Singer KK: ಗಾಯಕ ಕೆಕೆ ನಿಧನರಾಗಿ ಒಂದೂವರೆ ತಿಂಗಳ ಬಳಿಕ ಭಾವುಕ ಬರಹ ಹಂಚಿಕೊಂಡ ಪತ್ನಿ-ಮಕ್ಕಳು
Krishnakumar Kunnath: ಖ್ಯಾತ ಸಿಂಗರ್ ಕೃಷ್ಣಕುಮಾರ್ ಕುನ್ನತ್ ನಿಧನರಾಗಿ ಒಂದೂವರೆ ತಿಂಗಳು ಕಳೆದಿದೆ. ಎಮೋಷನಲ್ ಬರಹದ ಮೂಲಕ ಕುಟುಂಬದವರು ಅವರನ್ನು ನೆನಪಿಸಿಕೊಂಡಿದ್ದಾರೆ.
ಗಾಯಕ ಕೃಷ್ಣಕುಮಾರ್ ಕುನ್ನತ್ (Krishnakumar Kunnath) ಅವರು ಅಕಾಲಿಕ ಮರಣ ಹೊಂದಿದ್ದು ತೀವ್ರ ನೋವಿನ ಸಂಗತಿ. ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ವೇಳೆಯೇ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಬಳಿಕ ಕೆಲವೇ ಗಂಟೆಗಳಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಯಿತು ಎಂಬ ಸುದ್ದಿ ತಿಳಿದಾಗ ಕೆಕೆ (Singer KK) ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ದಿಕ್ಕೇ ತೋಚದಂತಾಗಿತ್ತು. ಆ ಕಹಿ ಘಟನೆ (KK Death) ನಡೆದು ಒಂದೂವರೆ ತಿಂಗಳು ಕಳೆದಿದೆ. ಈಗ ಅವರ ಕುಟುಂಬದವರು ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಕೂಡ ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.
ವಿವಿಧ ಭಾಷೆಗಳ ಹಲವಾರು ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ನೀಡಿದವರು ಗಾಯಕ ಕೆಕೆ. ಆ ಹಾಡುಗಳ ಮೂಲಕ ಅವರು ಎಂದಿಗೂ ಜೀವಂತವಾಗಿ ಇರುತ್ತಾರೆ. ಹಾಗಿದ್ದರೂ ಕೂಡ ಭೌತಿಕವಾಗಿ ಅವರು ಇಲ್ಲ ಎಂಬ ಕೊರಗನ್ನು ನಿವಾರಿಸಲು ಸಾಧ್ಯವೇ ಇಲ್ಲ. ಅವರ ಮರಣದ ಬಳಿಕ ಮಂಕಾಗಿದ್ದ ಕುಟುಂದವರು ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕೆಕೆ ಅವರ ಆಸೆಯಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಲಾಗಿದೆ. ತಮ್ಮ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಈ ಪೋಸ್ಟ್ ಮೂಲಕ ತಿಳಿಸಿದ್ದಾರೆ ಕೆಕೆ ಕುಟುಂಬದವರು.
‘ನಿಮಗೆ ಗಾಯಕನಾಗಿ, ನಮಗೆ ತಂದೆ ಹಾಗೂ ಪತಿಯಾಗಿ ಕೆಕೆ ಅವರು ತುಂಬ ಭಿನ್ನ ಸ್ವಭಾವದ ವ್ಯಕ್ತಿ ಆಗಿದ್ದರು. ನಿಜವಾದ ಪ್ರೀತಿ ಎಂದರೆ ಏನು ಎಂಬುದನ್ನು ಅವರ ಅಪರಿಮಿತವಾದ ಪ್ರೀತಿಯು ನಮಗೆ ಸದಾ ನೆನಪಿಸುತ್ತದೆ’ ಎಂದು ಕೆಕೆ ಕುಟುಂಬದವರು ಬರೆದುಕೊಂಡಿದ್ದಾರೆ. ಮನೆಯ ಸದಸ್ಯನನ್ನು ಕಳೆದುಕೊಂಡಿರುವುದು ತಮ್ಮ ಜೀವನದ ಅತಿ ನೋವಿನ ಸಂಗತಿ ಎಂದು ಅವರು ತಿಳಿಸಿದ್ದಾರೆ. ‘ಏನೇ ಮಾಡಿದರೂ ನಿಮ್ಮ ಮೇಲೆ ನಂಬಿಕೆ ಇರಬೇಕು. ಶೇಕಡ 100ರಷ್ಟು ಶ್ರಮವಹಿಸಿ ಮಾಡಬೇಕು’ ಎಂದು ಕೆಕೆ ಹೇಳುತ್ತಿದ್ದ ಮಾತನ್ನು ಇಂದು ತಾವೆಲ್ಲರೂ ಪಾಲಿಸುತ್ತಿರುವುದಾಗಿ ಈ ಪೋಸ್ಟ್ನಲ್ಲಿ ತಿಳಿಸಲಾಗಿದೆ.
View this post on Instagram
ಕೆಕೆ ಪತ್ನಿ ಜ್ಯೋತಿ ಅವರು ಉತ್ತಮ ಪೇಂಟರ್. ಅನೇಕ ಚಿತ್ರಗಳನ್ನು ಬರೆಯುವ ಮೂಲಕ ಅವರು ಗಮನ ಸೆಳೆಯುತ್ತಾರೆ. ಅಗಲಿದ ಪತಿಯ ಪೇಯಿಂಟ್ಗಳನ್ನು ಅವರು ಮಾಡುತ್ತಿದ್ದಾರೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Published On - 3:28 pm, Fri, 15 July 22