
ಸಲ್ಮಾನ್ ಖಾನ್ (Salman Khan) ಅವರಿಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದು ಯಶಸ್ಸು ಕಾಣುತ್ತಿಲ್ಲ. ಬಾಲಿವುಡ್ ಸಹವಾಸ ಬಿಟ್ಟು ದಕ್ಷಿಣದ ನಿರ್ದೇಶಕನ ಜೊತೆ ಸಿನಿಮಾ ಮಾಡಿದರೂ ಸಲ್ಮಾನ್ಗೆ ಗೆಲುವು ಕೈ ಹಿಡಿದಿಲ್ಲ. ಸಾಲು ಸಾಲು ಸೋಲು ಕಾಣುವ ಈ ಸಮಯದಲ್ಲಿ ಸಲ್ಮಾನ್ ‘ಸಿಕಂದರ್’ ಸಿನಿಮಾ ಮೂಲಕ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದರು. ಆದರೆ, ಅದು ಕೂಡ ಸುಳ್ಳಾಗಿದೆ. ಈ ಚಿತ್ರ ಸೋಲುವ ಮುನ್ಸೂಚನೆ ದಟ್ಟವಾಗಿದೆ. ಅಚ್ಚರಿಯ ವಿಚಾರ ಎಂದರೆ ಈ ಚಿತ್ರದ ಒಂದು ದಿನದ ಗರಿಷ್ಠ ಗಳಿಕೆ ಕೇವಲ 29 ಕೋಟಿ ರೂಪಾಯಿ! ಮುಂದೆ ಯಾವ ದಿನವೂ ಇಷ್ಟು ದೊಡ್ಡ ಮಟ್ಟದ ಗಳಿಕೆ ಆಗುವುದು ಅನುಮಾನವೇ.
‘ಸಿಕಂದರ್’ ಸಿನಿಮಾ ಈದ್ ಪ್ರಯುಕ್ತ ಭಾನುವಾರ (ಮಾರ್ಚ್ 30) ರಿಲೀಸ್ ಆಯಿತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ವಿಫಲವಾಗಿದೆ. ಸಲ್ಮಾನ್ ಖಾನ್ ಸಿನಿಮಾ ಎಂದಾಗ ಮೊದಲ ದಿನ ಭರ್ಜರಿ ಓಪನಿಂಗ್ ಪಡೆಯೋದು ಕಾಮನ್. ಅದರಲ್ಲೂ ಭಾನುವಾರ ಸಿನಿಮಾ ರಿಲೀಸ್ ಆಗಿದೆ ಎಂದಾಗ ಕೇಳಬೇಕೆ? ಆದರೆ, ‘ಸಿಕಂದರ್’ ಚಿತ್ರ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 26 ಕೋಟಿ ರೂಪಾಯಿ ಮಾತ್ರ. ಎರಡನೇ ದಿನ ಈ ಚಿತ್ರ 29 ಕೋಟಿ ರೂಪಾಯಿ ಗಳಿಸಿದೆ.
ಮೂರನೇ ದಿನವಾದ ಮಂಗಳವಾರ (ಏಪ್ರಿಲ್ 1) ಈ ಚಿತ್ರ ಕೇವಲ 19.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಶೇ.32ರಷ್ಟು ಕುಸಿತ ಕಂಡಿದೆ. ಈ ಮೂಲಕ ಚಿತ್ರದ ಗಳಿಕೆ ನಿಧಾನವಾಗಿ ಪಾತಾಳ ಕಾಣುತ್ತಾ ಇದೆ. ಸದ್ಯ ‘ಸಿಕಂದರ್’ನ ಒಟ್ಟಾರೆ ಕಲೆಕ್ಷನ್ 74.5 ಕೋಟಿ ರೂಪಾಯಿ ಆಗಿದೆ. ಹೀಗೆ ಮುಂದುವರಿದರೆ ಹಾಕಿದ ಬಜೆಟ್ ಕೂಡ ಬರೋದು ಅನುಮಾನದಲ್ಲಿದೆ.
ಇದನ್ನೂ ಓದಿ: ಜನರಿಲ್ಲದೆ ಕ್ಯಾನ್ಸಲ್ ಆಯ್ತು ‘ಸಿಕಂದರ್’; ಸಲ್ಲು ಸಿನಿಮಾ ಬದಲಿಗೆ ಮೋಹನ್ಲಾಲ್ ಚಿತ್ರ ಪ್ರದರ್ಶನ
‘ಸಿಕಂದರ್’ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ಕಳಪೆ ರೇಟಿಂಗ್ ಸಿಕ್ಕಿದೆ. ಸದ್ಯ ಈ ಸಿನಿಮಾ 14 ಕೋಟಿ ವೋಟ್ ಪಡೆದಿದ್ದು, ಕೇವಲ 6.3 ರೇಟಿಂಗ್ ಪಡೆದಿದೆ. ಇಷ್ಟು ಕಳಪೆ ರೇಟಿಂಗ್ ಪಡೆದರೆ ಸಿನಿಮಾ ಗೆಲ್ಲೋದು ಅನುಮಾನವೇ. ಇನ್ನು, ಹಲವು ಕಡೆಗಳಲ್ಲಿ ‘ಸಿಕಂದರ್’ ಸಿನಿಮಾ ಬದಲು ಬೇರೆ ಸಿನಿಮಾನ ಪ್ರಸಾರ ಮಾಡಲಾಗುತ್ತಿದೆ. ಇದು ಕೂಡ ಗಳಿಕೆ ತಗ್ಗಲು ಮುಖ್ಯ ಕಾರಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Wed, 2 April 25