ಜೈಲಲ್ಲಿ ಕೂತು ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್: ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸಾಕಷ್ಟು ಹೊಸ ವಿಷಯಗಳು ಹೊರ ಬೀಳುತ್ತಿವೆ. ಜೊತೆಗೆ ಹಲವು ಆರೋಪ-ಪ್ರತ್ಯಾರೋಪಗಳು ಸಹ ನಡೆಯುತ್ತಿವೆ. ಇದೀಗ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಅವರು ಮಾಫಿ ಸಾಕ್ಷಿ ಆಗಿ ಬದಲಾಗಿರುವ ಪ್ರದೋಶ್ ವಿರುದ್ಧ ಬಲು ಗಂಭೀರವಾದ ಆರೋಪ ಮಾಡಿದ್ದಾರೆ. ಪ್ರದೋಶ್​​ ಸ್ವಯಂಪ್ರೇರಿತವಾಗಿ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ ಎಂದಿದ್ದಾರೆ.

ಜೈಲಲ್ಲಿ ಕೂತು ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್: ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ
Pradosh Darshan

Updated on: Sep 16, 2026 | 3:15 PM

ಮುಖ್ಯಾಂಶಗಳು

  • ರೇಣುಕಾ ಸ್ವಾಮಿ ಪ್ರಕರಣದ ವಿಚಾರಣೆ
  • ಪ್ರದೋಶ್ ವಿರುದ್ಧ ದರ್ಶನ್ ಪರ ವಕೀಲರ ಗಂಭೀರ ಆರೋಪ
  • ಜೀಲಿನಿಂದಲೇ ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಹತ್ತು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಲೇ ಸಾಗುತ್ತಿದೆ. ಸಾಕ್ಷಿಗೆ ಬೆದರಿಕೆ, ತಿರುಚಿದ ಸಾಕ್ಷ್ಯಗಳ ಆರೋಪಗಳು ಕೇಳಿ ಬಂದವು. ಕೆಲವರನ್ನು ಬಂಧಿಸಲಾಗಿತ್ತು. ಆ ಬಳಿಕ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಪ್ರದೋಶ್ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ದರ್ಶನ್ ಆಕ್ಷೇಪ ಎತ್ತಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ದರ್ಶನ್ ಪರ ವಕೀಲರು ಪ್ರದೋಶ್ ಮೇಲೆ ಗಂಭೀರ ಆರೋಪ ಮಾಡಿದ್ದು, ಪ್ರದೋಶ್, ಪೊಲೀಸರಿಂದ ಸಹಾಯ ಪಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, ಪ್ರದೋಶ್, ಪೊಲೀಸರ ಆಮಿಷಕ್ಕೆ ಒಳಗಾಗಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಪೊಲೀಸರಿಂದ ಹಲವು ಅನುಕೂಲಗಳನ್ನು ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರದೋಶ್, ಜೈಲಿನಲ್ಲಿದ್ದುಕೊಂಡೆ ಬೇರೆಯವರಿಗೆ ಸೇರಿದ ಮೊಬೈಲ್ ಫೋನ್ ಬಳಸಿದ್ದಾನೆ, ಪ್ರದೋಷ್ ಜುಲೈ 27ರಿಂದಲೂ ಹೊರಗಿನವರ ಜೊತೆಗೆ ಮಾತನಾಡುತ್ತಿದ್ದಾನೆ. ಪ್ರದೋಶ್ ತನ್ನ ಪತ್ನಿಯೊಟ್ಟಿಗೆ ಸತತ ಸಂಪರ್ಕದಲ್ಲಿದ್ದು, ಯಾರನ್ನು, ಎಲ್ಲಿ ಭೇಟಿಯಾಗಬೇಕೆಂದು ಪತ್ನಿಗೆ ತಿಳಿಸುತ್ತಿದ್ದಾನೆ. ಮಾಫಿ ಸಾಕ್ಷಿಯಾಗುವ ಮೂಲಕ ಅನುಕೂಲ ಪಡೆಯಲು ಯತ್ನಿಸುತ್ತಿದ್ದಾನೆ, ಜೈಲಿನ ನಿಯಮಾವಳಿಗಳನ್ನು ಪ್ರದೋಷ್ ಉಲ್ಲಂಘಿಸಿದ್ದಾನೆ, ಜೈಲು ಸಿಬ್ಬಂದಿ ಮೌನೇಶ್ ಕೂಡಾ ಇದರಲ್ಲಿ ಶಾಮೀಲಾಗಿದ್ದಾನೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.

ಪ್ರದೋಶ್ ಮಾಫಿ ಸಾಕ್ಷಿ ಅರ್ಜಿಯನ್ನು ಸಹ ಸ್ವಯಂಪ್ರೇರಣೆಯಿಂದ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಬಿಡುಗಡೆಯಾದ ಕೈದಿಯ ರೀತಿಯ ಸವಲತ್ತುಗಳನ್ನು ಪಡೆಯುತ್ತಿದ್ದಾನೆ. ಹಲವಾರು ಬಾರಿ ಫೋನಿನ ಮೂಲಕ ಮಾತನಾಡಿದ್ದಾನೆ. ಪ್ರದೋಶ್ ಸೂಚನೆಯಂತೆ ಆತನ ಪತ್ನಿ ಪ್ರಾಸಿಕ್ಯೂಷನ್​​ಗೆ ಸಂಬಂಧಿಸಿದವರ ಜೊತೆಗೂ ಮಾತನಾಡಿದ್ದಾರೆ. ಎಸ್‌ಪಿಪಿ ಕೂಡ ಈ ಬಗ್ಗೆ ಜೈಲು ಅಧಿಕಾರಿಗಳ ವರದಿ ಪಡೆಯಬೇಕು, ಈ ಬಗ್ಗೆ ತನಿಖೆ ಆದ ಬಳಿಕ ಪ್ರದೋಷ್, ಮಾಫಿ ಸಾಕ್ಷಿ ಬಗ್ಗೆ ತೀರ್ಮಾನಿಸಲಿ, ಮಾಫಿ ಸಾಕ್ಷಿಯ ಕೆಟ್ಟ ನಡವಳಿಕೆ ಪರಿಗಣಿಸಬೇಕಾದ ಅಂಶ ಎಂದು ಹಮ್ಷತ್ ಪಾಷಾ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿ ಪವನ್ ವಕೀಲರಿಗೆ ದಂಡ

ದರ್ಶನ್ ಪರ ವಕೀಲರ ವಾದ ಅಲ್ಲಗಳೆದ ಪ್ರದೋಶ್ ಪರ ವಕೀಲರ ದಿವಾಕರ್, ‘ಅವಶ್ಯಕತೆ ಬಿದ್ದರೆ ಕೋರ್ಟ್ ಪ್ರದೋಷ್​​ನನ್ನು ಪ್ರಶ್ನಿಸಬಹುದು, ದರ್ಶನ್ ವಕೀಲರು ಪ್ರದೋಷ್ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ದರ್ಶನ್ ಒಳ್ಳೆಯವನೆಂಬಂತೆ ಬಿಂಬಿಸಲು ಪ್ರದೋಷ್​ನನ್ನು ದೂಷಿಸುವುದು ಬೇಡ’ ಎಂದಿದ್ದಾರೆ.

ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಬಳಿ ಮನವಿ ಮಾಡಿದ ಪ್ರದೋಶ್, ‘ಮಹಾಸ್ವಾಮಿ ನನಗೆ ಐಡಿ ಮಾಡಿಕೊಟ್ಟಿರುವುದೇ ಜೈಲು ಅಧಿಕಾರಿಗಳು, ಅವರೇ ಕೊಟ್ಟ ಐಡಿಯನ್ನು ನಾನು ಬಳಸಿದ್ದೇನೆ, ನನಗೆ ಸಿಸ್ಟಮ್ ಆಕ್ಸೆಸ್ ಇಲ್ಲ, ನಾನು ಯಾವುದೇ ಮೊಬೈಲ್ ಫೋನ್ ಬಳಸಿಲ್ಲ, ಆದರೆ ನನಗೆ ಮಾತ್ರ ತೊಂದರೆ ಕೊಡುತ್ತಿದ್ದಾರೆ, ನನಗೆ ಮಾತ್ರ 1 ತಿಂಗಳು ಕುಟುಂಬದೊಂದಿಗೆ ಮಾತನಾಡುವಂತಿಲ್ಲ, ಲಾಕ್ ಅಲ್ಲೇ ಇರಬೇಕೆಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದಿದ್ದಾರೆ. ಮುಂದಿನ ವಿಚಾರಣೆ ಇಂದೇ ನಾಲ್ಕು ಗಂಟೆ ಮೇಲೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us