ಗೋಧ್ರಾ ಹತ್ಯಾಕಾಂಡ ಕುರಿತ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಆ.2ಕ್ಕೆ ಬಿಡುಗಡೆ
2002ರ ಫೆ.27ರಂದು ಗೋಧ್ರಾ ರೇಲ್ವೆ ನಿಲ್ದಾಣದ ಸಮೀಪ ಭಾರಿ ದುರಂತ ನಡೆದಿತ್ತು. ಆ ಕಹಿ ಘಟನೆಯ ಸುತ್ತ ಅನೇಕ ವಿವಾದಗಳು ಸುತ್ತಿಕೊಂಡಿವೆ. ಆ ಘಟನೆಯನ್ನು ಕೇಂದ್ರವಾಗಿ ಇಟ್ಟುಕೊಂಡು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಸಿದ್ಧವಾಗಿದೆ. ಆದ್ದರಿಂದ ಪ್ರೇಕ್ಷಕರಿಗೆ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ಆಗಸ್ಟ್ 2ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಹಲವು ವರ್ಷಗಳ ಹಿಂದೆ ನಡೆದ ಕಹಿ ಘಟನೆಗಳನ್ನು ಆಧರಿಸಿ ಸಿದ್ಧವಾದ ಕೆಲವು ಸಿನಿಮಾಗಳು ಭಾರಿ ಯಶಸ್ಸು ಕಂಡಿವೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಅದೇ ರೀತಿ ಗೋಧ್ರಾ (Godhra) ಹತ್ಯಾಕಾಂಡದ ಕುರಿತು ಈಗ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾಗೆ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಎಂದು ಶೀರ್ಷಿಕೆ ಇಡಲಾಗಿದೆ. ಕೆಲವೇ ತಿಂಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿತ್ತು. ಈಗ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 2ರಂದು ಈ ಸಿನಿಮಾ ರಿಲೀಸ್ ಆಗಲಿದೆ. ನಟ ವಿಕ್ರಾಂತ್ ಮಾಸ್ಸಿ (Vikrant Massey) ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾ ರೇಲ್ವೆ ನಿಲ್ದಾಣದ ಬಳಿ ದೊಡ್ಡ ದುರಂತ ಸಂಭವಿಸಿತ್ತು. ಆ ಘಟನೆಯ ಸುತ್ತ ಹಲವಾರು ವಿವಾದಗಳು ಸುತ್ತಿಕೊಂಡಿವೆ. ಅದೇ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನಿರ್ಮಾಣ ಆಗಿರುವುದರಿಂದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. 22 ವರ್ಷಗಳ ಹಿಂದೆ ನಡೆದ ಘಟನೆಯ ಚಿತ್ರಣ ಈಗ ದೊಡ್ಡ ಪರದೆಯಲ್ಲಿ ಜನರ ಎದುರು ಬರಲಿದೆ.
View this post on Instagram
ಬಾಲಾಜಿ ಮೋಷನ್ ಪಿಕ್ಚರ್ಸ್ನ ‘ಬಾಲಾಜಿ ಟಿಲಿಫಿಲ್ಮ್ಸ್’ ಮೂಲಕ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನಿರ್ಮಾಣ ಆಗಿದೆ. ರಂಜನ್ ಚಂಡೇಲ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಕ್ರಾಂತ್ ಮಾಸ್ಸಿ ಜೊತೆಗೆ ರಾಶಿ ಖನ್ನಾ, ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ವಿವಾದಾತ್ಮಕ ವಸ್ತುವಿಷಯ ಇರುವುದರಿಂದ ಈ ಸಿನಿಮಾಗೆ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ‘ಇರ್ಫಾನ್ ಖಾನ್ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್ ಮಾಸ್ಸಿಗೆ ಕಂಗನಾ ಹೊಗಳಿಕೆ
ಈ ಮೊದಲು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಮೇ 3ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ದೇಶಾದ್ಯಂತ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಲವು ಹಂತಗಳಲ್ಲಿ ಮತದಾನಕ್ಕೆ ದಿನಾಂಕಗಳು ನಿಗದಿ ಆಗಿವೆ. ಇಂಥ ಸಂದರ್ಭದಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಿದರೆ ನೀತಿ ಸಂಹಿತೆಯ ಉಲ್ಲಂಘನೆ ಆಗಲಿದೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಚಿತ್ರದ ಬಿಡುಗಡೆ ದಿನಾಂಕವನ್ನು ಮೇ 3ರ ಬದಲಿಗೆ ಆಗಸ್ಟ್ 2ಕ್ಕೆ ಮುಂದೂಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.