ಸೋನು ಸೂದ್ ಅವರು (Sonu Sood) ಅನೇಕರ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ. ಅವರನ್ನು ದೇವರಂತೆ ಅನೇಕರು ಪೂಜಿಸುತ್ತಿದ್ದಾರೆ. ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡವರು ಸೋನು ಸೂದ್. ರಿಯಲ್ ಲೈಫ್ನಲ್ಲಿ ಹೀರೋ ಆದ ಅವರಿಗೆ ವಿಲನ್ ಪಾತ್ರ ಒಪ್ಪಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಈ ಕಾರಣಕ್ಕೆ ಅವರು ಪಾಸಿಟಿವ್ ಪಾತ್ರಗಳಲ್ಲಿ ಮಾತ್ರ ನಟಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಅವರಿಗೆ ಇದು ಸೆಕೆಂಡ್ ಇನ್ನಿಂಗ್ಸ್. ಈ ಕುರಿತು ಅವರು ಮಾತನಾಡಿದ್ದಾರೆ. ಅಲ್ಲದೆ ದಕ್ಷಿಣದ ಸಿನಿಮಾಗಳಲ್ಲಿ (South Indian Movies) ಹೆಚ್ಚು ನಟಿಸುತ್ತಿರುವುದೇಕೆ ಎಂಬುದಕ್ಕೆ ಕಾರಣ ನೀಡಿದ್ದಾರೆ.
‘ಇದು ನನ್ನ ಜೀವನದ ಅತ್ಯುತ್ತಮ ಹಂತ. ನಾನು ಎತ್ತರದಲ್ಲಿ ಇದ್ದೀನೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ನನಗೆ ಈ ಹಂತ ಖುಷಿ ನೀಡುತ್ತಿದೆ. 100-200 ಕೋಟಿ ರೂ. ಬಜೆಟ್ನ ಸಿನಿಮಾದ ಭಾಗವಾಗುವುದನ್ನು ನಾವು ಯಶಸ್ಸು ಎಂದು ಕರೆಯುತ್ತೇವೆ. ಆದರೆ ಸಾಮಾನ್ಯ ಜನರೊಂದಿಗೆ ಕನೆಕ್ಟ್ ಆಗುವುದು, ಏನೂ ಇಲ್ಲದವರ ಜತೆ ಸಂಪರ್ಕ ಸಾಧಿಸುವುದು ನನಗೆ ಅತ್ಯಂತ ಖುಷಿ ನೀಡುತ್ತದೆ’ ಎಂದಿದ್ದಾರೆ ಅವರು.
‘ಮುಂಬೈಗೆ ಬಂದಾಗ ಪಾಸಿಟಿವ್ ರೋಲ್ ಮಾಡಬೇಕು, ಲೀಡ್ ರೋಲ್ ಮಾಡಬೇಕು ಎಂದು ಕನಸು ಕಂಡಿದ್ದೆ. ಆದರೆ, ನನಗೆ ಸಿನಿಮಾ ಇಂಡಸ್ಟ್ರಿಯ ಹಿನ್ನೆಲೆ ಇಲ್ಲ. ಹೀಗಾಗಿ, ವಿಲನ್ ರೋಲ್ ಸಿಕ್ಕಿತು. ನನಗೆ ಈ ಪಾತ್ರಗಳನ್ನು ಏಕೆ ನೀಡುತ್ತಾರೆ ಎಂದು ನಾನು ಕೆಲವೊಮ್ಮೆ ಸ್ವಲ್ಪ ಅಸಮಾಧಾನಗೊಳ್ಳುತ್ತಿದ್ದೆ. ಆದರೆ ನಂತರ ನನಗೆ ಮನದಟ್ಟಾದ ಸಂಗತಿ ಎಂದರೆ, ನಾನೊಬ್ಬರ ನಟ. ರಂಜಿಸುವುದು ಮಾತ್ರ ನನ್ನ ಕೆಲಸವಾಗಬೇಕು. ಕೆಲವೊಮ್ಮೆ ಸಿನಿಮಾದಲ್ಲಿ ಹೀರೋಗಿಂತ ಹೆಚ್ಚಾಗಿ ಜನರು ನನ್ನನ್ನು ಪ್ರೀತಿಸಿದ್ದಾರೆ’ ಎಂಬುದು ಸೋನು ಸೂದ್ ಮಾತು.
ಇದನ್ನೂ ಓದಿ: ಸೋನು ಸೂದ್ಗಾಗಿ ಸ್ಕ್ರಿಪ್ಟ್ ಬದಲಾಯಿಸುತ್ತಿದ್ದಾರೆ ನಿರ್ದೇಶಕರು; ಅಚ್ಚರಿಯ ವಿಚಾರ ಬಿಚ್ಚಿಟ್ಟ ಸೋನು ಸೂದ್
ಇತ್ತೀಚೆಗೆ ಬಹುತೇಕ ಹಿಂದಿ ಸಿನಿಮಾಗಳು ನೆಲಕಚ್ಚುತ್ತಿವೆ. ದಕ್ಷಿಣದಿಂದ ಆಫರ್ಗಳು ಬರದೆ ಇದ್ದರೆ ಎಲ್ಲಾ ಹಿಂದಿ ಚಿತ್ರಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂಬುದು ಸೋನು ಸೂದ್ ಅಭಿಪ್ರಾಯ. ‘ನಾನು ತಮಿಳು, ತೆಲುಗು ಅಥವಾ ಹಿಂದಿ ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಲಿ ಮೊದಲು ಸ್ಕ್ರಿಪ್ಟ್ ನೋಡುತ್ತೇನೆ. ಕೆಟ್ಟ ಹಿಂದಿ ಚಿತ್ರಗಳನ್ನು ಮಾಡದಂತೆ ದಕ್ಷಿಣದ ಸಿನಿಮಾ ಇಂಡಸ್ಟ್ರಿ ನನ್ನನ್ನು ಉಳಿಸುತ್ತಿದೆ’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.