‘ದಿ ವ್ಯಾಕ್ಸಿನ್ ವಾರ್’ ಪೋಸ್ಟರ್ ಬಿಡುಗಡೆ: ವಿಜ್ಞಾನಿಯಾಗಿ ಸಪ್ತಮಿ ಗೌಡ

The Vaccine War: 'ದಿ ಕಾಶ್ಮೀರ್ ಫೈಲ್ಸ್ ' ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕನ್ನಡತಿ ಸಪ್ತಮಿ ಗೌಡ ಸಹ ನಟಿಸಿದ್ದಾರೆ.

'ದಿ ವ್ಯಾಕ್ಸಿನ್ ವಾರ್' ಪೋಸ್ಟರ್ ಬಿಡುಗಡೆ: ವಿಜ್ಞಾನಿಯಾಗಿ ಸಪ್ತಮಿ ಗೌಡ
ದಿ ವ್ಯಾಕ್ಸಿನ್ ವಾರ್
Follow us
|

Updated on: Sep 10, 2023 | 11:16 PM

ದಿ ಕೇರಳ ಸ್ಟೋರಿ‘ (The Kerala story) ಸಿನಿಮಾ ನಿರ್ದೇಶಿಸಿ ಜನಪ್ರಿಯತೆ ಗಳಿಸಿರುವ ವಿವೇಕ್ ಅಗ್ನಿಹೋತ್ರಿ ಅದಾದ ಬಳಿಕ ಮತ್ತೊಂದು ನೈಜ ಘಟನೆಯ ಸುತ್ತ ಸಿನಿಮಾ ಮಾಡಲು ಮುಂದಾಗಿದ್ದರು. ಇದೀಗ ಆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದು ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಕನ್ನಡದ ನಟಿ ಸಪ್ತಮಿ ಗೌಡ ಸಹ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿದ್ದು, ಸಿನಿಮಾದಲ್ಲಿ ಅವರು ಸಹಾಯಕ ವಿಜ್ಞಾನಿಯ ಪಾತ್ರದಲ್ಲಿ ನಟಿಸಿದ್ದಾರೆಂಬ ಅನುಮಾನ ಪೋಸ್ಟರ್​ ನೋಡಿದವರಿಗೆ ಮೂಡುತ್ತಿದೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾವು ಕೋವಿಡ್ ಸಮಯದಲ್ಲಿ ಭಾರತ ವ್ಯಾಕ್ಸಿನ್ ನಿರ್ಮಾಣ ಮಾಡಿದ ಕತೆಯನ್ನು ಒಳಗೊಂಡಿದೆ. ಇದು ಸತ್ಯ ಘಟನೆ ಎಂದು ನಿರ್ದೇಶಕರು ಹೇಳಿದ್ದಾರೆ. ಸಿನಿಮಾ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್​ನಲ್ಲಿ ನಾನಾ ಪಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಅವರುಗಳ ಚಿತ್ರಗಳ ಜೊತೆಗೆ ಬಿಳಿ ಬಣ್ಣದ ಏಪ್ರನ್ ಧರಿಸಿರುವ ಸಪ್ತಮಿ ಗೌಡ ಅವರ ಚಿತ್ರವೂ ಇದೆ. ಸಿನಿಮಾದ ಚಿತ್ರೀಕರಣ ಹಾಗೂ ಪ್ರಮಾಣ ಪತ್ರವೂ ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದ್ದು ಸಿನಿಮಾ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.

ವಿವೇಕ್ ಅಗ್ನಿಹೋತ್ರಿ, ಈಗಾಗಲೇ ಸಿನಿಮಾವನ್ನು ವಿದೇಶದಲ್ಲಿ ಕೆಲವೆಡೆ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ತಾವೇ ಖುದ್ದಾಗಿ ಹೋಗಿ ಅಮೆರಿಕದ ಹಲವು ಪ್ರದೇಶಗಳಲ್ಲಿ ಅಲ್ಲಿನ ಭಾರತೀಯರಿಗಾಗಿ ಪೇಯ್ಡ್ ಪ್ರೀಮಿಯರ್​ಗಳನ್ನು ಪ್ರದರ್ಶಿಸಿದ್ದಾರೆ. ಸಿನಿಮಾದ ನೋಡಿದ ಕೆಲವರು ನೀಡಿರುವ ಧನಾತ್ಮಕ ಪ್ರತಿಕ್ರಿಯೆಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವ್ಯಾಕ್ಸಿನ್ ನಿರ್ಮಾಣದ ಘಟನೆಯನ್ನು ಭಾವುಕ ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಕಟ್ಟಿಕೊಟ್ಟಿದ್ದು, ಭಾರತದಲ್ಲಿ ಈ ಸಿನಿಮಾ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದೆ.

ವಿವೇಕ್ ಅಗ್ನಿಹೋತ್ರಿ ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದಾಗ ಆ ಸಿನಿಮಾ ಸೂಪರ್ ಹಿಟ್ ಆಗುವ ಜೊತೆಗೆ ವಿವಾದವನ್ನೂ ಎಬ್ಬಿಸಿತ್ತು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರೊಪಾಗಾಂಡಾ ಸಿನಿಮಾ ಎಂಬ ಹಣೆಪಟ್ಟಿಗೆ ಗುರಿಯಾಯಿತು. ಆದರೆ ಆ ಸಿನಿಮಾಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ಕೇಂದ್ರ ಸಚಿವರು, ಸಂಸದರ ಪ್ರಚಾರ, ಪ್ರಸಾರ ಉಚಿತವಾಗಿ ದೊರಕಿತ್ತು. ಕರ್ನಾಟಕ ಸೇರಿದಂತೆ ಹಲವು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಸಹ ದೊರಕಿತ್ತು.

ಇದನ್ನೂ ಓದಿ:ರಿಲೀಸ್​ಗೆ ತಿಂಗಳು ಬಾಕಿ ಇರುವಾಗಲೇ ‘ದಿ ವ್ಯಾಕ್ಸಿನ್ ವಾರ್’ ನೋಡಿ ವಿಮರ್ಶೆ ತಿಳಿಸಿದ ಆರ್​ ಮಾಧವನ್

ಆ ಸಿನಿಮಾದ ಬಳಿಕ ವಿವೇಕ್ ಅಗ್ನಿಹೋತ್ರಿಗೆ ಬಲಪಂಥೀಯ ಹಾಗೂ ಬಿಜೆಪಿ ಪರ ಎಂಬ ಹಣೆಪಟ್ಟಿಯೂ ಧಕ್ಕಿತ್ತು. ಅದರಂತೆಯೇ ವಿವೇಕ್ ಅಗ್ನಿಹೋತ್ರಿ ವ್ಯಾಕ್ಸಿನ್ ಕತೆಯನ್ನು ತಮ್ಮ ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡು, ಸರ್ಕಾರದ ಪರವಾಗಿ ನರೆಟಿವ್ ಕಟ್ಟುವ ರೀತಿಯಲ್ಲಿ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ, ಸಪ್ತಮಿ ಗೌಡ, ರೀಮಾ ಸೇನ್, ಗಿರಿಜಾ ಓಕ್, ಸ್ನೇಹಾ ಮಿಲಂದ್ ಇನ್ನೂ ಹಲವರು ನಟಿಸಿದ್ದಾರೆ. ಕನ್ನಡತಿ ಸಪ್ತಮಿ ಗೌಡಗೆ ಇದು ಮೊದಲ ಬಾಲಿವುಡ್ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ