‘ಸ್ತ್ರೀ 2’ ಸಿನಿಮಾ ಸೂಪರ್ ಹಿಟ್; ಎರಡೇ ದಿನಕ್ಕೆ 125 ಕೋಟಿ ರೂಪಾಯಿ ಕಲೆಕ್ಷನ್
ಹಾರರ್ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ‘ಸ್ತ್ರೀ 2’ ಸಿನಿಮಾ ಭರ್ಜರಿ ಮನರಂಜನೆ ನೀಡುತ್ತಿದೆ. ಉತ್ತಮ ವಿಮರ್ಶೆ ಪಡೆದಿರುವ ಈ ಚಿತ್ರಕ್ಕೆ ವಿಶ್ವಾದ್ಯಂತ ಸಖತ್ ಕಲೆಕ್ಷನ್ ಆಗುತ್ತಿದೆ. ವರದಿಗಳ ಪ್ರಕಾರ ಈ ಸಿನಿಮಾ 2 ದಿನಗಳಲ್ಲಿ 125 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಶ್ರದ್ಧಾ ಕಪೂರ್ ಹಾಗೂ ರಾಜ್ಕುಮಾರ್ ರಾವ್ ಅವರಿಗೆ ಸೂಪರ್ ಸಕ್ಸಸ್ ಸಿಕ್ಕಿದೆ.
ಹಿಂದಿ ಚಿತ್ರರಂಗಕ್ಕೆ ಮತ್ತೆ ಹೊಸ ಚೈತನ್ಯ ಬಂದಿದೆ. ಹಾರರ್ ಕಹಾನಿ ಇರುವ ‘ಸ್ತ್ರೀ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮುಂತಾದವರು ನಟಿಸಿದ್ದಾರೆ. ದೆವ್ವದ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ಅನೇಕ ಕಡೆಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಕೇವಲ ಎರಡೇ ದಿನಕ್ಕೆ ವಿಶ್ವಾದ್ಯಂತ ಈ ಸಿನಿಮಾ ಬರೋಬ್ಬರಿ 125 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಯಿತು. ರಜೆ ದಿನ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬಂದು ಸಿನಿಮಾ ನೋಡಿದರು. ಅಲ್ಲದೇ ಮರುದಿನ (ಆಗಸ್ಟ್ 16) ವರಮಹಾಲಕ್ಷ್ಮಿ ಹಬ್ಬ ಕೂಡ ಇದ್ದರಿಂದ ಅದು ಸಹ ಸಿನಿಮಾಗೆ ಜನಸಾಗರ ಹರಿದುಬಂದಿದೆ. ಇದರಿಂದಾಗಿ ಸಿನಿಮಾದ ಕಲೆಕ್ಷನ್ ಚೆನ್ನಾಗಿ ಆಗಿದೆ. ವೀಕೆಂಡ್ನಲ್ಲಿ ಸಹ ಈ ಚಿತ್ರಕ್ಕೆ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
‘ಸ್ತ್ರೀ 2’ ಸಿನಿಮಾಗೆ ಅಮರ್ ಕೌಶಿಕ್ ಅವರು ನಿರ್ದೇಶನ ಮಾಡಿದ್ದಾರೆ. ತಮನ್ನಾ ಭಾಟಿಯಾ, ವರುಣ್ ಧವನ್ ಅವರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಂದಿದ್ದ ‘ಸ್ತ್ರೀ’ ಸಿನಿಮಾದ ಮುಂದುವರಿದ ಕಥೆ ‘ಸ್ತ್ರೀ 2’ ಚಿತ್ರದಲ್ಲಿ ಇದೆ. ‘ಸ್ತ್ರೀ’ ನೋಡಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಸೀಕ್ವೆಲ್ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಈ ಸಿನಿಮಾದಿಂದ ರಾಜ್ಕುಮಾರ್, ಶ್ರದ್ಧಾ ಕಪೂರ್ ಅವರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಇದನ್ನೂ ಓದಿ: ಪೋಸ್ಟರ್ ಕಾಪಿ ಮಾಡಿ ಸಿಕ್ಕಿಬಿದ್ದ ‘ಸ್ತ್ರೀ 2’ ಸಿನಿಮಾ; ಬಿಡುಗಡೆಗೂ ಮೊದಲೇ ನೆಗೆಟಿವ್?
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಲಿವುಡ್ನಲ್ಲಿ ಮೂರು ಸಿನಿಮಾಗಳು ಬಿಡುಗಡೆ ಆದವು. ಅಕ್ಷಯ್ ಕುಮಾರ್ ನಟನೆ ‘ಖೇಲ್ ಖೇಲ್ ಮೇ’, ಜಾನ್ ಅಬ್ರಾಹಂ ನಟನೆಯ ‘ವೇದಾ’ ಸಿನಿಮಾಗಳ ಕೂಡ ತೆರೆಕಂಡವು. ಆ ಚಿತ್ರಗಳ ಜೊತೆಗೆ ‘ಸ್ತ್ರೀ 2’ ಸಿನಿಮಾ ಪೈಪೋಟಿ ನೀಡುತ್ತಿದೆ. ಅಂತಿಮವಾಗಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾಗೆ ಉತ್ತಮ ವಿಮರ್ಶೆ ಸಿಗುತ್ತಿದೆ. ನಟಿ ಕಂಗನಾ ರಣಾವತ್ ಕೂಡ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದರಿಂದಾಗಿ ಸಿನಿಮಾಗೆ ಇನ್ನಷ್ಟು ಬಲ ಸಿಕ್ಕಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.