ಆ ಒಂದು ಸೀರೆಗಾಗಿ ನಾನು ರಾಷ್ಟ್ರ ಪ್ರಶಸ್ತಿ ಪಡೆಯಬೇಕು: ಸ್ಪೆಷಲ್ ಕಾರಣ ತಿಳಿಸಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅವರು ಪ್ರತಿಭಾವಂತ ನಟಿ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಆದರೆ ರಾಷ್ಟ್ರ ಪ್ರಶಸ್ತಿ ಪಡೆಯುವ ಕನಸು ಇನ್ನೂ ಈಡೇರಿಲ್ಲ. ಆ ಬಗ್ಗೆ ಅವರು ಸಂದರ್ಶನವೊಂದಲ್ಲಿ ಮಾತಾಡಿದ್ದಾರೆ. ನ್ಯಾಷನಲ್ ಅವಾರ್ಡ್ ಎಂಬುದು ತಮಗೆ ಯಾಕೆ ತುಂಬ ಮುಖ್ಯ ಎಂದು ಅವರು ವಿವರಿಸಿದ್ದಾರೆ.

ನಟಿ ಸಾಯಿ ಪಲ್ಲವಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಸ್ವತಃ ಸಾಯಿ ಪಲ್ಲವಿ ಕೂಡ ಅದರ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅಚ್ಚರಿ ಏನೆಂದರೆ, ಒಂದು ವಿಶೇಷವಾದ ಸೀರೆಯ ಸಲುವಾಗಿ ತಾವು ನ್ಯಾಷನಲ್ ಅವಾರ್ಡ್ ಪಡೆಯಬೇಕು ಎಂದು ಸಾಯಿ ಪಲ್ಲವಿ ಅವರು ಹೇಳಿದ್ದಾರೆ. ಅಂದಹಾಗೆ, ಆ ಸೀರೆಯನ್ನು ಕೊಟ್ಟಿರುವುದು ಅವರ ಅಜ್ಜಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಬಗ್ಗೆ ಸಾಯಿ ಪಲ್ಲವಿ ಅವರು ಮಾತನಾಡಿದ್ದಾರೆ.
ಅಭಿಮಾನಿಗಳ ನಿರೀಕ್ಷೆಯಂತೆ ‘ಗಾರ್ಗಿ’ ಸಿನಿಮಾದಲ್ಲಿನ ನಟನೆಗೆ ಸಾಯಿ ಪಲ್ಲವಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಆದರೆ ಅದು ಮಿಸ್ ಆಯಿತು. ಮುಂದೊಂದು ದಿನ ಖಂಡಿತವಾಗಿಯೂ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂಬುದು ಫ್ಯಾನ್ಸ್ ನಂಬಿಕೆ. ಆ ದಿನ ಸಾಯಿ ಪಲ್ಲವಿ ಅವರು ಅಜ್ಜಿ ಕೊಟ್ಟ ಸೀರೆಯನ್ನು ಧರಿಸಲಿದ್ದಾರಂತೆ.
ಸಾಯಿ ಪಲ್ಲವಿ ಅವರಿಗೆ 21 ವರ್ಷ ವಯಸ್ಸಾಗಿದ್ದಾಗ ಅವರ ಅಜ್ಜಿ ಒಂದು ಸೀರೆಯನ್ನು ನೀಡಿದ್ದರು. ಮದುವೆಯ ದಿನ ಆ ಸೀರೆ ಧರಿಸಬೇಕು ಎಂದು ಅಜ್ಜಿ ಹೇಳಿದ್ದರು. ಆದರೆ ಒಂದು ವಿಶೇಷ ಸಂದರ್ಭದಲ್ಲಿ ಆ ಸೀರೆಯನ್ನು ಧರಿಸಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದೇ ಆ ವಿಶೇಷ ಸಂದರ್ಭ. ಹಾಗಾಗಿ ಆ ದಿನ ಬರಲಿ ಎಂದು ಅವರು ಕಾಯುತ್ತಿದ್ದಾರೆ. ಪ್ರಶಸ್ತಿ ಪಡೆಯುವವರೆಗೂ ಆ ಒತ್ತಡ ತಮ್ಮ ಮೇಲೆ ಇದ್ದೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಬೇರೆ ನಟಿಯರಂತೆ ಸಾಯಿ ಪಲ್ಲವಿ ಅವರು ಗ್ಲಾಮರ್ ನಂಬಿಕೊಂಡು ಬಂದಿಲ್ಲ. ನಟನೆಯ ಬಲದಿಂದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ದೇಶಾದ್ಯಂತ ಅವರಿಗೆ ಖ್ಯಾತಿ ಇದೆ. ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್ನಲ್ಲಿ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈ ವರ್ಷ ಅವರು ನಟಿಸಿದ ತೆಲುಗಿನ ‘ತಂಡೇಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಅವರು ಬಾಲಿವುಡ್ಗೂ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: ‘ತಾಂಡೇಲ್ ಗೆಲ್ಲುತ್ತೆ ಎಂದು ಈ ವ್ಯಕ್ತಿಗೆ ಮೊದಲೇ ಗೊತ್ತಿತ್ತು’: ಸಾಯಿ ಪಲ್ಲವಿ
ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾಗೆ ಸಾಯಿ ಪಲ್ಲವಿ ಅವರು ನಾಯಕಿ ಆಗಿದ್ದಾರೆ. ಹಿಂದಿಯಲ್ಲಿ ಅದು ಅವರ ಮೊದಲ ಸಿನಿಮಾ ಆಗಲಿದೆ. ಅದರ ಜೊತೆಗೆ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಸಾಯಿ ಪಲ್ಲವಿ ಅವರು ಅಭಿನಯಿಸುತ್ತಿದ್ದು, ಸೀತೆಯ ಪಾತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಹೈಪ್ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.