ಹಿಜಾಬ್ ಧರಿಸಿ ಕಾಣಿಸಿಕೊಳ್ಳುತ್ತಿರುವ ಸ್ಟಾರ್ ನಟಿಯರು; ಕುತೂಹಲ ಹುಟ್ಟುಹಾಕಿವೆ ಈ ಪಾತ್ರಗಳು
ರಶ್ಮಿಕಾ ಮಂದಣ್ಣ, ಪರಿಣೀತಿ ಚೋಪ್ರಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್ ಮುಂತಾದ ನಟಿಯರು ಹಿಜಾಬ್ ಧರಿಸಿ ಪೋಸ್ ನೀಡಿದ್ದಾರೆ. ಅವರು ನಿಭಾಯಿಸುತ್ತಿರುವ ಪಾತ್ರಗಳ ಬಗ್ಗೆ ಕೌತುಕ ಮೂಡಿದೆ.
ಹಿಬಾಜ್ ಕುರಿತಾಗಿ ಆದ ವಿವಾದಗಳ (Hijab Controversy) ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಈ ವಿಚಾರಕ್ಕೆ ಇನ್ನೂ ಒಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕೆಲವರು ಹಿಜಾಬ್ ಪರವಾಗಿ ಮಾತನಾಡುತ್ತಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಿನಿಮಾದಲ್ಲಿ ಸ್ಟಾರ್ ನಟಿಯರು ಹಿಜಾಬ್ ಧರಿಸಿ ಕಾಣಿಸಿಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಈ ರೀತಿಯ ಪಾತ್ರಗಳ ಹಿಂದೆ ಯಾವ ಕಥೆ ಇದೆ ಎಂಬುದು ಸದ್ಯಕ್ಕಂತೂ ತಿಳಿದಿಲ್ಲ. ಆದರೆ ಫಸ್ಟ್ ಲುಕ್ ಪೋಸ್ಟರ್ಗಳ ಮೂಲಕ ಹಿಜಾಬ್ (Hijab) ಧರಿಸಿದ ನಟಿಯರು ಗಮನ ಸೆಳೆಯುತ್ತಿದ್ದಾರೆ. ಪ್ರಚಲಿತ ಟ್ರೆಂಡ್ನ ಲಾಭ ಪಡೆಯುವ ಸಲುವಾಗಿ ಈ ಗೆಟಪ್ ಧರಿಸಲಾಗುತ್ತಿದೆ ಎಂಬ ಆರೋಪವೂ ಕೆಲವರಿಂದ ಕೇಳಿಬರುತ್ತಿದೆ. ಸಿನಿಮಾದ ಕಥೆಗೆ ಮತ್ತು ಪಾತ್ರಕ್ಕೆ ತಕ್ಕಂತೆ ಕಾಸ್ಟ್ಯೂಮ್ ಇರುತ್ತದೆ ಎಂದು ಇನ್ನೂ ಕೆಲವರು ವಾದಿಸುತ್ತಿದ್ದಾರೆ. ಸ್ಟಾರ್ ನಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ದಿಯಾ ಮಿರ್ಜಾ, ಪರಿಣೀತಿ ಚೋಪ್ರಾ, ಫಾತಿಮಾ ಸನಾ ಶೇಖ್ ಮುಂತಾದ ನಟಿಯರು ಹಿಜಾಬ್ ಧರಿಸಿ ಪೋಸ್ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇವರು ನಟಿಸುತ್ತಿರುವ ಸಿನಿಮಾಗಳ ಬಗ್ಗೆಯೂ ಜನರಲ್ಲಿ ಕೌತುಕ ಮೂಡಿದೆ.
ಪರಿಣೀತಿ ಚೋಪ್ರಾ: ನಟಿ ಪರಿಣೀತಿ ಚೋಪ್ರಾ ಅವರು ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಹಿಮ ಪ್ರದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದರು. ಚಿತ್ರೀಕರಣದ ಸ್ಥಳ ಯಾವ ರೀತಿ ಇದೆ ಎಂಬುದನ್ನು ತಿಳಿಸಲು ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಅವರು ಹಿಜಾಬ್ ಧರಿಸಿರುವುದು ಕಾಣಿಸಿದೆ. ಅವರು ಯಾವ ಸಿನಿಮಾಕ್ಕಾಗಿ ಈ ಗೆಟಪ್ ಧರಿಸಿದ್ದಾರೆ ಎಂಬುದು ತಿಳಿಯಬೇಕಿದೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಹಿಜಾಬ್ಗಾಗಿ ಪಿಯು ಪರೀಕ್ಷೆ ಬಹಿಷ್ಕರಿಸಿದ 6 ವಿದ್ಯಾರ್ಥಿನಿಯರು
ಬುರ್ಕಾ ಧರಿಸಿ ಬೈಕ್ ಏರಿದ ದಿಯಾ ಮಿರ್ಜಾ: ದಿಯಾ ಮಿರ್ಜಾ ಅವರಿಗೆ ಬಾಲಿವುಡ್ನಲ್ಲಿ ಬೇಡಿಕೆ ಇದೆ. ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಜನಮನ ಗೆದ್ದಿದ್ದಾರೆ. ಈಗ ಅವರು ‘ಧಕ್ ಧಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರೊಂದು ಫೋಟೋ ಹಂಚಿಕೊಂಡರು. ಬುರ್ಕಾ ಧರಿಸಿ ಅವರು ಬೈಕ್ ಮೇಲೆ ಕುಳಿತಿದ್ದಾರೆ. ಈ ಚಿತ್ರವನ್ನು ನಟಿ ತಾಪ್ಸಿ ಪನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಪ್ರಂಜಲ್, ಆಯುಷ್ ಮಹೇಶ್ವರಿ ಕೂಡ ಕೈ ಜೋಡಿಸಿದ್ದಾರೆ.
View this post on Instagram
ಇದನ್ನೂ ಓದಿ: ಹಿಜಾಬ್ ಗೆಟಪ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್ ಮಿನಿಸ್ಟರ್’ ವಿಷಯ
ಕುತೂಹಲ ಮೂಡಿಸಿದ ರಶ್ಮಿಕಾ ಮಂದಣ್ಣ ಲುಕ್: ಏಪ್ರಿಲ್ 5ರಂದು ರಶ್ಮಿಕಾ ಮಂದಣ್ಣ ಅವರ ಜನ್ಮದಿನ. ಆ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್ ಆಯಿತು. ಆಫ್ರೀನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ಲುಕ್ ಪೋಸ್ಟರ್ನಲ್ಲಿ ಅವರು ಹಿಜಾಬ್ ಧರಿಸಿ ಪೋಸ್ ನೀಡಿರುವುದು ಹೈಲೈಟ್ ಆಗಿದೆ. ಈವರೆಗೂ ಬೇರೆ ಬೇರೆ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಲ್ಲಿ ಹೇಗೆ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳ ಮನದಲ್ಲಿ ಮೂಡಿದೆ.
ಫಾತಿಮಾ ಸನಾ ಶೇಖ್: ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿ ಮತ್ತು ಗೆಲುವು ಪಡೆದುಕೊಂಡ ನಟಿ ಫಾತಿಮಾ ಸನಾ ಶೇಖ್ ಅವರಿಗೆ ಒಳ್ಳೊಳ್ಳೆಯ ಆಫರ್ ಬರುತ್ತಿವೆ. ಇತ್ತೀಚೆಗೆ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆದ ‘ಮಾಡರ್ನ್ ಲವ್: ಮುಂಬೈ’ ಕಥಾ ಸಂಕಲನದಲ್ಲಿ ಕಾಶ್ಮೀರಿ ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದಾರೆ. ಅವರು ಕೂಡ ಹಿಬಾಜ್ ಧರಿಸಿ ಗಮನ ಸೆಳೆದಿದ್ದಾರೆ.
ನಟಿಯರು ಹಿಜಾಬ್ ಧರಿಸಿ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವುದು ಹೊಸ ವಿಚಾರವೇನೂ ಅಲ್ಲ. ಈ ಹಿಂದೆ ಕೂಡ ಅನೇಕ ನಟಿಯರು ಈ ರೀತಿಯ ಗೆಟಪ್ ಧರಿಸಿದ್ದುಂಟು. ಆದರೆ ಪ್ರಚಲಿತ ನಡೆಯುತ್ತಿರುವ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಇದು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.