅನ್ವಯವಾಗುತ್ತಿರುವ ಕೊರೊನಾ ನಿಯಮಾವಳಿಗಳ ವಿರುದ್ಧ ಸಂಜಯ್ ಲೀಲಾ ಬನ್ಸಾಲಿ ಧ್ವನಿಯೆತ್ತಿದ್ದಾರೆ. ಇದಕ್ಕೆ ತಮ್ಮದೇ ಆದ ವಾದ ಮಂಡಿಸಿದ್ದಾರೆ ಬಾಲಿವುಡ್ನ ಈ ಹಿಟ್ ನಿರ್ದೇಶಕ.
ಬಾಲಿವುಡ್ನ ಹಿಟ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಚಿತ್ರಮಂದಿರಗಳಿಗೆ ಹೇರಿರುವ ಕೊರೊನಾ ನಿಯಮಗಳು ಅಸಮಾನತೆಯಿಂದ ಕೂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ತೆರಳುವವರೂ ಕೂಡಾ ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಬಹುದು, ಆದರೆ ಚಿತ್ರಮಂದಿರಗಳಲ್ಲಿ ಹಾಗೆ ಕುಳಿತುಕೊಳ್ಳುವಂತಿಲ್ಲ ಎಂಬ ಸರ್ಕಾರದ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ‘‘ಅಂಗಡಿಗಳು, ಜಿಮ್ಗಳು, ಸ್ಟೇಡಿಯಮ್ಗಳು ಓಪನ್ ಆಗಿರುವಾಗ ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧವೇಕೆ ಎಂಬುದು ಅರ್ಥವಾಗುತ್ತಿಲ್ಲ. ವಿಮಾನಗಳಲ್ಲೂ ಅಕ್ಕಪಕ್ಕ ಕುಳಿತುಕೊಳ್ಳುವಾಗ ಚಿತ್ರಮಂದಿರದಲ್ಲೇನು ಸಮಸ್ಯೆ?’’ ಎಂಬುದು ಬನ್ಸಾಲಿಯವರ ಪ್ರಶ್ನೆ.
ಸದ್ಯ ಮುಂಬೈನಲ್ಲಿ ಯಾವುದೇ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿಲ್ಲ. ಇತರ ರಾಜ್ಯಗಳಲ್ಲಿ 50 ಪ್ರತಿಶತ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಚಿತ್ರಮಂದಿರಗಳಲ್ಲಿ ಬೇಕಾದರೆ ಕಠಿಣ ಮುನ್ನೆಚ್ಚರಿಕೆ ಪಾಲಿಸಲಿ. ಆದರೆ ತೆರೆಯದೇ ಇರುವುದು ಎಷ್ಟು ಸರಿ ಎನ್ನುವುದು ಹಿಟ್ ನಿರ್ದೇಶಕನ ಪ್ರಶ್ನೆ. ‘‘ವಿಮಾನ ಪ್ರಯಾಣಗಳಲ್ಲಿ ಅನುಸರಿಸುತ್ತಿರುವಂತೆ ಕೊರೊನಾ ನೆಗೆಟಿವ್ ವರದಿಗಳನ್ನು ಚಿತ್ರಮಂದಿರಕ್ಕೂ ಕಡ್ಡಾಯಗೊಳಿಸಲಿ. ಕೊನೆಯ ಪಕ್ಷ ಕೊರೊನಾ ಕಡಿಮೆಯಾಗುವವರೆಗೆ ಈ ಮಾದರಿ ಅನುಸರಿಸಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಿ. ದಿನಗೂಲಿ ನೌಕರರ ಕಷ್ಟ ನೋಡಿ ಮನಸ್ಸಿಗೆ ಖೇದವಾಗುತ್ತದೆ. ಕೊರೊನಾದಿಂದ ಚಿತ್ರೋದ್ಯಮ ಕುಸಿದಿದೆ. ಅದರ ನಡುವೆ ನಿಯಮಾವಳಿಗಳಿಂದ ಮತ್ತಷ್ಟು ಹಾನಿಯಾಗುವ ಮೊದಲು ಸರ್ಕಾರ ಕ್ರಮ ಕೈಗೊಳ್ಳಲಿ’’ ಎಂದು ಬನ್ಸಾಲಿ ಆಗ್ರಹಿಸಿದ್ದಾರೆಂದು ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.
ಭಾರತ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರ ಪೈಕಿ ಸಂಜಯ್ ಲೀಲಾ ಬನ್ಸಾಲಿ ಮುಂಚೂಣಿಯಲ್ಲಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. 1996ರಲ್ಲಿ ‘ಖಾಮೋಶಿ: ದಿ ಮ್ಯೂಸಿಕಲ್’ ಸಿನಿಮಾ ತೆರೆಗೆ ಬಂದಿತ್ತು. ಇದು ಅವರ ಮೊದಲ ಸಿನಿಮಾ. ಹಮ್ ದಿಲ್ ದೆ ಚುಕೆ ಸನಮ್ (1999), ದೇವದಾಸ್ (2002), ಬ್ಲ್ಯಾಕ್ (2005), ರಾಮ್ ಲೀಲಾ (2013), ಬಾಜಿರಾವ್ ಮಸ್ತಾನಿ (2015) ಮತ್ತು ಪದ್ಮಾವತ್ (2018) ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಸಂಜಯ್ ಲೀಲಾ ಬನ್ಸಾಲಿಗೆ ಇದೆ. ಅವರ ಮುಂದಿನ ಚಿತ್ರ ‘ಗಂಗೂಬಾಯಿ ಕಥೈವಾಡಿ’ ತೆರೆಗೆ ಬರಲು ಸಜ್ಜಾಗಿದೆ. ಸತ್ಯ ಕತೆ ಆಧಾರಿತ ಈ ಚಿತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಆಲಿಯಾ ಭಟ್, ಸಂಜಯ್ ಲೀಲಾ ಬನ್ಸಾಲಿಗೆ ಬಾಂಬೇ ಹೈಕೋರ್ಟ್ನಿಂದ ಮಧ್ಯಂತರ ರಿಲೀಫ್
ಸಂಜಯ್ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ
(Sanjay Leela Bansali opens up about strict rules on movie theaters)