ಜನರಿಲ್ಲದೆ ಕ್ಯಾನ್ಸಲ್ ಆಯ್ತು ‘ಸಿಕಂದರ್’; ಸಲ್ಲು ಸಿನಿಮಾ ಬದಲಿಗೆ ಮೋಹನ್‌ಲಾಲ್ ಚಿತ್ರ ಪ್ರದರ್ಶನ
ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರ ನಿರೀಕ್ಷೆಯಂತೆ ಗಳಿಕೆ ಮಾಡದ ಕಾರಣ, ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಂಡಿದೆ. ಕಡಿಮೆ ಪ್ರೇಕ್ಷಕರು ಬಂದಿರುವುದರಿಂದ ಮೋಹನ್‌ಲಾಲ್ ನಟನೆಯ 'ಎಂಪುರಾನ್' ಚಿತ್ರವನ್ನು ಬದಲಿಗೆ ಪ್ರದರ್ಶಿಸಲಾಗುತ್ತಿದೆ. ಇದು ಸಲ್ಮಾನ್ ಖಾನ್ ಅವರ ವೃತ್ತಿಜೀವನದಲ್ಲಿ ದೊಡ್ಡ ಹಿನ್ನಡೆಯಾಗಿದೆ .

ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಕಂದರ್’ ಸಿನಿಮಾ ಹೀನಾಯ ವಿಮರ್ಶೆ ಪಡೆದಿದೆ. ಈ ಚಿತ್ರದ ಗಳಿಕೆ ಕೂಡ ದೊಡ್ಡ ಮಟ್ಟದಲ್ಲಿ ಇಲ್ಲ. ಈ ಕಾರಣದಿಂದ ಸಲ್ಲು ಅಭಿಮಾನಿಗಳಿಗೆ ನಿರಾಸೆ ಆಗಿದೆ. ಈ ಬೆನ್ನಲ್ಲೆ ಸಲ್ಮಾನ್ ಖಾನ್ ಫ್ಯಾನ್ಸ್ ಮತ್ತಷ್ಟು ನಿರಾಸೆಗೆ ಒಳಗಾಗುವ ಸುದ್ದಿ ಒಂದು ಸಿಕ್ಕಿದೆ. ಮುಂಬೈ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ‘ಸಿಕಂದರ್’ ಸಿನಿಮಾಗಳಿಗೆ ಜನರೇ ಇಲ್ಲದಂತೆ ಆಗಿದೆ. ಇದರಿಂದ ಸಲ್ಲು ಸಿನಿಮಾನ ಕ್ಯಾನ್ಸಲ್ ಮಾಡಿ ಬೇರೆ ಶೋಗಳನ್ನು ಹಾಕಲಾಗುತ್ತಿದೆ.
ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಸಿನಿಮಾ ಪ್ರದರ್ಶನ ಕಾಣುತ್ತಿದೆ ಎಂದರೆ ಟಿಕೆಟ್ ಸಿಗೋದೆ ಕಷ್ಟ ಎಂಬಂತಹ ಪರಿಸ್ಥಿತಿ ಈ ಮೊದಲು ಇತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ ಇಡೀ ಥಿಯೇಟರ್ ಖಾಲಿ ಹೊಡೆಯುವಂತೆ ಆಗಿದೆ. ಇದು ಸಲ್ಮಾನ್ ಖಾನ್ ಸಿನಿಮಾ ಗಳಿಕೆ ಮೇಲೆ ಪ್ರಭಾವ ಬೀರಲಿದೆ.
ಬಾಲಿವುಡ್ನ ಹೃದಯಭಾಗವಾದ ಮುಂಬೈನ ಅನೇಕ ಕಡೆಗಳಲ್ಲಿ ‘ಸಿಕಂದರ್’ ಪ್ರದರ್ಶನ ಕಾಣುತ್ತಿದೆ. ಕೆಲವು ಮಲ್ಟಿಪ್ಲೆಕ್ಸ್ನಲ್ಲಿ ಈ ಶೋಗೆ ಜನರೇ ಇಲ್ಲದಂತೆ ಆಗಿದೆ. ಹೀಗಾಗಿ, ಈ ಚಿತ್ರದ ಬದಲು ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಎಲ್ 2: ಎಂಪುರಾನ್’ ಸಿನಿಮಾನ ಶೋ ಮಾಡಲಾಗುತ್ತಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಅನೇಕ ಕಡೆಗಳಲ್ಲಿ ಇದೆ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಸಲ್ಮಾನ್ ಖಾನ್ ದೊಡ್ಡ ಮುಖಭಂಗ ಎದುರಿಸಿದ್ದಾರೆ.
ಇದನ್ನೂ ಓದಿ: ‘ಸಿಕಂದರ್’ ಗಳಿಕೆಯಲ್ಲಿ ಏರಿಕೆ; ಆದರೂ ನಿಂತಿಲ್ಲ ಸಲ್ಮಾನ್ ಖಾನ್ ಸಿನಿಮಾದ ಪರದಾಟ
‘ಸಿಕಂದರ್’ ಚಿತ್ರಕ್ಕಿಲ್ಲ ರೇಟಿಂಗ್
‘ಬುಕ್ ಮೈ ಶೋ’ನಲ್ಲಿ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರಕ್ಕೆ ಕಳಪೆ ರೇಟಿಂಗ್ ಸಿಕ್ಕಿದೆ. ಈವರೆಗೆ (ಏಪ್ರಿಲ್ 1, ಮಧ್ಯಾಹ್ನ 2 ಗಂಟೆ) ಚಿತ್ರಕ್ಕೆ 11 ಸಾವಿರ ಜನರು ವೋಟ್ ಮಾಡಿದ್ದು, ಕೇವಲ 6.2 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲೂ ಚಿತ್ರಕ್ಕೆ ಇದೇ ಪರಿಸ್ಥಿತಿ ಇದೆ. 29 ಸಾವಿರ ಜನರು ರೇಟಿಂಗ್ ನೀಡಿದ್ದು, 10ಕ್ಕೆ 6.3 ಅಂಕ ಸಿಕ್ಕಿದೆ. ‘ಸಿಕಂದರ್’ ಚಿತ್ರ ಕಳೆದ ಎರಡು ದಿನಗಳಿಂದ 30 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡುತ್ತಿದೆ. ಇಂದು ಚಿತ್ರದ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:29 pm, Tue, 1 April 25