
ಬಿ. ಸುರೇಶ್ (B Suresh) ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದ ವಿವಿಧ ವಿಭಾಗಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಕಲಾ ಕುಟುಂಬದ ಕುಡಿ ಅಂದರೆ ಶೈಲಜಾ ಹಾಗೂ ಸುರೇಶ್ ಪುತ್ರಿ ಚಂದನಾ ಎಸ್. ನಾಗ್ ಈಗ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನಾಟ್ಯಶಾಲೆಯಲ್ಲಿ ಕಲಿಯುತ್ತಿರುವ ಚಂದನಾ ಅವರಿಗೆ ಆಪ್ತರು ಶುಭಕೋರುತ್ತಿದ್ದಾರೆ. ಏಪ್ರಿಲ್ 20ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿನ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ನಟಿಯಾಗಿ, ಬರಹಗಾರ್ತಿಯಾಗಿ, ನೃತ್ಯಗಾರ್ತಿಯಾಗಿ, ನಿರ್ದೇಶಕಿಯಾಗಿಯೂ ಚಂದನಾ ಗುರುತಿಸಿಕೊಂಡಿದ್ದಾರೆ. ಹುಟ್ಟಿದ್ದು ಕಲಾ ಕುಟುಂಬದಲ್ಲಾದ್ದರಿಂದ ಅವರಿಗೆ ಇದರ ಆಳ-ಅಗಲ ತಿಳಿದಿದೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವಿಷ್ಯುವಲ್ ಕಮ್ಯೂನಿಕೇಷನ್ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ನಾಟಕ ರಂಗದಲ್ಲಿ ಚಂದನಾ ಅವರು ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಸಂಚಯ, ಸಮುದಾಯ ಮತ್ತು ಬೆಂಗಳೂರು ಪ್ಲೇಯರ್ಸ್ ಸೇರಿದಂತೆ ಹಲವು ರಂಗತಂಡಗಳಲ್ಲಿ ಚಂದನಾ ಸಕ್ರಿಯರಾಗಿದ್ದಾರೆ. 2024ರಲ್ಲಿ ನಡೆದ ‘ನಾಟಕ ಬೆಂಗಳೂರು ಫೆಸ್ಟಿವಲ್’ನಲ್ಲಿ ಇವರು ಬರೆದ ‘ಕುಟ್ಸುಗಿ’ ನಾಟಕ ‘ಅತ್ಯತ್ತುಮ ಮೂಲ ನಾಟಕ ಕೃತಿ’ ಅವಾರ್ಡ್ ಪಡೆಯಿತು.
ಇದನ್ನೂ ಓದಿ: ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ
‘ಅನ್‌ವಾಂಟೆಡ್ ಕಿಡ್’, ‘ಸದ್ಗತಿ’, ‘ಪಂಜರದ ಗಿಳಿ’ ರೀತಿಯ ಕಿರುಚಿತ್ರಗಳಲ್ಲಿ ಚಂದನಾ ನಟಿಸಿದ್ದಾರೆ. ಈ ಕಿರುಚಿತ್ರವು ಅನೇಕ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು, ಅವಾರ್ಡ್ ಗೆದ್ದಿದೆ ಎಂಬುದು ವಿಶೇಷ. 2021ರಲ್ಲಿ ನಡೆದ ‘ಪ್ರಗುಣಿ ಶಾರ್ಟ್ ಫಿಲಂ ಫೆಸ್ಟಿವಲ್’ನಲ್ಲಿ ಅವರಿಗೆ ಅತ್ಯುತ್ತಮ ನಟಿ ಅವಾರ್ಡ್ ದೊರೆತಿದೆ. ದರ್ಶನ್ ನಟನೆಯ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾಗಳ ನಿರ್ದೇಶನ ತಂಡದಲ್ಲಿ ಅವರು ಸಹಾಯಕ ನಿರ್ದೇಶಕಿ ಆಗಿದ್ದರು.
ಗುರು ಭಾನುಮತಿ ಅವರ ಬಳಿ ಸುಮಾರು 10 ವರ್ಷಗಳ ಕಾಲ ಚಂದನಾ ಅವರು ಭರತನಾಟ್ಯ ಕಲಿತಿದ್ದಾರೆ. ಈಗ ಗುರು ಸ್ನೇಹಾ ಕಪ್ಪಣ್ಣ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಏಪ್ರಿಲ್ 20ರಂದು ನಡೆಯುವ ಕಾರ್ಯಕ್ರಮಕ್ಕೆ ನೂಪುರ ಸ್ಕೂಲ್ ಆಫ್ ಭರತನಾಟ್ಯಂನ ನಿರ್ದೇಶಕಿ ಡಾ. ಲಲಿತಾ ಶ್ರೀನಿವಾಸನ್, ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.