AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಬೆನ್ನಲ್ಲೆ ಅಭಿಮಾನಿಗಳಲ್ಲಿ ದುನಿಯಾ ವಿಜಯ್ ಮನವಿ

ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ ಅವರ ದಾಂಪತ್ಯ ಅಂತ್ಯವಾಗಿದೆ. ಸುದೀರ್ಘ ನ್ಯಾಯಾಲಯದ ಹೋರಾಟದ ಬಳಿಕ ವಿಚ್ಛೇದನ ಮಂಜೂರಾಗಿದೆ. ನಾಗರತ್ನ ಅವರೊಟ್ಟಿಗೆ ವಿಚ್ಛೇದನ ದೊರೆತ ಬೆನ್ನಲ್ಲೆ ನಟ, ನಿರ್ದೇಶಕ ದುನಿಯಾ ವಿಜಯ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಮನವಿಯೊಂದನ್ನು ಸಹ ಮಾಡಿದ್ದಾರೆ. ಏನದು ಮನವಿ? ಮಾಹಿತಿ ಇಲ್ಲಿದೆ...

ವಿಚ್ಛೇದನದ ಬೆನ್ನಲ್ಲೆ ಅಭಿಮಾನಿಗಳಲ್ಲಿ ದುನಿಯಾ ವಿಜಯ್ ಮನವಿ
Duniya Vijay
ಮಂಜುನಾಥ ಸಿ.
|

Updated on: Sep 03, 2026 | 1:44 PM

Share

ಮುಖ್ಯಾಂಶಗಳು

  • ದುನಿಯಾ ವಿಜಯ್ ಅವರಿಗೆ ವಿಚ್ಛೇದನ ದೊರೆತಿದೆ
  • ನಾಗರತ್ನ ಅವರೊಟ್ಟಿಗಿನ ಸುದೀರ್ಘ ದಾಂಪತ್ಯ ಅಂತ್ಯವಾಗಿದೆ
  • ವಿಚ್ಛೇದನದ ಬೆನ್ನಲ್ಲೆ ವಿಜಿ, ಹೇಳಿಕೆ ಹಂಚಿಕೊಂಡಿದ್ದಾರೆ.

ನಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ಹಾಗೂ ಅವರ ಪತ್ನಿಯ ನಡುವೆ ನಡೆದ ಸುದೀರ್ಘ ನ್ಯಾಯಾಲಯದ ಹೊರಾಟ ಇದೀಗ ಅಂತ್ಯವಾಗಿದ್ದು, ಇಬ್ಬರ ವಿಚ್ಛೇದನಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ದುನಿಯಾ ವಿಜಯ್ ಅವರು ಎರಡು ಕೋಟಿ ರೂಪಾಯಿ ಹಣವನ್ನು ಜೀವನಾಂಶವನ್ನು ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ಬೆನ್ನಲ್ಲೆ ದುನಿಯಾ ವಿಜಯ್ ಅವರು ಹೇಳಿಕೆಯೊಂದನ್ನು ಹಂಚಿಕೊಂಡಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ ಎಂದಿದ್ದಾರೆ.

‘ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ. ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ನನ್ನ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ, ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಡಿ.ಕೆ. ಸಿಂಗ್ ಹಾಗೂ ಶ್ರೀ ಶಾಂತಿಭೂಷಣ್ ಅವರ ಆದೇಶಕ್ಕೆ ತಲೆಬಾಗಿದ್ದೇನೆ. ಈ ಆದೇಶಕ್ಕೆ ನನ್ನ ಗೌರವಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನ ವಕೀಲರಾದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದಿದ್ದಾರೆ ದುನಿಯಾ ವಿಜಯ್.

‘ಈ ವಿಚಾರಕ್ಕೆ (ವಿಚ್ಛೇದನ) ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿದ್ದಾರೆ; ಅವರಿಗೆ ಯಾವುದೇ ಮುಜುಗರವಾಗಬಾರದು. ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ, ನನ್ನ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದು, ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಹೀಗೆಯೇ ಇರಲಿ’ ಎಂದಿದ್ದಾರೆ ದುನಿಯಾ ವಿಜಯ್.

ಇದನ್ನೂ ಓದಿ:ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು

ದುನಿಯಾ ವಿಜಯ್ ಹಾಗೂ ನಾಗರತ್ನ ಅವರು 1999 ರಲ್ಲಿ ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾನೆ. ಇವರ ದಾಂಪತ್ಯದಲ್ಲಿ ಕೆಲ ಸಮಸ್ಯೆಗಳು ಉಂಟಾಗಿದ್ದು, ಅದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯೂ ಸಹ ಆಗಿತ್ತು. ಬಳಿಕ 2013ರಲ್ಲಿ ದುನಿಯಾ ವಿಜಯ್ ಮೊದಲ ಬಾರಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಒಂದು ವರ್ಷದ ಬಳಿಕ ಆ ಅರ್ಜಿಯನ್ನು ಹಿಂಪಡೆದಿದ್ದರು. ಬಳಿಕ 2018ರಲ್ಲಿ ಮಾನಸಿಕ ಕ್ರೌರ್ಯ ಆಧಾರದ ಮೇಳೆ ವಿಜಯ್ ಮತ್ತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. 2024ರಲ್ಲಿ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಆದೇಶವನ್ನು ಪ್ರಶ್ನಿಸಿ ವಿಜಯ್, ಹೈಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದೀಗ ಆದೇಶ ಹೊರಬಿದ್ದಿದ್ದು, ವಿಜಯ್ ಹಾಗೂ ನಾಗರತ್ಯ ಅವರಿಗೆ ವಿಚ್ಛೇದನ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us