ರಾಮ ಜನ್ಮಭೂಮಿ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಬಳಿ ಕ್ಷಮೆ ಕೇಳಿದ್ದ ಸ್ವರಾ ಭಾಸ್ಕರ್

ನೇರ ನುಡಿಗಳ ಮೂಲಕ ಆಗಾಗ ಸುದ್ದಿಯಾಗುವ ನಟಿ ಸ್ವರಾ ಭಾಸ್ಕರ್ ಅವರು ಈಗ ಹೊಸ ವಿವಾದ ಮಾಡಿಕೊಂಡಿದ್ದಾರೆ. ರಾಮ ಜನ್ಮಭೂಮಿ ತೀರ್ಪಿನ ಬಗ್ಗೆ ಅವರು ಈಗ ಪ್ರಸ್ತಾಪಿಸಿದ್ದಾರೆ. 2019ರ ನವೆಂಬರ್ 9ರಂದು ಆ ತೀರ್ಪು ಬಂದಾಗ ತಮ್ಮ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರು ಈಗ ನೆನಪಿಸಿಕೊಂಡಿದ್ದಾರೆ.

ರಾಮ ಜನ್ಮಭೂಮಿ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಬಳಿ ಕ್ಷಮೆ ಕೇಳಿದ್ದ ಸ್ವರಾ ಭಾಸ್ಕರ್
Swara Bhasker
Image Credit source: Instagram/fahadzirarahmad

Updated on: Sep 17, 2026 | 7:43 PM

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. 2019ರ ಸುಪ್ರೀಂ ಕೋರ್ಟ್‌ನ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ನಂತರ ತಮಗೆ ತೀವ್ರ ನಾಚಿಕೆಯಾಗಿತ್ತು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಅಲ್ಲದೇ, ತೀರ್ಪು ಬಂದ ತಕ್ಷಣ ಶಾರುಖ್ ಖಾನ್, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಫೋನ್‌ನಲ್ಲಿದ್ದ ಎಲ್ಲಾ ಮುಸ್ಲಿಂ ಸ್ನೇಹಿತರಿಗೆ ಸಂದೇಶ ಕಳುಹಿಸಿ ಕ್ಷಮೆಯಾಚಿಸಿದ್ದಾಗಿ ಅವರು ತಿಳಿಸಿದ್ದಾರೆ.

‘ದಿ ಮಿಡ್‌ನೈಟ್ ಅವರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸ್ವರಾ, ‘ರಾಮ ಜನ್ಮಭೂಮಿ ತೀರ್ಪು ಬಂದಾಗ ನನಗೆ ತುಂಬಾ ಬೇಸರವಾಗಿತ್ತು. ಈ ದೇಶ ಏನಾಗುತ್ತಿದೆ ಮತ್ತು ಇದು ಎಂತಹ ತೀರ್ಪು ಎಂದು ಆಲೋಚಿಸಿದೆ. ನ್ಯಾಯಾಲಯದ ಈ ನಿರ್ಧಾರ ಅನ್ಯಾಯದಿಂದ ಕೂಡಿದೆ ಎಂದು ನನಗೆ ಅನಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದೆ’ ಎಂದಿದ್ದಾರೆ.

ತಮ್ಮ ಪ್ರತಿಕ್ರಿಯೆಯನ್ನು ಮುಂದುವರಿಸಿದ ಅವರು, ‘ಆ ಸಮಯದಲ್ಲಿ ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬ ಮುಸ್ಲಿಮರಿಗೂ ಸಂದೇಶ ಕಳುಹಿಸಿದೆ. ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರಿಂದ ಹಿಡಿದು ಫಹಾದ್ ಅವರವರೆಗೂ ನನಗೆ ತಿಳಿದಿರುವ ಎಲ್ಲಾ ಮುಸ್ಲಿಮರನ್ನು ತಲುಪಲು ಬಯಸಿದೆ. ಒಬ್ಬ ಹಿಂದೂವಾಗಿ, ನಡೆಯುತ್ತಿರುವ ಘಟನೆಗೆ ನಾನು ಕ್ಷಮೆ ಕೋರುತ್ತೇನೆ, ನನಗೆ ನಾಚಿಕೆಯಾಗುತ್ತಿದೆ ಮತ್ತು ಈ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಅವರಿಗೆ ತಿಳಿಸಲು ಬಯಸಿದ್ದೆ’ ಎಂದು ಹೇಳಿದ್ದಾರೆ.

ಏನಿದು ರಾಮ ಜನ್ಮಭೂಮಿ ತೀರ್ಪು?

2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಅಯೋಧ್ಯೆ ಶೀರ್ಷಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವಾನುಮತದ ತೀರ್ಪು ನೀಡಿತು. ವಿವಾದಿತ 2.77 ಎಕರೆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಹಸ್ತಾಂತರಿಸಲು ಆದೇಶಿಸಿದ ನ್ಯಾಯಾಲಯವು ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಪರ್ಯಾಯವಾಗಿ 5 ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

‘ಪದ್ಮಾವತ್’ ಜೌಹರ್ ದೃಶ್ಯದ ವಿವಾದ ಮರು ಪ್ರಸ್ತಾಪ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರದ ಒಂದು ದೃಶ್ಯವನ್ನು ಟೀಕಿಸಿ ಸ್ವರಾ ಭಾಸ್ಕರ್ ವಿವಾದಕ್ಕೀಡಾಗಿದ್ದರು. ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ‘ವುಮನ್ ಲೈಫ್ ಫ್ರೀಡಂ’ ಸಂವಾದದಲ್ಲಿ ಈ ಕುರಿತು ಮಾತನಾಡಿದ ಅವರು, ‘ಆ ದೃಶ್ಯವನ್ನು ನೋಡುವಾಗ, ನಾನು ಅತ್ಯಾಚಾರ ಸಂತ್ರಸ್ತೆ ಆಗಿದ್ದರೆ ಈ ಸಿನಿಮಾ ನನಗೆ ಏನು ಹೇಳಲು ಹೊರಟಿದೆ ಎಂದು ಯೋಚಿಸಿದೆ. ಮಾನ ಉಳಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂದು ನಾನು ಹೇಡಿ ಎಂದು ಭಾವಿಸಬೇಕೇ? ಅತ್ಯಾಚಾರದಂತಹ ಘಟನೆಗಳು ವ್ಯಾಪಕವಾಗಿರುವ ನಮ್ಮ ಸಮಾಜದಲ್ಲಿ ಸಂತ್ರಸ್ತರಿಗೆ ಬದುಕುವ ಹಕ್ಕಿಲ್ಲ ಎಂದು ಹೇಳಲಾಗುತ್ತಿದೆಯೇ?’ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಸ್ವರಾ ಭಾಸ್ಕರ್ ತೂಕ ಏರಿಕೆಗೆ ಕಾರಣವಾಗಿದ್ದೇನು? ಇದರಿಂದ ತಪ್ಪಿತಾ ಹಲವು ಸಿನಿಮಾ ಅವಕಾಶ?

ದೃಶ್ಯದ ಮತ್ತೊಂದು ಭಾಗವನ್ನು ಉಲ್ಲೇಖಿಸಿ, ‘ಜೌಹರ್ ಆಚರಿಸುವ ಗರ್ಭಿಣಿಯ ಹೊಟ್ಟೆಯ ಕ್ಲೋಸ್-ಅಪ್ ಶಾಟ್ ನೋಡಿ ನನಗೆ ಕೋಪ ಬಂತು. ಮುಂದೆ ಹುಟ್ಟಲಿರುವ ಮಗು ಹೆಣ್ಣಾಗಿದ್ದು, ಮುಸ್ಲಿಂ ಅರಸನಿಂದ ಅತ್ಯಾಚಾರಕ್ಕೊಳಗಾಗಬಹುದು ಎಂಬ ಕಾರಣಕ್ಕೆ ಹುಟ್ಟುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆಯೇ? ಈ ದೃಶ್ಯ ತುಂಬಾ ಸಮಸ್ಯೆಯಿಂದ ಕೂಡಿತ್ತು. ಐದು ದಿನ ಕಾದ ನಂತರವೂ ನನ್ನ ಆಕ್ರೋಶ ಕಡಿಮೆಯಾಗದಿದ್ದಾಗ ನಾನು ಬಹಿರಂಗ ಪತ್ರ ಬರೆದೆ’ ಎಂದು ಸ್ವರಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us