ಸ್ಟಾರ್ ಗಾಯಕರೊಟ್ಟಿಗೆ ಸಂಬಂಧ ಕಡಿದುಕೊಂಡ ಸಹೋದರಿ, ಕಕ್ಕಡ್ ಕುಟುಂಬದಲ್ಲಿ ಬಿರುಕು
Kakkar Family: ಕಕ್ಕಡ್ ಕುಟುಂಬ ಪ್ರಸ್ತುತ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಪ್ರಚಲಿತದಲ್ಲಿರುವ ಕುಟುಂಬ. ನೇಹಾ ಕಕ್ಕಡ್ ಖ್ಯಾತ ಗಾಯಕಿ ಮತ್ತು ರಿಯಾಲಿಟಿ ಶೋ ಜಡ್ಜ್ ಸಹ ಅವರ ಸಹೋದರ ಟೋನಿ ಕಕ್ಕಡ್ ಸಹ ಗಾಯಕ ಮತ್ತು ಸಂಗೀತ ನಿರ್ದೇಶಕ. ಸೋನು ಕಕ್ಕಡ್ ಸಹ ಗಾಯಕಿ. ಇದೀಗ ಇವರ ಕುಟುಂಬದಲ್ಲಿ ಬಿರುಕು ಮೂಡಿದೆ. ಸೋನು ಕಕ್ಕಡ್, ಕುಟುಂಬದಿಂದ ಹೊರ ಹೋಗಿದ್ದಾರೆ.

ಕಕ್ಕಡ್ ಕುಟುಂಬ (Kakkar Family), ಪ್ರಸ್ತುತ ಭಾರತದ ಸಂಗೀತ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿರುವ ಕುಟುಂಬ. ನೇಹಾ ಕಕ್ಕಡ್, ಟೋನಿ ಕಕ್ಕಡ್ ಮತ್ತು ಸೋನು ಕಕ್ಕಡ್ ಅವರುಗಳು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಬೇಡಿಕೆಯಲ್ಲಿರುವ ಸಂಗೀತಗಾರರಾಗಿದ್ದಾರೆ. ಆದರೆ ಇದೀಗ ಇವರ ಕುಟುಂಬದಲ್ಲಿ ಬಿರುಕು ಮೂಡಿದೆ. ನೇಹಾ ಕಕ್ಕಡ್ ಹಾಗೂ ಟೋನಿ ಕಕ್ಕಡ್ ಅವರುಗಳ ಜೊತೆಗೆ ಸಂಬಂಧ ಕಡಿದುಕೊಂಡಿದ್ದಾರೆ ಸಹೋದರಿ ಸೋನು ಕಕ್ಕಡ್.
ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಸೋನು ಕಕ್ಕಡ್, ‘ಇನ್ನುಮುಂದೆ ನಾನು, ಇಬ್ಬರು ಪ್ರತಿಭಾವಂತ ಸೂಪರ್ ಸ್ಟಾರ್ಗಳಾದ ಟೋನಿ ಕಕ್ಕಡ್, ನೇಹಾ ಕಕ್ಕಡ್ ಅವರ ಸಹೋದರಿ ಆಗಿರುವುದಿಲ್ಲ ಎಂಬುದನ್ನು ತಿಳಿಸಲು ತೀವ್ರ ನೋವು ಅನುಭವಿಸುತ್ತಿದ್ದೇನೆ. ನನ್ನ ಈ ನಿರ್ಧಾರ, ಆಳವಾದ ನೋವಿನಿಂದ, ಭಾವುಕತೆಯಿಂದ ಹೊರಬಂದಿದೆ. ಇಂದು ನನ್ನ ಹೃದಯ ಮುರಿದು ಹೋಗಿದೆ. ಇನ್ನು ಮುಂದೆ ನಾನು ನೇಹಾ ಕಕ್ಕಡ್ ಹಾಗೂ ಟೋನಿ ಕಕ್ಕಡ್ ಅವರ ಸಹೋದರಿ ಆಗಿರುವುದಿಲ್ಲ’ ಎಂದಿದ್ದಾರೆ.
ನೇಹಾ ಕಕ್ಕಡ್, ಟೋನಿ ಕಕ್ಕಡ್ ಹಾಗೂ ಸೋನು ಕಕ್ಕಡ್ ಅವರುಗಳು ಸಹೋದರರು. ಬಡ ಕುಟುಂಬದಿಂದ ಬಂದ ಈ ಮೂವರು ಸಹ ಸಂಗೀತವನ್ನು ವೃತ್ತಿಯಾಗಿ ಸ್ವೀಕರಿಸಿ ಅದರಲ್ಲೇ ಸಾಧನೆ ಮಾಡಿದ್ದಾರೆ. ನೇಹಾ ಕಕ್ಕಡ್ ಮತ್ತು ಸೋನು ಕಕ್ಕಡ್ ಗಾಯಕರಾದರೆ ಟೋನಿ ಕಕ್ಕಡ್ ಸಂಗೀತ ನಿರ್ದೇಶಕ ಮತ್ತು ಗಾಯಕ. ಮೂವರಿಗೂ ಸಹ ತಮ್ಮದೇ ಆದ ಅಭಿಮಾನಿ ಬಳಗ ಇದೆ. ನೇಹಾ ಕಕ್ಕಡ್ ಮತ್ತು ಸೋನು ಕಕ್ಕಡ್ ಅವರುಗಳು ರಿಯಾಲಿಟಿ ಶೋನ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಈ ಮೂವರಲ್ಲಿ ನೇಹಾ ಕಕ್ಕಡ್ ಹಿರಿಯರು. ಆದರೆ ಇದೀಗ ಹಠಾತ್ತನೆ ಈ ಸಹೋದರರು ಬೇರಾಗಿದ್ದಾರೆ.
ಇದನ್ನೂ ಓದಿ:ವೇದಿಕೆ ಮೇಲೆ ಕಣ್ಣೀರು, ನಿಜಕ್ಕೂ ಅಂದು ನಡೆದಿದ್ದೇನು? ಉತ್ತರಿಸಿದ ಗಾಯಕಿ ನೇಹಾ
ಸೋನು ಕಕ್ಕಡ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಹಲವು ನೆಟ್ಟಿಗರು, ಸಹೋದರರು ಬೇರಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಸೋನು ಕಕ್ಕಡ್ ತಮ್ಮ ಟ್ವೀಟ್ನಲ್ಲಿ ನೇಹಾ ಕಕ್ಕಡ್ ಹಾಗೂ ಟೋನಿ ಕಕ್ಕಡ್ ಅವರನ್ನು ಟ್ಯಾಲೆಂಟೆಡ್, ಸೂಪರ್ ಸ್ಟಾರ್ ಎಂದೆಲ್ಲ ಕರೆದಿರುವ ಬಗ್ಗೆ ತಮಾಷೆ ಮಾಡಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ನೇಹಾ ಕಕ್ಕಡ್ ಅವರು ಮೆಲ್ಬೊರ್ನ್ನಲ್ಲಿ ಲೈವ್ ಶೋ ನೀಡಿದ್ದರು. ಈ ವೇಳೆ ವೇದಿಕೆ ಮೇಲೆಯೇ ಕಣ್ಣೀರು ಹಾಕಿ ನೆರೆದಿದ್ದವರ ಕ್ಷಮೆ ಕೇಳಿದರು. ಸುಮಾರು ಮೂರು ಗಂಟೆ ತಡವಾಗಿ ನೇಹಾ ಆ ಶೋಗೆ ಬಂದಿದ್ದರು. ಈ ಕಾರಣದಿಂದಾಗಿ ಜನ ಗಲಾಟೆ ಎಬ್ಬಿಸಿದ್ದರು. ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ