‘ಜೈಲರ್ 2’ ಸಿನಿಮಾ ಟ್ರೇಲರ್: ಭಾರಿ ನಿರೀಕ್ಷೆ ಇದ್ದರೂ ಜನರಿಂದ ಮಿಶ್ರ ಪ್ರತಿಕ್ರಿಯೆ
ಭಾರಿ ನಿರೀಕ್ಷೆ ಮೂಡಿಸಿರುವ ‘ಜೈಲರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೇಲರ್ ನೋಡಿದವರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಹೃತಿಕ್ ರೋಷನ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಬಹುತಾರಾಗಣ ಈ ಸಿನಿಮಾದಲ್ಲಿದೆ.

ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಟ್ರೇಲರ್ ಸೋಮವಾರ (ಅಕ್ಟೋಬರ್ 5) ಸಂಜೆ ಬಿಡುಗಡೆಯಾಗಿದೆ. 2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಟ್ರೇಲರ್‌ನಲ್ಲಿ ರಜನಿಕಾಂತ್ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಮಿಂಚಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. 2 ನಿಮಿಷಗಳ ಟ್ರೇಲರ್‌ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಅವರ ಹೊಸ ಜೀವನವನ್ನು ಪರಿಚಯಿಸಲಾಗಿದೆ.
ನಟ ಸುರಾಜ್ ವೆಂಜಾರಮೂಡು ಅವರ ಪಾತ್ರವು ಟೈಗರ್‌ಗಾಗಿ ಹುಡುಕಾಟ ನಡೆಸುವುದರೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಹಳೆಯ ಘಟನೆಗಳ ನಂತರ ಮಾಜಿ ಜೈಲರ್ ಮುತ್ತುವೇಲ್ ಪಾಂಡಿಯನ್ ಇದೀಗ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆತನ ಇತಿಹಾಸ ತಿಳಿಯದವರಿಂದ ಅವಮಾನ ಎದುರಿಸುತ್ತಿದ್ದಾನೆ. ಆದರೆ ಆತನನ್ನು ಮೂಲೆಗೆ ತಳ್ಳಿದಾಗ ತನ್ನ ಹಳೆಯ ರೌದ್ರಾವತಾರಕ್ಕೆ ಮರಳುವ ಸುಳಿವನ್ನು ಟ್ರೇಲರ್ ನೀಡುತ್ತದೆ.
ಬಾಲಿವುಡ್ ನಟಿ ವಿದ್ಯಾ ಬಾಲನ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಅವರ ಪಾತ್ರದ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಇನ್ನು ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ ಹಾಗೂ ವಿದ್ಯಾ ಬಾಲನ್ ಹೊಸ ವೈರಿಗಳಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್, ಮೋಹನ್‌ಲಾಲ್ ಹಾಗೂ ಜಾಕಿ ಶ್ರಾಫ್ ಅವರು ಹಳೆಯ ಸ್ನೇಹಿತನಿಗೆ ನೆರವಾಗಲು ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಕಾರು ತೊಳೆದು ನಿಲ್ಲಿಸುವ ರಜನಿಕಾಂತ್, ಸಾಲು ಸಾಲು ಹೆಣ ಬೀಳಿಸಿದರೂ ಏನೂ ತಿಳಿಯದಂತೆ ವರ್ತಿಸುವುದನ್ನು ನಟ ಯೋಗಿ ಬಾಬು ತಮಾಷೆಯಾಗಿ ಹೇಳುವುದರೊಂದಿಗೆ ಟ್ರೇಲರ್ ಮುಕ್ತಾಯಗೊಳ್ಳುತ್ತದೆ.
ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಅಭಿಮಾನಿಗಳು ನೆಲ್ಸನ್ ಅವರ ಡಾರ್ಕ್ ಕಾಮಿಡಿ ಮತ್ತು ಆಕ್ಷನ್ ದೃಶ್ಯಗಳನ್ನು ಹೊಗಳಿದ್ದರೆ, ಇನ್ನು ಕೆಲವರು ಮೊದಲ ಭಾಗ ನೀಡಿದ್ದ ರೂಚಕತೆ ಈ ಟ್ರೇಲರ್‌ನಲ್ಲಿ ಕಾಣಿಸುತ್ತಿಲ್ಲ ಎಂದಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತದ ಮೇಲೆ ಹಲವರು ನಿರೀಕ್ಷೆ ಇಟ್ಟಿದ್ದಾರೆ.
ಇದನ್ನೂ ಓದಿ: ಯಾರ ಬಳಿಯೂ ಆಟೋಗ್ರಾಫ್ ಕೇಳದ ರಜನಿಕಾಂತ್ ಪಡೆದಿದ್ದು ಕನ್ನಡ ಈ ನಟನ ಸಹಿ ಮಾತ್ರ
ಇದೇ ವೇಳೆ ಟ್ರೇಲರ್‌ನಲ್ಲಿ ಕಂಡ ಸಣ್ಣ ಝಲಕ್ ಆಧರಿಸಿ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ‘ಸನ್ ಪಿಕ್ಚರ್ಸ್’ ನಿರ್ಮಾಣದ ‘ಜೈಲರ್ 2’ ಸಿನಿಮಾವು ಅಕ್ಟೋಬರ್ 15ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:45 pm, Mon, 5 October 26




