ದರ್ಶನ್ ಕೇಸ್: ಸಾಕ್ಷಿಗೆ ಬೆದರಿಕೆ ಹಾಕಿದ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ ಜತೆ ಪ್ರಭಾವಿ ಮಹಿಳೆ ನಂಟು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ವೇಣು, ಸುಹಾಸ್​ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಪುನೀತ್ ಜೊತೆ ಇನ್ನಿಬ್ಬರು ಆರೋಪಿಗಳಾದ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ ಸಂಪರ್ಕದಲ್ಲಿ ಇರುವುದು ದೃಢಪಟ್ಟಿದೆ. ಅಲ್ಲದೇ ಪ್ರಭಾವಿ ಮಹಿಳೆಯೊಬ್ಬರ ನಂಟು ಇರುವ ಶಂಕೆ ಕೂಡ ಮೂಡಿದೆ.

ದರ್ಶನ್ ಕೇಸ್: ಸಾಕ್ಷಿಗೆ ಬೆದರಿಕೆ ಹಾಕಿದ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ ಜತೆ ಪ್ರಭಾವಿ ಮಹಿಳೆ ನಂಟು
Darshan, Renukaswamy, Gaurav Shetty
Edited By:

Updated on: Aug 23, 2026 | 11:52 AM

ಪವಿತ್ರಾ ಗೌಡ, ದರ್ಶನ್ (Darshan) ಮುಂತಾದವರು ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸಾಕ್ಷಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಪುನೀತ್‌ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಆತನೊಂದಿಗೆ ಪ್ರಮುಖ ಆರೋಪಿಗಳಾದ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಸಂಪರ್ಕದಲ್ಲಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿದೆ. ಅಲ್ಲದೇ ಪ್ರಭಾವಿ ಮಹಿಳೆಯೊಬ್ಬರ ಕೈವಾಡ ಕೂಡ ಬೆಳಕಿಗೆ ಬರುತ್ತಿದೆ.

ಈಗಾಗಲೇ ಪೊಲೀಸರು ತನಿಖೆ ನಡೆಸಿ ಎಫ್‌ಎಸ್‌ಎಲ್ ವರದಿಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಗಳು ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆಗೆ ಸಂಚು ರೂಪಿಸಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಪುನೀತ್, ವೇಣು ಮತ್ತು ಸುಹಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಪುನೀತ್ ಅರೆಸ್ಟ್ ಆಗುತ್ತಿದ್ದಂತೆಯೇ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ.

ನೋಟಿಸ್‌ಗೂ ಸಿಗದ ಆರೋಪಿಗಳು:

ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೀಡಲು ಉದ್ದೇಶಿಸಿದ್ದ ನೋಟಿಸ್‌ಗಳನ್ನು ಸಹ ಸ್ವೀಕರಿಸದೆ ಗೌರವ್ ಮತ್ತು ಕಿರಣ್ ಪರಾರಿಯಾಗಿದ್ದಾರೆ. ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಕೈಗೆ ಸಿಗದಂತೆ ಅಡಗಿಕುಳಿತಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರಿಗಾಗಿ ಬಲೆ ಬೀಸಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಪ್ರಭಾವಿ ಮಹಿಳೆಯ ನಂಟು?

ಈ ಬೆಳವಣಿಗೆಯ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ತಲೆಮರೆಸಿಕೊಂಡಿರುವ ಗೌರವ್ ಶೆಟ್ಟಿ ಜೊತೆ ನಗರದ ಓರ್ವ ಪ್ರಭಾವಿ ಮಹಿಳೆ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಗೌರವ್ ಶೆಟ್ಟಿ ಬಂಧನವಾದರೆ ಈ ಪ್ರಭಾವಿ ಮಹಿಳೆಯ ಪಾತ್ರ ಹಾಗೂ ಆಕೆಯ ಹಿನ್ನೆಲೆ ಹೊರಬೀಳುವ ಸಾಧ್ಯತೆಯಿದ್ದು, ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ ಎಂದೇ ಹೇಳಲಾಗುತ್ತಿದೆ. ತನಿಖಾಧಿಕಾರಿಗಳು ಸದ್ಯ ಗೌರವ್ ಮತ್ತು ಕಿರಣ್ ಇರುವ ಸ್ಥಳದ ಸುಳಿವು ಆಧರಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ: ಜಡ್ಜ್ ಕೇಳಿದ ಪ್ರಶ್ನೆಗಳಿಗೆ ಪ್ರದೋಷ್ ನೀಡಿದ ಉತ್ತರ ಏನು?

ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ:

ಈಗಾಗಲೇ ತಿಳಿದಿರುವಂತೆ ಪ್ರಮುಖ ಆರೋಪಿ ಪ್ರದೋಷ್ ತಾನು ಮಾಫಿ ಸಾಕ್ಷಿ ಆಗುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಆಗಬಹುದಾ ಅಥವಾ ಇಲ್ಲವಾ ಎಂಬುದನ್ನು ನಿರ್ಧರಿಸಲು ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಸದ್ಯದಲ್ಲೇ ನಾಯಾಯಲಯದ ಆದೇಶ ಹೊರಬರಲಿದೆ. ಇದರಿಂದಾಗಿ ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳಿಗೆ ಢವಢವ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us