ಅರ್ಮಾನ್ ಮಲಿಕ್ ನಿಶ್ಚಿತಾರ್ಥ; ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆ ಉಂಗುರ ಬದಲಿಸಿಕೊಂಡ ಗಾಯಕ
ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಅವರ ನಿಶ್ಚಿತಾರ್ಥವು ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆ ನೆರವೇರಿದೆ. ಈ ಸಂತಸದ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಎಂಗೇಜ್ಮೆಂಟ್ ಫೋಟೋಗಳು ವೈರಲ್ ಆಗಿವೆ. ವರುಣ್ ಧವನ್, ರಿಯಾ ಚಕ್ರವರ್ತಿ, ಟೈಗರ್ ಶ್ರಾಫ್, ಇಶಾ ಗುಪ್ತಾ, ದಿವ್ಯಾ ತ್ರಿಪಾಠಿ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
ಹಲವಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಖ್ಯಾತ ಗಾಯಕ ಅರ್ಮಾನ್ ಮಲಿಕ್ (Armaan Malik) ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಆಗಸ್ಟ್ 28) ಅವರು ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಆಶ್ನಾ ಶ್ರಾಫ್ ಅವರು ಫ್ಯಾಷನ್ ಇನ್ಫ್ಲೂಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಜೋಡಿ ಈಗ ಸಪ್ತಪದಿ ತುಳಿಯಲು ಸಜ್ಜಾಗಿದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ (Armaan Malik Engagement) ನೆರವೇರಿಸಲಾಗಿದೆ. ಈ ಖುಷಿಯ ಸಂದರ್ಭದ ಫೋಟೋಗಳನ್ನು ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್ (Aashna Shroff) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ಈ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಅರ್ಮಾನ್ ಮಲಿಕ್ ಅವರು ಬಹುಬೇಡಿಕೆಯ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲೂ ಅವರು ಹಾಡಿದ ಅನೇಕ ಗೀತೆಗಳು ಜನಮೆಚ್ಚುಗೆ ಗಳಿಸಿವೆ. ಸ್ಯಾಂಡಲ್ವುಡ್ನಲ್ಲಿ ಅರ್ಮಾನ್ ಮಲಿಕ್ ಅವರು ಮೊದಲು ಧ್ವನಿ ನೀಡಿದ್ದು ‘ಸಿದ್ಧಾರ್ಥ’ ಸಿನಿಮಾದ ಹಾಡುಗಳಿಗೆ. ನಂತರ ‘ಮುಂಗಾರು ಮಳೆ 2’, ‘ಚಕ್ರವರ್ತಿ’, ‘ಹೆಬ್ಬಲಿ’, ‘ಕರಿಯ 2’, ‘ಪ್ರೇಮ ಬರಹ’, ‘ಅಮರ್’, ‘ಪೈಲ್ವಾನ್’, ‘ಏಕ್ ಲವ್ ಯಾ’ ಮುಂತಾದ ಸಿನಿಮಾಗಳ ಹಾಡುಗಳಿಗೆ ಧ್ವನಿ ನೀಡುವ ಮೂಲಕ ಅರ್ಮಾನ್ ಮಲಿಕ್ ಅವರು ಕನ್ನಡ ಸಿನಿಪ್ರಿಯರ ಮನ ಗೆದ್ದರು. ಅರ್ಮಾನ್ ಕೈ ಹಿಡಿಯಲಿರುವ ಆಶ್ನಾ ಶ್ರಾಫ್ ಅವರು ಫ್ಯಾಷನ್ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದಾರೆ. 28 ವರ್ಷದ ಇವರು ಇನ್ಸ್ಟಾಗ್ರಾಂನಲ್ಲಿ 9 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಅರ್ಮಾನ್ ಮಲಿಕ್ ಇನ್ಸ್ಟಾಗ್ರಾಂ ಪೋಸ್ಟ್
View this post on Instagram
ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್ ಅವರ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಷಯವನ್ನು ತಿಳಿಸಲಾಗಿದೆ. ಈ ಜೋಡಿ ಹಕ್ಕಿಗಳು ಪರಸ್ಪರ ಉಂಗುರ ಬದಲಾಯಿಸಿಕೊಂಡಿವೆ. ಅರ್ಮಾನ್ ಮಲಿಕ್ ಅವರು ಮಂಡಿಯೂರಿ ಆಶ್ನಾ ಶ್ರಾಫ್ಗೆ ಉಂಗುರ ತೊಡಿಸಿದ್ದಾರೆ. ‘And our forever has only just begun’ ಎಂಬ ಕ್ಯಾಪ್ಷನ್ ಜೊತೆಯಲ್ಲಿ ಅರ್ಮಾನ್ ಮತ್ತು ಆಶ್ನಾ ಅವರು ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ‘ಇದು ಮುದ್ದಾದ ಜೋಡಿ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಿಂದ ಶುಭಾಶಯಗಳ ಸುರಿಮಳೆ:
ಅರ್ಮಾನ್ ಮಲಿಕ್ ಅವರು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಜೊತೆ ಸ್ನೇಹ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅನೇಕ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ. ವರುಣ್ ಧವನ್, ಇಶಾನ್ ಖಟ್ಟರ್, ರಿಯಾ ಚಕ್ರವರ್ತಿ, ಟೈಗರ್ ಶ್ರಾಫ್, ತಾರಾ ಸುತಾರಿಯಾ, ಇಶಾ ಗುಪ್ತಾ, ದಿವ್ಯಾ ತ್ರಿಪಾಠಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಅರ್ಮಾನ್ ಮಲಿಕ್ ಅವರು ಹಾಡಿದ ಕನ್ನಡದ ಈ ಟಾಪ್ ಐದು ಹಾಡುಗಳನ್ನು ಕೇಳಿದ್ದೀರಾ?
ತಮ್ಮ ಸುಮಧುರವಾದ ಕಂಠದ ಮೂಲಕ ಅರ್ಮಾನ್ ಮಲಿಕ್ ಅವರ ಪ್ರಸಿದ್ಧಿ ಪಡೆದಿದ್ದಾರೆ. ಈಗ ಅವರಿಗೆ 28 ವರ್ಷ ವಯಸ್ಸು. 4ನೇ ವಯಸ್ಸಿನಲ್ಲೇ ಅವರು ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. 2006ರಲ್ಲಿ ‘ಸರೆಗಮಪ ಲಿಟ್ಲ್ ಚಾಂಪ್ಸ್’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿದರು. ಬಾಲಕನಾಗಿದ್ದಾಗಲೇ ಹಲವು ಗೀತೆಗಳನ್ನು ಅವರು ಹಾಡಿದರು. ಕೆಲವು ಪಾತ್ರಗಳಿಗೆ ಡಬ್ಬಿಂಗ್ ಕೂಡ ಮಾಡಿದರು. ಹಿಂದಿ, ತೆಲುಗು, ಇಂಗ್ಲಿಷ್, ಕನ್ನಡ, ಬೆಂಗಾಲಿ, ಮರಾಠಿ, ಗುಜರಾತಿ, ಪಂಜಾಬಿ, ಉರ್ದು ಹಾಗೂ ಮಲಯಾಳಂ ಭಾಷೆಯ ಗೀತೆಗಳನ್ನು ಅರ್ಮಾನ್ ಮಲಿಕ್ ಹಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.