25 ವರ್ಷ ಹಳೆ ದಾಖಲೆ ಮುರಿದ ‘ಧುರಂಧರ್’: ಏನದು ದಾಖಲೆ?
Dhurandhar movie: ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ‘ಕೆಜಿಎಫ್ 2’, ‘ಆರ್ಆರ್ಆರ್’ ಸಿನಿಮಾದ ಗಳಿಕೆಯನ್ನೂ ಸಹ ಈ ಸಿನಿಮಾ ಹಿಂದಿಕ್ಕಿದೆ. ಇದೀಗ ಕಳೆದ 25 ವರ್ಷಗಳಿಂದ ಯಾವ ಸಿನಿಮಾ ಸಹ ಮುರಿಯದ ದಾಖಲೆಯೊಂದನ್ನು ಇದೀಗ ‘ಧುರಂಧರ್’ ಸಿನಿಮಾ ಮುರಿದಿದೆ.

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಈಗಾಗಲೇ ಕೆಲವು ದೊಡ್ಡ ಸಿನಿಮಾಗಳ ಗಳಿಕೆಯ ದಾಖಲೆಗಳನ್ನು ಮುರಿದು ಹಾಕಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಕೆಜಿಎಫ್ 2’, ‘ಆರ್ಆರ್ಆರ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿದ್ದು, ‘ಪುಷ್ಪ 2’ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕುತ್ತಿದೆ. ‘ಧುರಂಧರ್’ ಸಿನಿಮಾ ಹೊಸ ಸಿನಿಮಾಗಳ ದಾಖಲೆಗಳನ್ನು ಮಾತ್ರವಲ್ಲ, ಹಳೆ ಸಿನಿಮಾಗಳ ದಾಖಲೆಗಳನ್ನೂ ಸಹ ಮುರಿಯುತ್ತಿದೆ. ಇದೀಗ 25 ವರ್ಷ ಹಳೆಯ ದಾಖಲೆಯೊಂದನ್ನು ‘ಧುರಧಂರ್’ ಸಿನಿಮಾ ಮುರಿದಿದೆ.
‘ಧುರಂಧರ್’ ಹಲವು ಹಿಂದಿ ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಅದರಲ್ಲೂ ಮೊದಲ ವಾರದ ಹೊರತಾಗಿ ಎರಡರಿಂದ ಎಂಟನೇ ವಾರದ ವರೆಗೆ ಪ್ರತಿ ವಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ್’. ಮೊದಲ ವಾರದ ಅತಿ ಹೆಚ್ಚು ಕಲೆಕ್ಷನ್ ದಾಖಲೆ ಶಾರುಖ್ ಖಾನ್ರ ‘ಜವಾನ್’ ಮತ್ತು ‘ಪುಷ್ಪ 2’ (ಹಿಂದಿ ಆವೃತ್ತಿ) ಬಳಿಯೇ ಇದೆ. ಇನ್ನು ಹಿಂದಿ ಸಿನಿಮಾವೊಂದು ಎಂಟನೇ ವಾರದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದ ದಾಖಲೆ 25 ವರ್ಷದ ಹಿಂದಿನ ಸಿನಿಮಾದ ಹೆಸರಿನಲ್ಲಿತ್ತು. ಆ ದಾಖಲೆಯನ್ನು ಮುರಿದಿದೆ ‘ಧುರಂಧರ್’.
ಸನ್ನಿ ಡಿಯೋನ್ ನಟನೆಯ ‘ಗದರ್: ಏಕ್ ಪ್ರೇಮ್ ಕಥ’ ಸಿನಿಮಾ ಎಂಟನೇ ವಾರ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿತ್ತು. 25 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಗದರ್’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ‘ಗದರ್’ ಬಳಿಕ ಹಿಂದಿಯ ಇನ್ಯಾವುದೇ ಸಿನಿಮಾ ಎಂಟನೇ ವಾರದಲ್ಲಿ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ಗಳಿಕೆ ಮಾಡಿದ್ದೇ ಇರಲಿಲ್ಲ. ಇದೀಗ ‘ಧುರಂಧರ್’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಆ ಮೂಲಕ ಎಂಟನೇ ವಾರದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ.
ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು
‘ಧುರಂಧರ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ವರೆಗೆ 1340 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ್’. ಮೊದಲ ಸ್ಥಾನದಲ್ಲಿ ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಇದೆ. ಆ ಸಿನಿಮಾ ಸುಮಾರು 2000 ಕೋಟಿ ಗಳಿಕೆ ಮಾಡಿತ್ತು. ಬಳಿಕ ‘ಬಾಹುಬಲಿ 2’ ಸಿನಿಮಾ ಇದೆ. ಆ ಸಿನಿಮಾ 1800 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಮೂರನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದ್ದು ಆ ಸಿನಿಮಾ 1700 ಕೋಟಿ ಗಳಿಕೆ ಮಾಡಿದೆ.
‘ಧುರಂಧರ್’ ಸಿನಿಮಾ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಆತ ಮಾಡುವ ಸಾಹಸಗಳ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




