14 ವರ್ಷ ಹಳೆಯ ಪ್ರಭಾಸ್ ಸಿನಿಮಾ ಮೇಲೆ ಕೇಸು, ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್
Prabhas Movies: ಪ್ರಭಾಸ್ ನಟನೆಯ 14 ವರ್ಷ ಹಳೆಯ ಸಿನಿಮಾದ ವಿರುದ್ಧ ದೂರೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಅಂದಹಾಗೆ ಯಾವುದು ಆ ಸಿನಿಮಾ? ಯಾರು ಪ್ರಕರಣ ದಾಖಲಿಸಿದ್ದರು? ಪ್ರಕರಣ ದಾಖಲಿಸಿದ್ದು ಏಕೆ? ಈಗ ಪ್ರಕರಣ ಏನಾಯ್ತು? ಇಲ್ಲಿದೆ ಸಂಪೂರ್ಣ ಮಾಹಿತಿ...

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಟೈಂ ಸರಿಯಿಲ್ಲ. ಕಳೆದ ಎರಡು ತಿಂಗಳಲ್ಲಿ ಸಾಕಷ್ಟು ಏಳು ಬೀಳುಗಳನ್ನು ದಿಲ್ ರಾಜು ಕಂಡಿದ್ದಾರೆ. ಕಳೆದ ತಿಂಗಳು ತೆಲಂಗಾಣ ಜನರ ಬಗ್ಗೆ ಆಡಿದ ಮಾತು ವಿವಾದವಾಗಿ ಕ್ಷಮೆ ಕೋರಬೇಕಾಯ್ತು, ಅದಾದ ಬಳಿಕ ಅವರು ಬಂಡವಾಳ ಹೂಡಿದ್ದ ‘ಗೇಮ್ ಚೇಂಜರ್’ ಸಿನಿಮಾ ಫ್ಲಾಪ್ ಆಯ್ತು, ಅವರದ್ದೇ ಮತ್ತೊಂದು ಸಿನಿಮಾ ‘ಸಂಕ್ರಾಂತಿಕಿ ವಸ್ತುನ್ನಾಮ್’ ಹಿಟ್ ಆಯ್ತು. ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಕೆಲಸ ಮಾಡಿದ ಕೆಲವರು ದಿಲ್ ರಾಜು ಮೇಲೆ ಕೇಸು ದಾಖಲಿಸಿದರು. ದಿಲ್ ರಾಜು, ಮೆಗಾ ಸ್ಟಾರ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದು ವಿವಾದವಾಯ್ತು ಇದೆಲ್ಲದರ ನಡುವೆ 14 ವರ್ಷದ ಹಿಂದಿನ ಸಿನಿಮಾ ಮೇಲೆ ಹೂಡಲಾಗಿದ್ದ ಪ್ರಕರಣದಲ್ಲಿ ದಿಲ್ ರಾಜುಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ದಿಲ್ ರಾಜು ನಿರ್ಮಾಣ ಮಾಡಿ ಪ್ರಭಾಸ್, ಕಾಜೊಲ್, ತಾಪ್ಸಿ ಪನ್ನು, ಪ್ರಕಾಶ್ ರೈ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ‘ಮಿಸ್ಟರ್ ಪರ್ಫೆಕ್ಟ್’ ಸಿನಿಮಾ 2011 ರಲ್ಲಿ ಬಿಡುಗಡೆ ಆಗಿತ್ತು. ದಶರದ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಆಗ ಸೂಪರ್ ಹಿಟ್ ಎನಿಸಿಕೊಂಡಿತ್ತು. ಸಿನಿಮಾದ ಹಾಡುಗಳು, ಕಾಮಿಡಿ, ಆಕ್ಷನ್ ಅನ್ನು ಜನ ಮೆಚ್ಚಿಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆ ಆಗಿ ಆರೇಳು ವರ್ಷದ ಬಳಿಕ ಅಂದರೆ 2017 ರಲ್ಲಿ ಸಿನಿಮಾದ ಮೇಲೆ ಕೃತಿ ಚೌರ್ಯದ ಆರೋಪ ಹೊರಿಸಲಾಯ್ತು.
ಮುಮ್ಮುಡಿ ಶಾಮಲಾ ದೇವಿ ಎಂಬುವರು ‘ಮಿಸ್ಟರ್ ಫರ್ಪೆಕ್ಟ್’ ಸಿನಿಮಾದ ವಿರುದ್ಧ ಕೃತಿಚೌರ್ಯದ ಆರೋಪ ಹೊರಿಸಿ ಸಿಟಿ ಸಿವಿಲ್ ಕೋರ್ಟ್ನಲ್ಲಿ 2017 ರಲ್ಲಿ ದೂರು ದಾಖಲಿಸಿದ್ದರು. ‘ಮಿಸ್ಟರ್ ಫರ್ಪೆಕ್ಟ್’ ಸಿನಿಮಾ ತಮ್ಮ ರಚನೆಯ ‘ನಾ ಮನಸು ನಿನ್ನು ಕೋರಿ’ ಕತೆ ಆಧರಿಸಿದ್ದಾಗಿದೆ. ತಮ್ಮ ಅನುಮತಿ ಪಡೆಯದೇ ಕತೆಯನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ್ದ ಸಿಟಿ ಸಿವಿಲ್ ಕೋರ್ಟ್ ಇತ್ತೀಚೆಗೆ ನಿರ್ಮಾಪಕ ದಿಲ್ ರಾಜು ವಿರುದ್ಧ ತೀರ್ಪು ನೀಡಿತ್ತು.
ಇದನ್ನೂ ಓದಿ:ತಂದೆ ಮೃತಪಟ್ಟ ನೋವಲ್ಲೂ ಸಹಾಯ ಮಾಡೋದು ಮರೆತಿರಲಿಲ್ಲ ಪ್ರಭಾಸ್
ಸಿಟಿ ಸಿವಿಲ್ ಕೋರ್ಟ್ನ ತೀರ್ಪಿನ ವಿರುದ್ಧ ದಿಲ್ ರಾಜು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಿಟಿ ಸಿವಿಲ್ ಕೋರ್ಟ್ ನೀಡಿರುವ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದು, ನಿರ್ಮಾಪಕ ದಿಲ್ ರಾಜು ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಪ್ರಭಾಸ್ ನಟಿಸಿದ್ದ ‘ಮಿಸ್ಟರ್ ಪರ್ಫೆಕ್ಟ್’ ಸಿನಿಮಾ ವಿದೇಶದಲ್ಲಿ ನೆಲೆಸಿರುವ ಭಾರತೀಯ ಯುವಕನ ಕತೆಯನ್ನು ಒಳಗೊಂಡಿದೆ. ಮದುವೆ, ಕುಟುಂಬ ಇನ್ನಿತರೆ ಕಟ್ಟುಪಾಡುಗಳಿಗೆ ಒಳಗಾಗಲು ಇಷ್ಟವಿಲ್ಲದ ವ್ಯಕ್ತಿಯೊಬ್ಬನೊನ್ನು, ಯುವತಿಯೊಬ್ಬಳು ಹೇಗೆ ಬದಲಾಯಿಸುತ್ತಾಳೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಹಾಗೂ ಕಾಜೊಲ್ ಇಬ್ಬರು ನಾಯಕಿಯರು. ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ