ಹೀರೋ ಅಂದಮೇಲೆ ಅಲ್ಲೊಂದು ಹೀರೋಯಿನ್ ಇರಲೇ ಬೇಕು. ಈ ನಿಯಮ ಬಹುತೇಕ ಸಿನಿಮಾಗಳಲ್ಲಿ ಬಳಕೆ ಆಗುತ್ತದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾ ಎಂದಾಗ ಹೀರೋಯಿನ್ ಆಯ್ಕೆ ವೇಳೆ ಗ್ಲಾಮರ್ಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ತಲೆಕೆಡಿಸಿಕೊಳ್ಳುತ್ತಾರೆ. ಈಗ ಜ್ಯೂ.ಎನ್‌ಟಿಆರ್ (Jr. NTR) ಮುಂದಿನ ಚಿತ್ರಕ್ಕೆ (Jr. NTR 30) ನಾಯಕಿ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಜನಪ್ರಿಯರ ಹೀರೋಯಿನ್ಗಳ ಹೆಸರು ಕೇಳಿ ಬರುತ್ತಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಪಾತ್ರ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಅವರ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಸಿನಿಮಾ ಮತ್ತು ಅವರ ಪಾತ್ರ ರೀಚ್ ಆಗಿತ್ತು. ಆದರೆ, ಜ್ಯೂ.ಎನ್ಟಿಆರ್ಗೆ ಜತೆಯಾಗಿ ಯಾವ ಹೀರೋಯಿನ್ ಕೂಡ ಕಾಣಿಸಿಕೊಂಡಿರಲಿಲ್ಲ. ಇದು ಅವರ ಫ್ಯಾನ್ಸ್ಗೆ ಸ್ವಲ್ಪ ಬೇಸರ ತರಿಸಿದ್ದಂತೂ ನಿಜ. ಈ ಕಾರಣಕ್ಕೆ, ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಯಾರು ನಾಯಕಿ ಆಗಬಹುದು ಎನ್ನುವ ಚರ್ಚೆ ಜೋರಾಗಿದೆ.
ಆಲಿಯಾ ಭಟ್ ಅಥವಾ ಶ್ರದ್ಧಾ ಕಪೂರ್ ಇಬ್ಬರಲ್ಲಿ ಒಬ್ಬರು ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎಂದು ವರದಿ ಆಗಿತ್ತು. ಇಬ್ಬರೂ ಈಗಾಗಲೇ ದಕ್ಷಿಣದಲ್ಲಿ ಹೆಸರು ಮಾಡಿದ್ದಾರೆ. ‘ಸಾಹೋ’ ಮೂಲಕ ಶ್ರದ್ಧಾ ತೆಲುಗಿಗೆ ಕಾಲಿಟ್ಟರೆ, ‘ಆರ್ಆರ್ಆರ್’ ಮೂಲಕ ಆಲಿಯಾ ದಕ್ಷಿಣದತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸೋಕೆ ಇಬ್ಬರೂ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದೀಪಿಕಾ ಪಡುಕೋಣೆ ಹಾಗೂ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಇಬ್ಬರಲ್ಲಿ ಒಬ್ಬರು ಜ್ಯೂ.ಎನ್ಟಿಆರ್ಗೆ ಜೊತೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫಸ್ಟ್ ಲುಕ್ ಬಗ್ಗೆ ಹೊರಬಿತ್ತು ಅಚ್ಚರಿಯ ವಿಚಾರ; ಪ್ರಶಾಂತ್ ನೀಲ್ ಹೀಗೆ ಮಾಡಿದ್ದೇಕೆ?
ದೀಪಿಕಾಗೆ ದೇಶ ಮಟ್ಟದಲ್ಲಿ ಖ್ಯಾತಿ ಇದೆ. ಅವರು ನಟನೆ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈಗಾಗಲೇ ಪ್ರಭಾಸ್ ಜತೆ ಅವರು ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತಕ್ಕೆ ಅವರ ಕಂಬ್ಯಾಕ್ ಆಗುತ್ತಿದೆ. ಈ ಮಧ್ಯೆ ಅವರಿಗೆ ಜ್ಯೂ.ಎನ್‌ಟಿಆರ್ ಸಿನಿಮಾದ ಆಫರ್ ಹೋಗಿದೆ ಎಂದು ವರದಿ ಆಗಿದೆ. ಸಾಯಿ ಪಲ್ಲವಿ ಅವರು ನ್ಯಾಚುರಲ್ ಬ್ಯೂಟಿ ಎಂದೇ ಫೇಮಸ್ ಆದವರು. ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯೂ ನಿರ್ದೇಶಕರಿಗೆ ಇದೆ ಎನ್ನಲಾಗುತ್ತಿದೆ. ಅಂತಿಮವಾಗಿ ಯಾರು ಫೈನಲ್ ಆಗಲಿದ್ದಾರೆ ಅನ್ನೋದು ಸದ್ಯದಲ್ಲೇ ತಿಳಿಯಲಿದೆ.
ಇತ್ತೀಚೆಗೆ ‘ಜ್ಯೂ.ಎನ್‌ಟಿಆರ್ 30’ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಯಾವ ಕಥೆಯನ್ನು ಹೊಂದಿರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.