AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ ತೆಲುಗು ಸಿನಿಮಾ ‘ಆಂಧ್ರ ಕಿಂಗ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?

Andhra King Taluka collections: ತೆಲುಗಿನಲ್ಲೂ ಅಭಿಮಾನಿಗಳನ್ನು ಹೊಂದಿರುವ ನಟ ಉಪೇಂದ್ರ, ಇತ್ತೀಚೆಗಷ್ಟೆ ‘ಆಂಧ್ರ ಕಿಂಗ್ ತಾಲೂಕ’ ಹೆಸರಿನ ತೆಲುಗಿನ ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾಕ್ಕೆ ರಾಮ್ ಪೋತಿನೇನಿ ನಾಯಕ. ಸಿನಿಮಾ ಬಿಡುಗಡೆ ಆಗಿ ಒಂದು ವಾರವಾಯ್ತು. ಅಂದಹಾಗೆ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಹಿಟ್ ಆಯ್ತ? ಅಥವಾ ಫ್ಲಾಫಾ?

ಉಪೇಂದ್ರ ತೆಲುಗು ಸಿನಿಮಾ ‘ಆಂಧ್ರ ಕಿಂಗ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?
Andhra King Taluka
ಮಂಜುನಾಥ ಸಿ.
|

Updated on: Dec 03, 2025 | 4:06 PM

Share

ಉಪೇಂದ್ರಗೆ (Upendra) ಕರ್ನಾಟಕದಲ್ಲಿ ಮಾತ್ರವಲ್ಲ ನೆರೆಯ ತೆಲುಗು ರಾಜ್ಯಗಳಲ್ಲಿಯೂ ಅಸಂಖ್ಯ ಅಭಿಮಾನಿಗಳಿದ್ದಾರೆ. ಕೆಲವಾರು ತೆಲುಗು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದು, ಅಲ್ಲಿಯೂ ಸಹ ಕೆಲ ಒಳ್ಳೆಯ ಸಿನಿಮಾ ಮತ್ತು ಪಾತ್ರಗಳನ್ನು ನೀಡಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ‘ಆಂಧ್ರ ಕಿಂಗ್’ ಹೆಸರಿನ ತೆಲುಗು ಸಿನಿಮಾನಲ್ಲಿ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಹಿಟ್ ಆಯ್ತ? ಅಥವಾ ಫ್ಲಾಪ್ ಆಯ್ತ?

ರಾಮ್ ಪೋತಿನೇನಿ ನಾಯಕನಾಗಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾನಲ್ಲಿ ಉಪೇಂದ್ರ ಅವರದ್ದು ಸಿನಿಮಾ ಸ್ಟಾರ್ ಪಾತ್ರ. ಭಾಗ್ಯಶ್ರೀ ಬೋರ್ಸೆ ಸಿನಿಮಾದ ನಾಯಕಿ. ಕಳೆದ ಗುರುವಾರ (ನವೆಂಬರ್ 27)ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಅಭಿಮಾನಿ ಹಾಗೂ ಒಬ್ಬ ಸ್ಟಾರ್ ನಟನ ನಡುವಿನ ಕತೆಯನ್ನು ಒಳಗೊಂಡಿತ್ತು. ಸಿನಿಮಾ ಬಿಡುಗಡೆ ಆದ ದಿನ ಎಲ್ಲೆಡೆ ಧನಾತ್ಮಕ ವಿಮರ್ಶೆಗಳು ಹರಿದಾಡಿದ್ದವು. ಸಿನಿಮಾ ನೋಡಿದವರು ಸಹ ಸಿನಿಮಾ ಚೆನ್ನಾಗಿದೆ ಎಂದೇ ಹೇಳಿದ್ದರು.

ಇದೀಗ ಸಿನಿಮಾ ಬಿಡುಗಡೆ ಆಗಿ ಏಳು ದಿನಗಳಾಗಿವೆ. ಈ ಏಳು ದಿನಗಳಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ 17.10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇತರೆ ಕೆಲವು ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ಇದು ಕಡಿಮೆಯೇ. ಆದರೆ ರಾಮ್ ಪೋತಿನೇನಿ ಅವರ ಈ ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಸಿದರೆ ಇದು ಒಳ್ಳೆಯ ಕಲೆಕ್ಷನ್. ಸಿನಿಮಾ ಕುಟುಂಬ ಪ್ರೇಕ್ಷಕರನ್ನು ನಿಧಾನಕ್ಕೆ ಚಿತ್ರಮಂದಿರದತ್ತ ಸೆಳೆಯುತ್ತಿದೆ. ಈ ಮಂಗಳವಾರವೂ ಸಹ ಒಂದು ಕೋಟಿಗೂ ಹೆಚ್ಚು ಮೊತ್ತವನ್ನು ಸಿನಿಮಾ ಗಳಿಕೆ ಮಾಡಿದೆ. ಸಿನಿಮಾದ ವರ್ಲ್ಡ್ ವೈಲ್ಡ್ ಕಲೆಕ್ಷನ್ ಸುಮಾರು 21 ಕೋಟಿ ರೂಪಾಯಿಗಳಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಉಪ್ಪಿ, ರಾಮ್ ನಟನೆಯ ‘ಆಂಧ್ರ ಕಿಂಗ್’ ಮೊದಲ ದಿನದ ಕಲೆಕ್ಷನ್ ಎಷ್ಟು?

ಆದರೆ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದ ಕಲೆಕ್ಷನ್​​ಗೆ ಈ ವಾರ ದೊಡ್ಡ ಪೆಟ್ಟು ಬೀಳಲಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕಾಗಿ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ದಾರಿ ಮಾಡಿ ಕೊಡಬೇಕಿದೆ. ಹಾಗಾಗಿ ಈ ಶುಕ್ರವಾರದ ಬಳಿಕ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿಯುವುದು ಖಾತ್ರಿ ಆಗಿದೆ. ಚಿತ್ರತಂಡ ಸಹ ಈಗಾಗಲೇ ಸಕ್ಸಸ್ ಮೀಟ್ ಮಾಡಿ ಪ್ರೇಕ್ಷಕರಿಗೆ ಧನ್ಯವಾದವನ್ನು ಸಹ ಹೇಳಿದೆ.

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಉಪೇಂದ್ರ ನಟನೆಯ ಏಳನೇ ತೆಲುಗು ಸಿನಿಮಾ. ಈ ಹಿಂದೆ ಅಲ್ಲು ಅರ್ಜುನ್, ವರುಣ್ ತೇಜ್ ಇನ್ನೂ ಕೆಲವು ಸ್ಟಾರ್ ನಟರುಗಳೊಡನೆ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ಸಿನಿಮಾಗಳ ನಿರ್ದೇಶನವನ್ನೂ ಸಹ ಉಪೇಂದ್ರ ಮಾಡಿದ್ದಾರೆ. ಚಿರಂಜೀವಿ ಅವರ ಸಿನಿಮಾ ನಿರ್ದೇಶನ ಮಾಡಬೇಕಿತ್ತು ಆದರೆ ಅದು ಆಗ ಸಾಧ್ಯವಾಗಿರಲಿಲ್ಲ. ಈಗ ಅವಕಾಶ ಸಿಕ್ಕರೆ ಖಂಡಿತ ಮಾಡುವುದಾಗಿ ಉಪ್ಪಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ