ತಂದೆ ಬರ್ತ್ಡೇಗೆ ಹೊಸ ಬ್ಯಾಡ್ಮಿಂಟನ್ ಸ್ಕೂಲ್ ಆರಂಭಿಸಿದ ನಟಿ ದೀಪಿಕಾ ಪಡುಕೋಣೆ
Deepika Padukone: ದೀಪಿಕಾ ಪಡುಕೋಣೆ ಅವರು ತಮ್ಮ ತಂದೆ ಪ್ರಕಾಶ್ ಪಡುಕೋಣೆ ಅವರ ಜನ್ಮದಿನದಂದು (ಜೂನ್ 10) ‘ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ. ಇದು ದೇಶಾದ್ಯಂತ 75 ಕೇಂದ್ರಗಳನ್ನು ಹೊಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯುವ ಯೋಜನೆಯಿದೆ.

ನಟಿ ದೀಪಿಕಾ ಪಡುಕೋಣೆ ಅವರು ನಟನೆಯ ಜೊತೆಗೆ ಬ್ಯಾಡ್ಮಿಂಟನ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ತಂದೆ. ಪ್ರಕಾಶ್ ಪಡುಕೋಣೆ (Prakash Padukone) ಖ್ಯಾತ ಬ್ಯಾಡ್ಮಿಂಟನ್ ಆಟಗಾರ. ಇಂದು (ಜೂನ್ 10) ದೀಪಿಕಾ ತಂದೆ ಪ್ರಕಾಶ್ ಪಡುಕೋಣೆಗೆ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಹೊಸ ಬ್ಯಾಡ್ಮಿಂಟನ್ ಸ್ಕೂಲ್ನ ಲಾಂಚ್ ಮಾಡಿದ್ದಾರೆ. ಈ ಮೂಲಕ ತಂದೆಗೆ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
ದೀಪಿಕಾ ಅವರು ‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ ಹೊಸ ಕೇಂದ್ರವನ್ನು ಮಂಗಳವಾರ ಆರಂಭಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ‘ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳು ನಾನು. ಈ ಕ್ರೀಡೆ ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದು ನನಗೆ ಗೊತ್ತು. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಮೂಲಕ ನಾವು ಬ್ಯಾಡ್ಮಿಂಟನ್ ಆಟದ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಜನರಿಗೆ ತಲುಪಿಸಲು ಬಯಸಿದ್ದೇವೆ’ ಎಂದಿದ್ದಾರೆ ಅವರು.
‘ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹ ಎಷ್ಟು ಎಂಬುದು ನಿಮ್ಮನ್ನು ಚೆನ್ನಾಗಿ ಬಲ್ಲವರಿಗೆ ಗೊತ್ತು. 70 ವರ್ಷ ವಯಸ್ಸಿನಲ್ಲೂ ಬ್ಯಾಡ್ಮಿಂಟನ್ನ ಉಸಿರಾಡುತ್ತಿದ್ದೀರಿ. ನಿಮ್ಮ ಉತ್ಸಾಹವನ್ನು ನನಸಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗೂ ಬ್ಯಾಡ್ಮಿಂಟನ್’ ಎಂದು ಬರ್ತ್ಡೇ ಪೋಸ್ಟ್ನಲ್ಲಿ ದೀಪಿಕಾ ತಿಳಿಸಿದ್ದಾರೆ. ರಣವೀರ್ ಸಿಂಗ್ ಅವರು ಈ ಪೋಸ್ಟ್ಗೆ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ.
‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ ಬೆಂಗಳೂರು, ಮೈಸೂರು, ಮುಂಬೈ, ಚೆನ್ನೈ ಸೇರಿದಂತೆ ದೇಶದ 18 ನಗರಗಳಲ್ಲಿ ಒಟ್ಟೂ 75 ಕೇಂದ್ರಗಳನ್ನು ಹೊಂದಿದೆ. ಈ ವರ್ಷದ ಕೊನೆಯಲ್ಲಿ 100 ಕೇಂದ್ರ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಒಟ್ಟೂ 250 ಕೇಂದ್ರವನ್ನು ಆರಂಭಿಸುವ ಉದ್ದೇಶ ಇವರಿಗೆ ಇದೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಬಗ್ಗೆ ಹೆಚ್ಚಾಯ್ತು ಅಪಪ್ರಚಾರ; ‘ಕಲ್ಕಿ 2’ ಸಿನಿಮಾದಿಂದಲೂ ಔಟ್?
ದೀಪಿಕಾ ಪಡುಕೋಣೆ ಅವರು ಶೀಘ್ರವೇ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಒಟ್ಟಾಗಿ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಸದ್ಯ ದೀಪಿಕಾ ಅವರು 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಇದರ ಮಧ್ಯೆಯೂ ಅವರಿಗೆ ಕೆಲವರು ಸಿನಿಮಾ ಆಫರ್ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.