‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಬಂದಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಡುವೆ ಕಿರಿಕ್ ಆದ ಬಗ್ಗೆ ಸುದ್ದಿಯಾಗಿತ್ತು. ದೀಪಿಕಾ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರನಡೆದ ಬಳಿಕ ಅನೇಕ ಬಗೆಯ ಚರ್ಚೆ ಶುರುವಾಗಿತ್ತು. ಅವರ ನಿರ್ಧಾರಕ್ಕೆ ನಿಜವಾದ ಕಾರಣ ಏನು ಎಂಬುದು ಈಗ ತಿಳಿದುಬಂದಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga) ಅವರು ಸ್ಟಾರ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ಯಶಸ್ಸಿನಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಪ್ರಭಾಸ್ ಜೊತೆ ‘ಸ್ಪಿರಿಟ್’ ಸಿನಿಮಾ (Spirit Movie) ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ (Deepika Padukone) ನಾಯಕಿ ಆಗಬೇಕಿತ್ತು. ಆದರೆ ಅವರು ಚಿತ್ರತಂಡದಿಂದ ಹೊರಬಂದರು. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಈಗಾಗಲೇ ಹಲವು ಅಂತೆ-ಕಂತೆಗಳು ಹೊರಬಂದಿವೆ. ಆದರೆ ಈಗ ಅಸಲಿ ಕಾರಣ ಬಹಿರಂಗ ಆಗಿದೆ.
ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಸಿನಿಮಾದ ಕಥೆ ಕೇಳಿ ಇಷ್ಟಪಟ್ಟಿದ್ದು ನಿಜ. ಇನ್ನೇನು ಒಪ್ಪಂದ ಕೂಡ ಆಗಬೇಕಿತ್ತು. ಬಳಿಕ ಅವರಿಗೆ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾದಿಂದ ಆಫರ್ ಬಂತು. ಆ ಕಥೆ ಮತ್ತು ಪಾತ್ರ ಅವರಿಗೆ ತುಂಬಾ ಇಷ್ಟ ಆಯಿತು. ಒಂದೇ ಸಮಯಕ್ಕೆ ಎರಡೂ ಸಿನಿಮಾವನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರು ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಯಿತು.
ಈ ಕಾರಣದಿಂದಾಗಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಜೊತೆಗಿನ ಸಿನಿಮಾವನ್ನು ಬಿಟ್ಟು ಅಲ್ಲು ಅರ್ಜುನ್ ಜೊತೆಗಿನ ಸಿನಿಮಾವನ್ನು ಆಯ್ಕೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಮಾಡಿದ್ದರು. ಆದರೆ ಅಲ್ಲು ಅರ್ಜುನ್ ಜೊತೆ ಇದು ಅವರಿಗೆ ಮೊದಲ ಅವಕಾಶ. ಅವರ ನಿರ್ಧಾರಕ್ಕೆ ಇದು ಕೂಡ ಪ್ರಮುಖ ಕಾರಣ ಎನ್ನಲಾಗಿದೆ.
ಈ ಸತ್ಯ ಗೊತ್ತಾಗುವುದಕ್ಕೂ ಮುನ್ನ ಹಲವು ಗಾಸಿಪ್ಗಳು ಹರಿದಾಡಿದವು. ದೀಪಿಕಾ ಪಡುಕೋಣೆ ಅವರು ದಿನಕ್ಕೆ ಕೇವಲ 8 ಗಂಟೆ ಮಾತ್ರ ಶೂಟಿಂಗ್ ಮಾಡಬೇಕು ಎಂದು ಷರತ್ತು ಹಾಕಿದರು. ಅವರು ಕಥೆ ಲೀಕ್ ಮಾಡಿದರು ಎಂಬಿತ್ಯಾದಿ ಗಾಸಿಪ್ ಕೇಳಿಬಂದವು. ಆದರೆ ಈಗ ಪ್ರಾಕ್ಟಿಕಲ್ ಕಾರಣ ಏನು ಎಂಬುದು ಗೊತ್ತಾಗಿದೆ. ದೀಪಿಕಾ ಹೊರನಡೆದ ಬಳಿಕ ‘ಸ್ಪಿರಿಟ್’ ಸಿನಿಮಾಗೆ ತೃಪ್ತಿ ದಿಮ್ರಿ ಅವರು ನಾಯಕಿ ಆದರು.
ಇದನ್ನೂ ಓದಿ: ಅಂದುಕೊಂಡಂತೆ ನಡೆದಿದ್ದರೆ ಮಲ್ಯ ಸೊಸೆ ಆಗಿರುತ್ತಿದ್ದರು ದೀಪಿಕಾ; ಕೊನೆಗೆ ಆಗಿದ್ದೇನು?
ದೀಪಿಕಾ ಪಡುಕೋಣೆ ಅವರ ನಿರ್ಧಾರದ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ. ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್ನ ಸಿನಿಮಾ ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಹೀರೋಯಿನ್ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಸಿನಿಮಾಗೆ ಹೇಗೆ ತಯಾರಿ ನಡೆಯತ್ತಿದೆ ಎಂಬುದರ ಝಲಕ್ ತೋರಿಸಲು ವಿಡಿಯೋ ರಿಲೀಸ್ ಮಾಡಲಾಗಿದೆ. ಅದನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








