ಐಎಂಡಿಬಿ ಪಟ್ಟಿಯಲ್ಲಿರುವ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಿವು; ಯಾವ ಯಾವ ಚಿತ್ರ ಇದೆ ನೋಡಿ
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಅದೇ ರೀತಿ ‘ಸಲಾರ್’ ಸಿನಿಮಾ ಬಗ್ಗೆ ದೊಡ್ಡ ಹೈಪ್ ಸೃಷ್ಟಿ ಆಗಿದೆ. ‘ದಿ ವ್ಯಾಕ್ಸಿನ್ ವಾರ್’, ‘ಚಂದ್ರಮುಖಿ 2’ ಮುಂತಾದ ಸಿನಿಮಾಗಳು ಕೂಡ ಈ ಪಟ್ಟಿಯಲ್ಲಿವೆ.
ಇಂಟರ್ನೆಟ್ ಮೂವೀ ಡೇಟಾಬೇಸ್ ಅನ್ನೋದು ಐಎಂಡಿಬಿ (IMDb) ವಿಸ್ತ್ರತ ರೂಪ. ಈ ವೆಬ್ಸೈಟ್ನಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡೋಕೆ ಅವಕಾಶ ಇರುತ್ತದೆ. ಇದರ ಆಧಾರದ ಮೇಲೆ ಸಿನಿಮಾ ಹಾಗೂ ವೆಬ್ ಸೀರಿಸ್ಗಳಿಗೆ ರೇಟಿಂಗ್ ನೀಡಲಾಗುತ್ತದೆ. ಇದರ ಜೊತೆಗೆ ಬಹು ನಿರೀಕ್ಷಿತ ಸಿನಿಮಾಗಳ (Most Anticipated Movies) ಲಿಸ್ಟ್ ಕೂಡ ನೀಡಲಾಗುತ್ತದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಸಾಲಿನಲ್ಲಿ ಹಲವು ಚಿತ್ರಗಳಿವೆ. ಯಾವವು ಆ ಸಿನಿಮಾಗಳು ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ಲಿಯೋ’: ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರ ರಿಲೀಸ್ಗೂ ಮೊದಲೇ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಐಎಂಡಿಬಿಯ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಈ ಚಿತ್ರಕ್ಕೆ ಮೊದಲ ಸ್ಥಾನ ಇದೆ. ಶೇ. 26ರಷ್ಟು ಮಂದಿ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
‘ಸಲಾರ್’: ಪ್ರಶಾಂತ್ ನೀಲ್ ‘ಕೆಜಿಎಫ್ 2’ ಚಿತ್ರದ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಕಾರಣದಿಂದ ‘ಸಲಾರ್’ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಕನ್ನಡದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಹಣ ಹೂಡಿದೆ. ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕಾಗಿ ಶೇ. 13.8 ಮಂದಿ ಕಾದಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ಬಿಡುಗಡೆಗೂ ಮೊದಲೇ 350 ಕೋಟಿ ರೂಪಾಯಿ ಬಾಚಿಕೊಂಡ ‘ಸಲಾರ್’ ಸಿನಿಮಾ?
‘ಥ್ಯಾಂಕ್ ಯೂ ಫಾರ್ ಕಮಿಂಗ್’: ಕರಣ್ ಬೂಲಾನಿ ನಿರ್ದೇಶನದ, ಭೂಮಿ ಪಡ್ನೇಕರ್, ಶಿಬಾನಿ ಬೇಡಿ ಮೊದಲಾದವರು ನಟಿಸಿರುವ ‘ಥ್ಯಾಂಕ್ ಯೂ ಫಾರ್ ಕಮಿಂಗ್’ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಶೇ. 13.5 ಮಂದಿ ಕಾದಿದ್ದಾರೆ.
ಚಂದ್ರಮುಖಿ 2: ‘ಆಪ್ತಮಿತ್ರ’ ಚಿತ್ರದ ರಿಮೇಕ್ ಆಗಿ ‘ಚಂದ್ರಮುಖಿ’ ರಿಲೀಸ್ ಆಗಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಈ ಚಿತ್ರಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದಾರೆ. ಕಂಗನಾ ರಣಾವತ್, ಮಹಿಮಾ ನಂಬಿಯಾರ್, ರಾಘವ್ ಲಾರೆನ್ಸ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಶೇ.10.1 ಮಂದಿ ಕಾದಿದ್ದಾರೆ.
‘ಫುಕ್ರೆ 3’: ಈ ಮೊದಲು ‘ಫುಕ್ರೆ’ ಹಾಗೂ ‘ಫುಕ್ರೆ 2’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿದ್ದವು. ಈಗ ‘ಫುಕ್ರೆ 3’ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದಲ್ಲಿ ಅಲಿ ಫಾಜಲ್, ಪಂಕಜ್ ತ್ರಿಪಾಠಿ, ರಿಚಾ ಚಡ್ಡಾ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಿಗ್ದೀಪ್ ಲಂಬಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಶೇ.9.3 ಮಂದಿ ಕಾದಿದ್ದಾರೆ.
ಇದನ್ನೂ ಓದಿ: ‘ಜವಾನ್’ ಅಬ್ಬರಕ್ಕೆ ಹೆದರಿದ ಕಂಗನಾ ರಣಾವತ್? ಮುಂದಕ್ಕೆ ಹೋಯ್ತು ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ
ಸ್ಕಂದ: ದಿ ಅಟ್ಯಾಕರ್: ‘ಸ್ಕಂದ’ ಸಿನಿಮಾ ಈ ವಾರ ರಿಲೀಸ್ ಆಗಬೇಕಿತ್ತು. ಆದರೆ, ‘ಜವಾನ್’ ಅಬ್ಬರ ಜೋರಿರುವುದರಿಂದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಸೆಪ್ಟೆಂಬರ್ 28ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ಶೇ.8 ಮಂದಿ ಕಾದಿದ್ದಾರೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ, ಕನ್ನಡದ ನಟಿ ಶ್ರೀಲೀಲಾ ನಟಿಸಿದ್ದಾರೆ.
ಮಿಷನ್ ರಾಣಿಗಂಜ್: ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ರಾಣಿಗಂಜ್ ಗಣಿಯಲ್ಲಿ ಪ್ರವಾಹ ಸಂಭವಿಸಿತ್ತು. ಆಗ ಜಸ್ವಂತ್ ಸಿಂಗ್ ಗಿಲ್ ಎಂಬುವವರು ಅನೇಕರನ್ನು ರಕ್ಷಿಸಿದ್ದರು. ಇಲ್ಲಿ ಜಸ್ವಂತ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಕೊವಿಡ್ ಸಂದರ್ಭದಲ್ಲಿ ಭಾರತ ಔಷಧ ಕಂಡು ಹಿಡಿದಿತ್ತು. ಇದೇ ಕಥೆ ಆಧರಿಸಿ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಅವರ ಪತ್ನಿ ಪಲ್ಲವಿ ಜೋಶಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್, ಸಪ್ತಮಿ ಗೌಡ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಶೇ. 5.1 ಮಂದಿ ಕಾದಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಭಾರತದ ವಿಜ್ಞಾನಿಗಳು ಹೋರಾಡಿದ ಕಥೆ; ಗಮನ ಸೆಳೆದ ‘ದಿ ವ್ಯಾಕ್ಸಿನ್ ವಾರ್’ ಟ್ರೇಲರ್
ಸುಖೀ: ಶಿಲ್ಪಾ ಶೆಟ್ಟಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರು ‘ಸುಖೀ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರ 9ನೇ ಸ್ಥಾನದಲ್ಲಿದೆ. ಈ ಚಿತ್ರಕ್ಕಾಗಿ ಶೇ.4.3 ಮಂದಿ ಕಾದಿದ್ದಾರೆ. ಈ ಸಿನಿಮಾಗೆ ಸೋನಲ್ ಜೋಶಿ ಅವರು ನಿರ್ದೇಶನ ಮಾಡಿದ್ದಾರೆ.
ಕಣ್ಣೂರ್ ಸ್ಕ್ವಾಡ್: ರಾಬಿ ವರ್ಗೀಸ್ ರಾಜ್ ನಿರ್ದೇಶನದ ‘ಕಣ್ಣೂರ್ ಸ್ಕ್ವಾಡ್’ ಸಿನಿಮಾ ಕೂಡ ರೇಸ್ನಲ್ಲಿದೆ. ಈ ಚಿತ್ರವನ್ನು ನೋಡಲು ಶೇ. 4.2 ಮಂದಿ ಕಾದಿದ್ದಾರೆ. ಈ ಸಿನಿಮಾ ಮಲಯಾಳಂನಲ್ಲಿ ಮೂಡಿ ಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:17 pm, Sat, 16 September 23