ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿರುವ ‘ಧುರಂಧರ್’, ಮಂಕಾದ ‘ಅವತಾರ್’
Dhurandhar and Avatara Fire and Ash collection: ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ದಿನದಿಂದ ದಿನಕ್ಕೆ ಕಲೆಕ್ಷನ್ ಅನ್ನು ಹೆಚ್ಚಿಸಿಕೊಂಡೇ ಸಾಗುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ನಿರೀಕ್ಷಿಸಿದಷ್ಟು ದೊಡ್ಡ ಮೊತ್ತದ ಗಳಿಕೆಯನ್ನು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮಾಡುತ್ತಿಲ್ಲ.
ಕೆಲವು ಸಿನಿಮಾಗಳು (Cinema) ಹಾಗೆಯೇ ಆರಂಭ ಸಾಮಾನ್ಯವಾಗಿರುತ್ತದೆ ಆದರೆ ದಿನಗಳು ಕಳೆದಂತೆ ಕಲೆಕ್ಷನ್ ಡಬಲ್, ತ್ರಿಬಲ್ ಆಗುತ್ತಾ ಸಾಗುತ್ತದೆ. ಕನ್ನಡದ ‘ಸು ಫ್ರಂ ಸೋ’ ಸಿನಿಮಾ ಹೀಗೆಯೇ ಆಗಿತ್ತು, ಲಕ್ಷಗಳಲ್ಲಿ ಪ್ರಾರಂಭವಾಗಿದ್ದ ದಿನದ ಗಳಿಕೆ, ಬಳಿಕ ಕೋಟಿ, ಹತ್ತು ಕೋಟಿ ಹೀಗೆ ಏರಿಕೆ ಆಗಿತ್ತು. ಇದೀಗ ಹಿಂದಿ ಸಿನಿಮಾ ‘ಧುರಂದರ್’ ಸಹ ಹೀಗೆಯೇ ಆಗಿದೆ. ಸಾಮಾನ್ಯ ಓಪನಿಂಗ್ ಕಂಡ ಈ ಸಿನಿಮಾ ಆ ನಂತರದ ದಿನಗಳಲ್ಲಿ ಕಲೆಕ್ಷನ್ ಅನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದೆ. ಈಗ ದಿನದಿಂದ ದಿನಕ್ಕೆ ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ಆದರೆ ಎರಡು ದಿನದ ಹಿಂದಷ್ಟೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಂಕಾಗಿದೆ.
ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ 17 ದಿನಗಳಾಗಿದ್ದು, ಸಿನಿಮಾ ಬಿಡುಗಡೆ ಆದ ಮೂರು ವಾರಗಳು ಕಳೆಯುವ ಮುಂಚೆಯೇ ಭಾರತದಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಆರಂಭದಲ್ಲಿ ದಿನಕ್ಕೆ 8 ಕೋಟಿ 10 ಕೋಟಿ ಗಳಿಸುತ್ತಿದ್ದ ಈ ಸಿನಿಮಾ ಈಗ ಕಲೆಕ್ಷನ್ ಅನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದ್ದು 17ನೇ ದಿನ ಅಂದರೆ ಶನಿವಾರದಂದು ಬಾಕ್ಸ್ ಆಫೀಸ್ನಲ್ಲಿ 34 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಭಾರತದಲ್ಲೇ 500 ಕೋಟಿ ರೂ. ದಾಟಿದ ಧುರಂಧರ್ ಕಲೆಕ್ಷನ್: ಮುಂದಿನ ಟಾರ್ಗೆಟ್ ಏನು?
‘ಧುರಂಧರ್’ ಸಿನಿಮಾದ ಭಾರತದ ಕಲೆಕ್ಷನ್ ಈ ವರೆಗೆ (17 ದಿನಗಳಲ್ಲಿ) 548 ಕೋಟಿ ರೂಪಾಯಿಗಳಾಗಿದೆ. ಮೊದಲ ವಾರದಲ್ಲಿ 207 ಕೋಟಿ ಗಳಿಕೆ ಮಾಡಿದ್ದ ಈ ಸಿನಿಮಾ, ಎರಡನೇ ವಾರ 253 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಮೂರನೇ ವಾರ 300 ಕೋಟಿ ಗಳಿಸುವ ನಿರೀಕ್ಷೆ ಇದೆ. ‘ಧುರಂಧರ್’ ಸಿನಿಮಾ, ಭಾರತೀಯ ಸೈನಿಕನೋರ್ವ ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುವ ಕತೆಯನ್ನು ಒಳಗೊಂಡಿದೆ. ಈ ಸಿನಿಮಾ ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಮಾಡಲಾದ ಸಿನಿಮಾ ಆಗಿದೆ. ಸಿನಿಮಾದ ಹಾಡುಗಳು, ಸಿನಿಮಾದಲ್ಲಿ ನಟನೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.
ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಶುಕ್ರವಾರವಷ್ಟೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆ ಆಗಿದೆ. ಇದು ‘ಅವತಾರ್’ ಸರಣಿಯ ಮೂರನೇ ಸಿನಿಮಾ ಆಗಿದ್ದು, ಈ ಮುಂಚಿನ ಎರಡು ‘ಅವತಾರ್’ ಸಿನಿಮಾಗಳು ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಆದರೆ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ನಿರೀಕ್ಷಿಸಿದಷ್ಟು ಗಳಿಕೆ ಮಾಡುತ್ತಿಲ್ಲ. ಮೊದಲ ದಿನ ಅಂದರೆ ಶುಕ್ರವಾರ ಈ ಸಿನಿಮಾ ಭಾರತದಲ್ಲಿ 19 ಕೋಟಿ ಗಳಿಸಿತ್ತು, ಎರಡನೇ ದಿನ ಅಂದರೆ ಶನಿವಾರ 22 ಕೋಟಿ ರೂಪಾಯಿ ಗಳಿಸಿದೆ. ಭಾನುವಾರದ ಬಳಿಕ ಸಿನಿಮಾದ ಕಲೆಕ್ಷನ್ ಕುಸಿಯುವ ಸಾಧ್ಯತೆ ದಟ್ಟವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




