ನಿಮ್ಮ ನಗು ನೋಡಿದರೆ ಅವರಿಬ್ಬರ ನೆನಪಾಗುತ್ತೆ: ಶಿವಣ್ಣನ ಕೊಂಡಾಡಿದ ಧನುಶ್
Shiva Rajkumar: ಶಿವರಾಜ್ ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ ಶಿವಣ್ಣನನ್ನು ನಟ ಧನುಶ್ ಕೊಂಡಾಡಿದ್ದಾರೆ.
‘ಜೈಲರ್’ (Jailer) ಸಿನಿಮಾ ಮೂಲಕ ತಮಿಳು ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿರುವ ಶಿವರಾಜ್ ಕುಮಾರ್ ಇದೀಗ ತಮ್ಮ ಎರಡನೇ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲಿ ರಜನೀಕಾಂತ್ ಜೊತೆ ನಟಿಸಿದ್ದರೆ, ಎರಡನೇ ಸಿನಿಮಾದಲ್ಲಿ ಅವರ ಮಾಜಿ ಅಳಿಯ ಧನುಶ್ ಜೊತೆ ನಟಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ನಿನ್ನೆ (ಜನವರಿ 03) ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ನಟ ಧನುಶ್, ಶಿವಣ್ಣನನ್ನು ಕೊಂಡಾಡಿದ್ದಾರೆ.
ಶಿವರಾಜ್ ಕುಮಾರ್ ಅವರನ್ನು ಸರ್ ಎಂದು ಸಂಭೋಧಿಸಿದ ಧನುಶ್, ‘‘ಜೈಲರ್’ ಸಿನಿಮಾದ ನೀವು ನಡೆದು ಬರುವ ಸ್ಟೈಲ್ ಅದ್ಭುತ, ಆ ಸಿನಿಮಾ ಮೂಲಕ ನೀವು ತಮಿಳು ಸಿನಿಮಾ ಪ್ರೇಕ್ಷಕರ ಎದೆಯೊಳಗೆ ಬಂದು ಬಿಟ್ಟಿದ್ದೀರಿ. ನಿಮ್ಮ ನಗುವಿನಲ್ಲಿ ನಿಮ್ಮ ತಂದೆ ಡಾ ರಾಜ್ಕುಮಾರ್ ಹಾಗೂ ನಿಮ್ಮ ತಮ್ಮ ಪುನೀತ್ ರಾಜ್ಕುಮಾರ್ ಇಬ್ಬರೂ ಕಾಣುತ್ತಾರೆ. ತಂದೆಯ ಹೆಸರನ್ನು ಹೇಗೆ ಕಾಪಾಡಬೇಕು ಎಂಬುದನ್ನು ನೀವೇ ಅತ್ಯುತ್ತಮ ಉದಾಹರಣೆ. ಈ ಕಾರ್ಯಕ್ರಮಕ್ಕೆ ನನ್ನ ಮಕ್ಕಳು ಸಹ ಬಂದಿದ್ದಾರೆ. ನಿಮ್ಮಿಂದ ಅವರು ಅದನ್ನು ಕಲಿತುಕೊಳ್ಳಲಿ ಎಂಬುದು ನನ್ನ ಬಯಕೆ’’ ಎಂದಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ನಟನೆಯ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿ
ಸಿನಿಮಾದ ನಿರ್ದೇಶಕ ಅರುನ್ ಮಟ್ಟೇಶ್ವರನ್ ಬಗ್ಗೆ ಮಾತನಾಡಿ, ‘ಅವರನ್ನು ಮೊದಲು ನೋಡಿದಾಗ ಇವರು ನಿರ್ದೇಶಕರಾ ಎನಿಸಿತ್ತು. ನನ್ನನ್ನು ಭೇಟಿಯಾಗಿ ಕೇವಲ 15 ನಿಮಿಷ ಕತೆ ಹೇಳಿದರು. ದೊಡ್ಡ ಮಟ್ಟದಲ್ಲಿ ಮಾಡಬೇಕಾದ ಸಿನಿಮಾ ಆಗುತ್ತದೆಯಾ? ಎಂದು ಕೇಳಿದೆ. ಸುಮ್ಮನೆ ತಲೆ ಅಷ್ಟೆ ಅಲ್ಲಾಡಿಸಿದರು. ಈಗ ಸಿನಿಮಾ ನೋಡಿದಾಗ ಅವರು ಏನು ಹೇಳಿದ್ದರೋ ಅದನ್ನು ಮಾಡಿದ್ದಾರೆ ಅನಿಸಿತು. ‘‘ಅರುನ್ ಅನ್ನು ನೋಡಿದಾಗ ನನಗೆ ವೆಟ್ರಿಮಾರನ್ ನೆನಪು ಬರುತ್ತಾರೆ’’ ಎಂದರು.
‘‘ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ನೀನು ರಾಕ್ಷಸ ಎಂದುಕೊಂಡರೆ ರಾಕ್ಷಸ, ದೇವತೆ ಎಂದುಕೊಂಡರೆ ದೇವತೆ ಇದೇ ರೀತಿಯ ಪಾತ್ರ ಮತ್ತು ಕತೆ ಈ ಸಿನಿಮಾದ್ದು, ಸಿನಿಮಾದ ಕೊನೆಯ ಮೂವತ್ತು ನಿಮಿಷವಂತೂ ಅತ್ಯದ್ಭುತವಾಗಿ ಮೂಡಿಬಂದಿದೆ. ಎಲ್ಲರೂ ಅದನ್ನು ನೋಡಿ ಆಸ್ವಾದಿಸಬೇಕು ಎಂಬುದು ನನ್ನ ಬಯಕೆ’’ ಎಂದರು ಧನುಶ್.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಶ್, ಶಿವರಾಜ್ ಕುಮಾರ್ ಜೊತೆಗೆ ಪ್ರಿಯಾಂಕಾ ಅರುಲ್ ಮೋಹನ್, ಸಂದೀಪ್ ಕೃಷ್ಣ, ಜಾನ್ ಕೊಕ್ಕೇನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 12ಕ್ಕೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ