ಬಾಲಿವುಡ್ ನಟರಿಗೂ ಅಲ್ಲು ಅರ್ಜುನ್ಗೂ ಏನು ವ್ಯತ್ಯಾಸ? ತಿಳಿಸಿದ ಗಣೇಶ್ ಆಚಾರ್ಯ
Ganesh Acharya: ಗಣೇಶ್ ಆಚಾರ್ಯ ದೇಶದ ಬಲು ಬೇಡಿಕೆಯ ಡ್ಯಾನ್ಸ್ ಕೊರಿಯೋಗ್ರಾಫರ್. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳಿಗೂ ಅವರೇ ಕೊರಿಯೋಗ್ರಫಿ ಮಾಡುತ್ತಾರೆ. ‘ಪುಷ್ಪ’ ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ಗಣೇಶ್ ಆಚಾರ್ಯ, ಅಲ್ಲು ಅರ್ಜುನ್ ಮತ್ತು ಬಾಲಿವುಡ್ನ ನಟರ ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಗಣೇಶ್ ಆಚಾರ್ಯ ಭಾರತ ಚಿತ್ರರಂಗದ ಸೆಲೆಬ್ರಿಟಿ ಕೋರಿಯೋಗ್ರಾಫರ್. ರಾಷ್ಟ್ರಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಆಗಿರುವ ಗಣೇಶ್ ಆಚಾರ್ಯ ಡ್ಯಾನ್ಸ್ ಹೇಳಿಕೊಡದ ಸ್ಟಾರ್ ನಟರೇ ಭಾರತದಲ್ಲಿ ಇಲ್ಲ. ದಡೂತಿ ದೇಹ ಹೊಂದಿದ್ದರೂ ಸಹ ಅದ್ಭುತವಾಗಿ ಡ್ಯಾನ್ಸ್ ಮಾಡುವ, ಹಾಡಿನ ಮೂಡ್ಗೆ ತಕ್ಕಂತೆ ನಾಯಕ-ನಾಯಕಿಯ ವ್ಯಕ್ತಿತ್ವಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹೆಣೆಯುವುದರಲ್ಲಿ ನಿಸ್ಸೀಮರು. ಇತ್ತೀಚೆಗಷ್ಟೆ ಗಣೇಶ್ ಆಚಾರ್ಯ ಅವರು ಕನ್ನಡದ ‘ಕಿಸ್ ಕಿಸ್ ಕಿಸಕ್’ ಸಿನಿಮಾಕ್ಕೂ ಕೊರಿಯೋಗ್ರಫಿ ಮಾಡಿದ್ದಾರೆ. ‘ಪುಷ್ಪ’ ಸಿನಿಮಾಕ್ಕೂ ಗಣೇಶ್ ಆಚಾರ್ಯ ಅವರದ್ದೇ ಕೊರಿಯೋಗ್ರಫಿ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಗಣೇಶ್ ಆಚಾರ್ಯ, ಅಲ್ಲು ಅರ್ಜುನ್ಗೂ ಬಾಲಿವುಡ್ನ ನಟರಿಗೂ ಇರುವ ವ್ಯತ್ಯಾಸ ತಿಳಿಸಿದ್ದಾರೆ.
‘ಪುಷ್ಪ’ ಸಿನಿಮಾಕ್ಕೆ ನಾನು ಕೊರಿಯೋಗ್ರಫಿ ಮಾಡಿದಾಗ ಅಲ್ಲು ಅರ್ಜುನ್ ಅವರಿಗೆ ನಾನು ಕಂಪೋಸ್ ಮಾಡಿದ ಸ್ಟೆಪ್ಪುಗಳು ಬಹಳ ಇಷ್ಟವಾಗಿಬಿಟ್ಟಿದ್ದವು. ಅದೆಷ್ಟು ಇಷ್ಟವಾಗಿದ್ದವೆಂದರೆ ನನಗೆ ಖುದ್ದಾಗಿ ಕರೆ ಮಾಡಿ ಅವರು ಅಭಿನಂದನೆ ಸಲ್ಲಿಸಿದರು. ಮೆಚ್ಚುಗೆ ವ್ಯಕ್ತಪಡಿಸಿದರು. ಡ್ಯಾನ್ಸ್ ನ ಬಗ್ಗೆ ಚರ್ಚೆ ಮಾಡಿದರು. ಆದರೆ ನಾನೂ ಎಷ್ಟೋಂದು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದೀನಿ ಆದರೆ ಯಾವೊಬ್ಬ ನಟನೂ ಸಹ ನನಗೆ ಕರೆ ಮಾಡಿ ಚೆನ್ನಾಗಿ ಸ್ಟೆಪ್ಸ್ ಹೇಳಿಕೊಟ್ಟಿದ್ದೀಯ ಎಂದು ಹೇಳಿಲ್ಲ’ ಎಂದಿದ್ದಾರೆ.
ಮಾತ್ರವಲ್ಲದೆ ತಮಗೆ ‘ಪುಷ್ಪ 2’ ಸಿನಿಮಾಕ್ಕೆ ಕೆಲಸ ಮಾಡಬೇಕಾದರೆ ಬಹಳ ಭಯವಿತ್ತು. ‘ಪುಷ್ಪ’ ಸಿನಿಮಾದ ಡ್ಯಾನ್ಸ್ ಸ್ಟೆಪ್ಪುಗಳು ಬಹಳ ಹಿಟ್ ಆಗಿದ್ದವು. ಅದೇ ಹಂತಕ್ಕೆ ಮಾಡಬಲ್ಲೆನ ಎಂಬ ಭಯವಿತ್ತು. ಆದರೆ ಅಲ್ಲು ಅರ್ಜುನ್ ಅವರೇ ನನಗೆ ಧೈರ್ಯ ತುಂಬಿದರು. ಹಾಗಾಗಿ ‘ಪುಷ್ಪ 2’ ಸಿನಿಮಾಕ್ಕೂ ಸಹ ಒಳ್ಳೆಯ ಕೊರಿಯೋಗ್ರಫಿ ಮಾಡಲು ಸಾಧ್ಯವಾಯ್ತು’ ಎಂದಿದ್ದಾರೆ ಗಣೇಶ್ ಆಚಾರ್ಯ.
ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಗಣೇಶ್ ಆಚಾರ್ಯ ದೇಶದ ಬಲು ಜನಪ್ರಿಯ ಮತ್ತು ಬೇಡಿಕೆಯ ಡ್ಯಾನ್ಸ್ ಕೊರಿಯೋಗ್ರಾಫರ್. ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್ ಎರಡರಲ್ಲೂ ಬಹಳ ಬ್ಯುಸಿಯಾಗಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕೂ ಸಹ ಇವರೇ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದಾರೆ. ಕೊರಿಯೋಗ್ರಾಫರ್ ಮಾತ್ರವೇ ಅಲ್ಲದೆ ನಟರಾಗಿ ಹಾಗೂ ಸಿನಿಮಾ ನಿರ್ದೇಶಕರಾಗಿಯೂ ಸಹ ಗಣೇಶ್ ಆಚಾರ್ಯ ಕೆಲಸ ಮಾಡಿದ್ದಾರೆ.
ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾದ ಬಳಿಕ ಇದೀಗ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಅವರು ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಒಂದು ಬಾಲಿವುಡ್ ಸಿನಿಮಾದಲ್ಲಿಯೂ ಸಹ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ