Kangana Ranaut: ‘ಫಿಲ್ಮ್ ಫೇರ್’ ಪ್ರಶಸ್ತಿ ವಿರುದ್ಧ ಹಲವು ಆರೋಪ ಮಾಡಿದ ಕಂಗನಾ ರಣಾವತ್; ಬೇರೆ ನಟಿಯರಿಗೂ ಅವಮಾನ
Kangana Ranaut | Filmfare: ಕಂಗನಾ ರಣಾವತ್ ಅವರು ‘ಫಿಲ್ಮ್ ಫೇರ್’ ಆಯೋಜಕರ ಮೇಲೆ ಹಲವು ಆರೋಪಗಳನ್ನು ಹೊರಿಸಿದ್ದಾರೆ. ಬಾಲಿವುಡ್ನ ಕೆಲವು ನಟಿಯರನ್ನು ‘ಸಾಧಾರಣ’ ಎಂದು ಅವರು ಜರಿದಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ಇದ್ದಲ್ಲಿ ಕಿರಿಕ್ ಇದ್ದೇ ಇರುತ್ತದೆ. ಎಲ್ಲ ವಿಚಾರದಲ್ಲೂ ಅವರು ವಿವಾದ ಮಾಡಿಕೊಳ್ಳುತ್ತಾರೆ. ಈಗ ಅವರು ‘ಫಿಲ್ಮ್ ಫೇರ್’ (Filmfare) ಪ್ರಶಸ್ತಿ ವಿರುದ್ಧ ಗರಂ ಆಗಿದ್ದಾರೆ. ಆಯೋಜಕರ ಮೇಲೆ ಅನೇಕ ಆರೋಪಗಳನ್ನು ಅವರು ಹೊರಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಬಾರಿ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ ಸ್ಪರ್ಧಿಸಲು ನಾಮಿನೇಟ್ ಆದ ಇತರೆ ನಟಿಯರನ್ನು ‘ಸಾಧಾರಣ’ ಎಂದು ಜರಿಯುವ ಮೂಲಕ ಅವಮಾನ ಮಾಡಿದ್ದಾರೆ. ಕಂಗನಾ ರಣಾವತ್ ಅವರ ಈ ಮಾತುಗಳು ಚರ್ಚೆ ಹುಟ್ಟುಹಾಕಿವೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಆದರೂ ಕೂಡ ಅವರು ಸದಾ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇಂಥ ಕಿರಿಕ್ಗಳೇ ಹೊರತು ಬೇರೇನೂ ಅಲ್ಲ. ಸದ್ಯ ಅವರು ‘ಫಿಲ್ಮ್ ಫೇರ್’ ವಿಚಾರದಲ್ಲಿ ವಿವಾದ (Controversy) ಮಾಡಿಕೊಂಡಿದ್ದಾರೆ.
67ನೇ ಸಾಲಿನ ‘ಫಿಲ್ಮ್ ಫೇರ್’ ಪ್ರಶಸ್ತಿಯ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ ವಿದ್ಯಾ ಬಾಲನ್ (ಶೇರ್ನಿ ಮತ್ತು ಜಸ್ಲಾ), ತಾಪ್ಸಿ ಪನ್ನು (ರಶ್ಮಿ ರಾಕೆಟ್), ಕೃತಿ ಸನೋನ್ (ಮಿಮಿ), ಕಿಯಾರಾ ಅಡ್ವಾಣಿ (ಶೇರ್ಷಾ), ಪರಿಣೀತಿ ಚೋಪ್ರಾ (ಸಂದೀಪ್ ಔರ್ ಪಿಂಕಿ ಫರಾರ್), ಕಂಗನಾ ರಣಾವತ್ (ತಲೈವಿ) ಅವರನ್ನು ನಾಮಿನೇಟ್ ಮಾಡಲಾಗಿದೆ. ಇದು ಕಂಗನಾಗೆ ಸಮಾಧಾನ ತರಿಸಿಲ್ಲ.
‘ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಿದ್ದರೆ ಮತ್ತು ವೇದಿಕೆಯಲ್ಲಿ ಡ್ಯಾನ್ಸ್ ಮಾಡದಿದ್ದರೆ ಪ್ರಶಸ್ತಿ ಸಿಗುವುದಿಲ್ಲ ಎಂದು ಫಿಲ್ಮ್ ಫೇರ್ ಆಯೋಜಕರು 2013ರಲ್ಲೇ ನನಗೆ ಸ್ಪಷ್ಟವಾಗಿ ಹೇಳಿದ್ದರು. ನೈತಿಕವಾಗಿ ಸರಿಯಲ್ಲದ ಯಾವುದೇ ಕಾರ್ಯಕ್ರಮಕ್ಕೂ ನಾನು ಬರುವುದಿಲ್ಲ ಅಂತ ಅವರಿಗೆ ನಾನು ಆಗಲೇ ಹೇಳಿದ್ದೆ’ ಎಂದಿದ್ದಾರೆ ಕಂಗನಾ.
‘ಸಮಾರಂಭಕ್ಕೆ ಬಾರದೇ ಇರುವವರಿಗೆ ಪ್ರಶಸ್ತಿ ಕೊಡುವುದಿಲ್ಲ ಎಂದು ಅವರ ನಿಯಮವೇ ಇರುವಾಗ ನಾಮನಿರ್ದೇಶನ ಮಾಡುವುದು ಯಾಕೆ? ಸಾಧಾರಣ ನಟಿಯರ ವಿರುದ್ಧ ನನ್ನನ್ನು ಕಣಕ್ಕಿಳಿಸಿ, ಅನೇಕ ಬಾರಿ ಹತಾಶೆಯಿಂದ ಬ್ಲಾಕ್ ಮೇಲ್ ಕರೆಗಳನ್ನು ಮಾಡುವುದು ಯಾಕೆ’ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಫಿಲ್ಮ್ ಫೇರ್ ವಿರುದ್ಧ ಅವರು ಕೇಸ್ ಹಾಕುವುದಾಗಿಯೂ ತಿಳಿಸಿದ್ದಾರೆ.
‘2014ರಿಂದ ನಾನು ಇಂಥ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಬ್ಯಾನ್ ಮಾಡಿದ್ದೇನೆ. ಇಂದಿಗೂ ಅವರು ನನ್ನನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂಬುದು ತಿಳಿದು ಅಚ್ಚರಿ ಆಯಿತು. ಇಂಥ ಭ್ರಷ್ಟ ನಡೆಯ ವಿರುದ್ಧ ನಾನು ಕೇಸ್ ಹಾಕುತ್ತೇನೆ’ ಎಂದು ಕಂಗನಾ ಹೇಳಿದ್ದಾರೆ, ಇದಕ್ಕೆ ತಿರುಗೇಟು ನೀಡಿರುವ ‘ಫಿಲ್ಮ್ ಫೇರ್’ ಆಯೋಜಕರು ಈ ಬಾರಿಯ ನಾಮಿನೇಷನ್ ಪಟ್ಟಿಯಿಂದ ಕಂಗನಾ ಹೆಸರನ್ನು ತೆಗೆದು ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Mon, 22 August 22